ಮಂಡ್ಯ: ಬೆಳೆಗಳಿಗೆ ನೀರು ಬಿಡದಿದ್ದರೆ ಕೆಆರ್ಎಸ್ಗೆ ಮುತ್ತಿಗೆ ಹಾಕುವುದಾಗಿ ರೈತ ಸಂಘದ ನಾಯಕ ದರ್ಶನ್ ಪುಟ್ಟಣ್ಣಯ್ಯ ಎಚ್ಚರಿಕೆ ನೀಡಿದ್ದಾರೆ.
ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕಳೆದ 7 ದಿನಗಳಿಂದ ಕಾವೇರಿ ಭವನದ ಎದುರು ನಡೆಯುತ್ತಿರುವ ಅಹೋರಾತ್ರಿ ಧರಣಿ ನಡೆಸುತ್ತಿರುವ ರೈತ ಸಂಘದ ನಾಯಕರಿಗೆ ಈವರೆಗೂ ನೀರು ಬಿಡುವ ಅಥವಾ ಪರ್ಯಾಯ ವ್ಯವಸ್ಥೆ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.
ರೈತರ ಅಹೋರಾತ್ರಿ ಧರಣಿ ಬಗ್ಗೆ ತಲೆಕೆಡಿಸಿಕೊಳ್ಳದ ಸರ್ಕಾರ ಮತ್ತು ಆಡಳಿತದ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿರುವ ರೈತ ಸಂಘದ ನಾಯಕ ದರ್ಶನ್ ಪುಟ್ಟಣ್ಣಯ್ಯ ಬೆಳೆಗಳಿಗೆ ನೀರು ಬಿಡುವ ಬಗ್ಗೆ ಜೂ.28ರ ಬೆಳಗ್ಗೆ 11 ಗಂಟೆಯೊಳಗೆ ಸರ್ಕಾರ ನಿರ್ಧಾರ ಕೈಗೊಳ್ಳದಿದ್ದರೆ ಕೆಆರ್ಎಸ್ಗೆ ಮುತ್ತಿಗೆ ಹಾಕಿ ನಮ್ಮ ಬೆಳೆಗಳಿಗೆ ನಾವೇ ನೀರು ಬಿಟ್ಟುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಮಂಡ್ಯದಲ್ಲಿ ಸದ್ಯ 40 ಸಾವಿರಕ್ಕೂ ಅಧಿಕ ಕುಟುಂಬಗಳು ಕಬ್ಬು ಹಾಕಿದ್ದು ನೀರು ಬಿಡದೆ ಇದ್ದಲ್ಲಿ 1200 ಕೋಟಿ ರೂ. ಮೌಲ್ಯದ ಕಬ್ಬು ನಾಶವಾಗಲಿದೆ. ಕಬ್ಬಿಣ ಆಧಾರದ ಮೇಲೆ 500 ಕೋಟಿ ರೂ. ಸಾಲ ತೆಗೆದುಕೊಳ್ಳಲಾಗಿದ್ದು, ಜಿಲ್ಲೆಯಲ್ಲಿ ಕಬ್ಬು ಉಳಿಸದಿದ್ದರೆ ಸಾವಿರಾರು ಕುಟುಂಬಗಳು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳಲಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.