ನವದೆಹಲಿ: ಅಫ್ಘಾನಿಸ್ತಾನ ಬ್ಯಾಟ್ಸ್ಮನ್ ಇಕ್ರಮ್ ಅಲಿ ಖಿಲ್ ಗುರುವಾರದಂದು ವೆಸ್ಟ್ ಇಂಡೀಸ್ ವಿರುದ್ಧ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ವಿಶ್ವಕಪ್ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.
ಅಷ್ಟಕ್ಕೂ ಅವರು ಅಳಿಸಿ ಹಾಕಿರುವ ದಾಖಲೆ ಯಾವುದು ಅಂತೀರಾ ? ಸಚಿನ್ ತೆಂಡೂಲ್ಕರ್ 1992 ರಲ್ಲಿ ಜಿಂಬಾಬ್ವೆ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ 18 ವರ್ಷ ಮತ್ತು 318 ದಿನಗಳ ವಯಸ್ಸಿನಲ್ಲಿ 81 ರನ್ ಗಳಿಸಿದ್ದರು. ಈಗ ಅಫ್ಘಾನಿಸ್ತಾನ ಬ್ಯಾಟ್ಸ್ಮನ್ ಇಕ್ರಮ್ ಅಲಿ ಖಿಲ್ 18 ವರ್ಷ ಮತ್ತು 278 ದಿನಗಳಲ್ಲಿ 86 ರನ್ ಗಳಿಸುವ ಮೂಲಕ ನೂತನ ದಾಖಲೆ ಮಾಡಿದರು.
ಮೊಹಮ್ಮದ್ ಶಹಜಾದ್ ಅವರು ಗಾಯಗೊಂಡ ಹಿನ್ನಲೆಯಲ್ಲಿ ಇಕ್ರಮ್ ಅಲಿ ಅಫ್ಘಾನಿಸ್ತಾನ ತಂಡದಲ್ಲಿ ಸ್ಥಾನ ಪಡೆದಿದ್ದರು. ಇವರ ನೆಚ್ಚಿನ ಆಟಗಾರ ಶ್ರೀಲಂಕಾದ ಮಾಜಿ ನಾಯಕ ಕುಮಾರ್ ಸಂಗಕ್ಕಾರ ಅಂತೆ, ಆದ್ದರಿಂದ ಅವರನ್ನು ಅನುಕರಿಸುವುದಾಗಿ ಹೇಳಿದ್ದಾರೆ. 'ಕುಮಾರ್ ಸಂಗಕ್ಕಾರ ಯಾವಾಗಲೂ ನನ್ನ ಮನಸ್ಸಿನಲ್ಲಿರುತ್ತಾರೆ 'ಎಂದು ಹೇಳಿದ್ದಾರೆ.
ಇದೇ ವೇಳೆ ಸಚಿನ್ ತೆಂಡೂಲ್ಕರ್ ದಾಖಲೆ ಮುರಿದಿರುವುದಕ್ಕೆ ಪ್ರತಿಕ್ರಿಯಿಸಿದ ಇಕ್ರಮ್ ಅಲಿ ಖಿಲ್ 'ಸಚಿನ್ ಅವರಂತಹ ದಂತಕಥೆಯ ದಾಖಲೆಯನ್ನು ಮುರಿದಿರುವುದಕ್ಕೆ ನನಗೆ ತುಂಬಾ ಹೆಮ್ಮೆ ಇದೆ. ಇದು ನನಗೆ ತುಂಬಾ ಸಂತೋಷ ತಂದಿದೆ" ಎಂದು ಅವರು ಹೇಳಿದರು.18 ವರ್ಷದ ಈ ಆಟಗಾರ ಅಫ್ಘಾನಿಸ್ತಾನ ಪರ ಒಂಬತ್ತು ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದು, 24.67 ಸರಾಸರಿಯಲ್ಲಿ 148 ರನ್ ಗಳಿಸಿದ್ದಾರೆ.