ಬೆಂಗಳೂರು: ಜೆಡಿಎಸ್ ಯಾವುದೇ “ಕುಟುಂಬದ ಆಸ್ತಿ” ಅಲ್ಲ. ತಮ್ಮದೇ ನಿಜವಾದ ಜೆಡಿಎಸ್, ನಾನೇ ನಿಜವಾದ ಜೆಡಿಎಸ್ ಅಧ್ಯಕ್ಷ. ನಮ್ಮ ಬೆಂಬಲ ಎನ್‍ಡಿಎಗೆ ಅಲ್ಲ, ಬದಲಾಗಿ ಇಂಡಿಯಾ ಒಕ್ಕೂಟಕ್ಕೆ ಎಂದು ಹೇಳಿದ್ದ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ. ಇಕ್ಕಟ್ಟಿಗೆ ಸಿಲುಕಿಸುವ ಹೇಳಿಕೆ ನೀಡುವ ಮೂಲಕ ಸಿಎಂ ಇಬ್ರಾಹಿಂ ಇದೀಗ ದಳಪತಿಗಳಿಗೆ ನುಂಗಲಾರದ ತುತ್ತಾಗಿದ್ದಾರೆ. ಈ ಬೆನ್ನಲ್ಲೇ ಗುರುವಾರ ಜೆಪಿ ಭವನದಲ್ಲಿ ಜೆಡಿಎಸ್ ರಾಜ್ಯ ಕೌನ್ಸಿಲ್ ಸಭೆ ಹಾಗೂ ಶಾಸಕಾಂಗ ಪಕ್ಷದ ಸಭೆಯನ್ನು ಕರೆದಿರುವುದು ಕುತೂಹಲಕ್ಕೆ ಕಾರಣವಾಗಿದೆ.
ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ನೇತೃತ್ವದಲ್ಲಿ ಜೆಡಿಎಸ್ ಕೌನ್ಸಿಲ್ ಸಭೆ ನಡೆಯಲಿದೆ. ಬಳಿಕ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಲ್‍ಪಿ ಸಭೆ ನಡೆಯಲಿದೆ. ಈ ಸಭೆಯಲ್ಲೂ ಸದ್ಯದ ರಾಜಕೀಯ ಬೆಳವಣಿಗೆ ಹಾಗೂ ಪಕ್ಷದ ಆಂತರಿಕ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಯಲಿದೆ.
ಇದನ್ನೂ ಓದಿ: ಆಧಾರ ರಹಿತ ಆರೋಪ BJP ನಾಯಕರ ಚಾಳಿ ಆಗಿದೆ
ಸಿಎಂ ಇಬ್ರಾಹಿಂ ವಿರುದ್ಧ ಕ್ರಮ?
ರಾಜ್ಯ ಕೌನ್ಸಿಲ್ ಸಭೆ ಹಾಗೂ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿಎಂ ಇಬ್ರಾಹಿಂ ವಿರುದ್ಧ ಕ್ರಮದ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ. ತಮ್ಮ ಮುಂದಿನ ನಡೆಯ ಬಗ್ಗೆ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ್ದ ಸಿಎಂ ಇಬ್ರಾಹಿಂ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೆ ಪರೋಕ್ಷವಾಗಿ ಕುಮಾರಸ್ವಾಮಿ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದರು. ಜೊತೆಗೆ ಪಕ್ಷದ ರಾಜ್ಯಾಧ್ಯಕ್ಷರಾಗಿರುವ ಹಿನ್ನೆಲೆ ಪಕ್ಷ ವಿರೋಧಿ ಚಟುವಟಿಕೆಗಳನ್ನು ಮುಂದಿಟ್ಟು ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಅವರನ್ನು ಉಚ್ಛಾಟನೆ ಮಾಡಿ ಎಂಬ ಸಲಹೆಯನ್ನು ಅವರ ಬೆಂಬಲಿಗರು ನೀಡಿದ್ದರು.
ಸಿಎಂ ಇಬ್ರಾಯಿಂಗೆ ಶೋಕಾಸ್ ನೋಟಿಸ್/ಪದಚ್ಯುತಿ?
ಪಕ್ಷದ ಶಿಸ್ತು ಉಲ್ಲಂಘನೆ, ವರಿಷ್ಠರ ಬಗ್ಗೆ ಅವಹೇಳಕಾರಿ ಹೇಳಿಕೆ ಮತ್ತು ತಮ್ಮದೇ ಒರಿಜಿನಲ್ ಜೆಡಿಎಸ್ ಎಂದಿರುವ ರಾಜ್ಯಾಧ್ಯಕ್ಷ ಸಿಎಂ ಇಬ್ರಾಯಿಂಗೆ ರಾಷ್ಟ್ರೀಯ ಅಧ್ಯಕ್ಷರು ಶೋಕಾಸ್ ನೋಟಿಸ್ ಜಾರಿಗೊಳಿಸುವ ಸಾಧ್ಯತೆ ಇದೆ. ರಾಜ್ಯ ಕೌನ್ಸಿಲ್ ಸಭೆಯಲ್ಲಿ ಚೆರ್ಚಿಸಿ ಶೋಕಾಸ್ ನೋಟಿಸ್ ನೀಡಬಹುದು, ರಾಜ್ಯಧ್ಯಕ್ಷ ಸ್ಥಾನದಿಂದ ವಜಾಗೊಳಿಸಬಹುದು ಅಥವಾ ಪದಚ್ಯುತಿಗೊಳಿಸಿ ಆದೇಶಿಸಬಹುದು. ಅಲ್ಲದೆ ಇಬ್ರಾಹಿಂ ಅವರನ್ನು ಸದಸ್ಯತ್ವದಿಂದಲೂ ತೆಗೆದುಹಾಕುವ ಸಾಧ್ಯತೆ ದಟ್ಟವಾಗಿದೆ.
ಇದನ್ನೂ ಓದಿ: ಯಾವುದೇ ರಾಸಾಯನಿಕಯುಕ್ತ ಬಣ್ಣಗಳನ್ನು ಕಚೇರಿಗಳ ಒಳಗೆ ಬಳಸದಂತೆ ಸರ್ಕಾರ ಆದೇಶ
ಸಾಮಾಜಿಕ ಜಾಲತಾಣದಲ್ಲಿ ಫೇಕ್ ಲೆಟರ್ ವೈರಲ್!
ಇನ್ನು ಸಿಎಂ ಇಬ್ರಾಹಿಂ ಅವರ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಫೇಕ್ ಲೆಟರ್ ಹರಿದಾಡಿತ್ತು. ಈ ಪತ್ರದಲ್ಲಿ ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಉಚ್ಛಾಟನೆ ಮಾಡಲಾಗಿದೆ ಎಂದು ಬರೆಯಲಾಗಿತ್ತು. ಇದರ ವಿರುದ್ಧ ಇಬ್ರಾಹಿಂ ಜೆಸಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಈ ಎಲ್ಲಾ ಹಿನ್ನಲೆ ಇಂದು ನಡೆಯಲಿರುವ ಕೌನ್ಸಿಲ್ ಸಭೆ ಹಾಗೂ ಶಾಸಕಾಂಗ ಪಕ್ಷದ ಸಭೆ ಮಹತ್ವ ಪಡೆದಿದೆ. ಸಭೆಯಲ್ಲಿ ಸಿಎಂ ಇಬ್ರಾಹಿಂ ಅವರ ವಿರುದ್ಧ ಕೈಗೊಳ್ಳುವ ಕ್ರಮದ ಬಗ್ಗೆ ಚರ್ಚೆ ನಡೆಯಲಿದೆ. ಬಹುಮತದ ನಿರ್ಧಾರದ ಆಧಾರದ ಮೇಲೆ ಅವರನ್ನು ಉಚ್ಛಾಟನೆ ಮಾಡುವ ಸಾಧ್ಯತೆ ಇದೆ ಎನ್ನುತ್ತಿವೆ ಜೆಡಿಎಸ್ ಮೂಲಗಳು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.