ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಹುದ್ದೆಯನ್ನು ರಾಹುಲ್ ಗಾಂಧಿ ನಿರಾಕರಿಸಿದ ಬೆನ್ನಲ್ಲೇ ಈಗ ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ್ ಖರ್ಗೆ ಅಥವಾ ಮಹಾರಾಷ್ಟ್ರದ ಸುಶೀಲ್ ಕುಮಾರ್ ಶಿಂಧೆ ನಡುವೆ ಯಾರನ್ನಾದರೂ ನೇಮಕ ಮಾಡಬಹುದು ಎಂದು ಕಾಂಗ್ರೆಸ್ ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ಲೋಕಸಭಾ ಚುನಾವಣಾ ಸೋಲಿನ ಜವಾಬ್ದಾರಿಯನ್ನು ತೆಗೆದುಕೊಂಡು ರಾಜೀನಾಮೆ ನೀಡುವ ನಿರ್ಧಾರದ ಬಗ್ಗೆ ರಾಹುಲ್ ಗಾಂಧಿ ಪೋಸ್ಟ್ ಮಾಡಿದ್ದರಿಂದ ಈಗ ಈ ಹೆಸರುಗಳು ಹೊರಬಿದ್ದಿವೆ ಎನ್ನಲಾಗಿದೆ. ಒಂದು ವೇಳೆ ನೇಮಕ ಮಾಡಿದ್ದೇ ಆದಲ್ಲಿ ಇತ್ತೀಚಿನ ವರ್ಷಗಳಲ್ಲಿ ಪಿ.ವಿ.ನರಸಿಂಹ ರಾವ್ ಮತ್ತು ಸೀತಾರಾಮ್ ಕೇಸರಿ ನಂತರ ಮೂರನೇ ಬಾರಿ ನೆಹರೂ-ಗಾಂಧಿ ಕುಟುಂಬದ ಹೊರಗಿನ ವ್ಯಕ್ತಿಯೊಬ್ಬರನ್ನು ಅಧ್ಯಕ್ಷರಾಗಿ ನೇಮಕ ಮಾಡಿದ ಹಾಗೆ ಆಗುತ್ತದೆ.
ಆದರೆ ಈಗ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಕ ಮಾಡುವ ಅಂತಿಮ ತೀರ್ಮಾನವು ರಾಹುಲ್ ಗಾಂಧಿ, ಪಕ್ಷದ ಮಾಜಿ ಮುಖ್ಯಸ್ಥೆ ಸೋನಿಯಾ ಗಾಂಧಿ ಮತ್ತು ಇತ್ತೀಚಿಗಷ್ಟೇ ರಾಜಕೀಯಕ್ಕೆ ಸೇರಿದ ಪ್ರಿಯಾಂಕಾ ಗಾಂಧಿ ವಾದ್ರಾ ಅವರದ್ದಾಗಿರುತ್ತದೆ ಎಂದು ಮೂಲಗಳು ಹೇಳಿವೆ.
ಹಿಂದಿನ ಲೋಕಸಭೆಯಲ್ಲಿ ಕಾಂಗ್ರೆಸ್ ನೇತೃತ್ವ ವಹಿಸಿದ್ದ ಮಲ್ಲಿಕಾರ್ಜುನ್ ಖರ್ಗೆ, ಮೋದಿ ಸರ್ಕಾರದ ವಿರುದ್ಧದ ಆರೋಪಗಳನ್ನು ಸಮರ್ಥವಾಗಿ ಮಂಡಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಅವರು ಬಿಜೆಪಿ ಅಭ್ಯರ್ಥಿ ವಿರುದ್ಧ ಸೋಲನ್ನು ಅನುಭವಿಸಿದ್ದರು. ಇನ್ನು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತು ಮಾಜಿ ಕೇಂದ್ರ ಸಚಿವರಾದ ಸುಶೀಲ್ ಕುಮಾರ್ ಶಿಂಧೆ (77) ಅವರ ಹೆಸರು ಕೂಡ ಕಾಂಗ್ರೆಸ್ ಮುಖ್ಯಸ್ಥ ಹುದ್ದೆಗೆ ಕೇಳಿ ಬಂದಿದೆ. ಈಗ ರಾಹುಲ್ ಗಾಂಧಿ ತಮ್ಮ ರಾಜೀನಾಮೆ ನಿರ್ಧಾರಕ್ಕೆ ಬದ್ದವಾದ ಹಿನ್ನಲೆಯಲ್ಲಿ ನೂತನ ಅಧ್ಯಕ್ಷರ ಆಯ್ಕೆ ಒಂದು ವಾರದೊಳಗೆ ಆಗಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.