ಚೆನ್ನೈ: ದಶಕಗಳ ಹಿಂದೆ ನಡೆದ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ದಕ್ಷಿಣ ಭಾರತದ ಪ್ರಸಿದ್ಧ ಹೋಟೆಲ್ ಸರವಣ ಭವನ ಸಮೂಹದ ಸಂಸ್ಥಾಪಕ ಪಿ.ರಾಜಗೋಪಾಲ್(74) ಅವರು ಗುರುವಾರ ಬೆಳಿಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
"ದೋಸಾ ಕಿಂಗ್" ಎಂದೇ ಕರೆಯಲ್ಪಡುತ್ತಿದ್ದ ರಾಜಗೋಪಾಲ್ ಅವರಿಗೆ ಹೃದಯಾಘಾತದ ಬಳಿಕ ಜೈಲಿನ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ಕಾರಣ ಮದ್ರಾಸ್ ಹೈಕೋರ್ಟ್ನ ಆದೇಶದ ಮೇರೆಗೆ ಸರ್ಕಾರಿ ಸ್ಟಾನ್ಲಿ ಆಸ್ಪತ್ರೆಯಿಂದ ಇಂದು ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬೆಳಿಗ್ಗೆ10 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ತಮ್ಮ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದ ಪ್ರಿನ್ಸ್ ಶಾಂತಕುಮಾರ್ ಅವರ ಪತ್ನಿಯ ಜೊತೆ ರಾಜಗೋಪಾಲ್ ಅಕ್ರಮ ಸಂಬಂಧ ಹೊಂದಿದ್ದರು. 2001ರಲ್ಲಿ ಆಕೆಯನ್ನು ಮದುವೆಯಾಗುವ ಸಲುವಾಗಿ ಪ್ರಿನ್ಸ್ ಶಾಂತಕುಮಾರ್ ಅವರನ್ನು ಕೊಲೆ ಮಾಡಿಸಿದ್ದರು ಎಂಬ ಪ್ರಕರಣದಲ್ಲಿ ಸೆಷನ್ಸ್ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತ್ತು. ಸುಪ್ರೀಂ ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿದರೂ ಸಹ ಪ್ರಯೋಜನವಾಗಲಿಲ್ಲ.
ಸೆಷನ್ಸ್ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿದ್ದ ಸುಪ್ರೀಂಕೋರ್ಟ್ ಜುಲೈ 7 ರೊಳಗೆ ಶಿಕ್ಷೆ ಅನುಭವಿಸಲು ಸಿದ್ಧರಾಗುವಂತೆ ಆದೇಶಿಸಿತ್ತು. ಈ ಬೆನ್ನಲ್ಲೇ ಜುಲೈ 9ರಂದು ಆಂಬುಲೆನ್ಸ್ ನಲ್ಲಿ ಚೆನ್ನೈನ ಸೆಷನ್ಸ್ ಕೋರ್ಟ್ಗೆ ಆಗಮಿಸಿದ್ದ ರಾಜಗೋಪಾಲ್ ಅವರನ್ನು, ನೇರವಾಗಿ ಸ್ಟಾನ್ಲಿ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ.