ಮೈಸೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಜೆಡಿಎಸ್-ಕಾಂಗ್ರೆಸ್ ಶಾಸಕರ ನಡೆಯನ್ನು ನರಸಿಂಹ ರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ತೀವ್ರವಾಗಿ ಖಂಡಿಸಿದ್ದಾರೆ.
ಇಂದಿಲ್ಲಿ ಸುದ್ದಿಗಾರಿಗೆ ಪ್ರತಿಕ್ರಿಯಿಸಿದ ಅವರು, ರಾಜೀನಾಮೆ ಮೂಲಕ ಸಿದ್ಧಾಂತಗಳನ್ನು ಬಲಿಕೊಟ್ಟು ಏನು ಸಾಧಿಸಿಕೊಳ್ಳಲು ಹೊರಟಿದ್ದೀರಿ ಎಂದು ಶಾಸಕರನ್ನು ಪ್ರಶ್ನಿಸಿದ್ದಾರಲ್ಲದೆ, ರಾಜೀನಾಮೆ ಕೊಟ್ಟಿರುವ ಶಾಸಕರು ಹೇಡಿಗಳು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಸಕರು ತಮ್ಮ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕಿತ್ತು. ಆಗ ಇಂಥ ಸನ್ನಿವೇಶ ಎದುರಾಗುತ್ತಿರಲಿಲ್ಲ, ಕೇವಲ ಬಾಯಿ ಮಾತಿಗೆ ಜಾತ್ಯತೀತ ಶಕ್ತಿಗಳು ಒಂದಾಗಿವೆ ಎಂದು ಹೇಳುವುದಲ್ಲ. ಎಲ್ಲರೂ ಕುಳಿತು ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಚರ್ಚೆ ಮಾಡಬೇಕಿತ್ತು. ಅದು ಆಗಲಿಲ್ಲ. ಎಲ್ಲರಲ್ಲಿದ್ದ ಅಸಮಧಾನ ಈಗ ಬಹಿರಂಗವಾಗಿದೆ ಅಷ್ಟೇ ಎಂದು ಹೇಳಿದರು.
ಮುಂದುವರೆದು ಮಾತನಾಡುತ್ತಾ, ನಾನು ಮಾರಾಟದ ವಸ್ತುವಲ್ಲ, ಆದರೆ ರಾಜೀನಾಮೆಗೆ ನನ್ನ ವಿರೋಧವಿದೆ. ಶಾಸಕರು ಬೆದರಿಕೆಗಾಗಿ ರಾಜೀನಾಮೆ ಕೊಡಲು ಮುಂದಾಗಿದ್ದಾರೋ ಅಥವಾ ನಿಜವಾಗಲೂ ರಾಜೀನಾಮೆ ಕೊಟ್ಟಿದ್ದಾರೋ ಎಂಬುದು ಮುಂದಿನ ದಿನಗಳಲ್ಲಿ ತಿಳಿಯುತ್ತದೆ ಎಂದಿದ್ದಾರೆ.