ಮುಂಬೈ ಮೂಲದ ವ್ಯಕ್ತಿಯೊಬ್ಬ ವರದಕ್ಷಿಣೆಗಾಗಿ ತನ್ನ ಹೆಂಡತಿಯನ್ನು ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. 21 ವರ್ಷದ ಫಾಹೀನ್ ಎಂಬಾಕೆಯನ್ನು ವರದಕ್ಷಿಣೆ ತರದ ಕಾರಣ ಆಕೆಯ ಪತಿ ಕೊಂದಿದ್ದಾನೆ ಎಂದು ಆಕೆಯ ಕುಟುಂಬದವರು ಆರೋಪಿಸಿದ್ದಾರೆ. ಮುಂಬೈನ ಬೋರಿವ್ಲಿ ಪ್ರದೇಶದಲ್ಲಿ ಭಾನುವಾರ ಈ ಘಟನೆ ನಡೆದಿದೆ.
ಭಾನುವಾರ, ಫಾಹೀನ್ ಅವರ ಕುಟುಂಬ ಸದಸ್ಯರು ಅವರೊಂದಿಗೆ ಫೋನ್‌ನಲ್ಲಿ ಮಾತನಾಡಲು ನಿರಂತರವಾಗಿ ಪ್ರಯತ್ನಿಸುತ್ತಿದ್ದರು. ಆದರೆ ಯಾವ ಕರೆಗೂ ಪ್ರತಿಕ್ರಿಯೆ ಸಿಗದ ಕಾರಣ, ಕುಟುಂಬದವರಿಗೆ ಆತಂಕ ಉಂಟಾಗಿದೆ. ಭಾನುವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ, ಫಾಹೀನ್ ಅವರ ಪತಿ ಇಮಾಮ್ ಕರೆ ಮಾಡಿ, ಅವರ ಪತ್ನಿಗೆ ಆರೋಗ್ಯ ಸರಿಯಿಲ್ಲದ ಕಾರಣ, ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿರುವುದಾಗಿ ಹೇಳಿದ್ದರು.
ಫಾಹೀನ್ ಪೋಷಕರು ಆಕೆಯನ್ನು ನೋಡಲು ಆಸ್ಪತ್ರೆಗೆ ಭೇಟಿ ನೀಡಿದಾಗ, ಫಾಹೀನ್ ಮೃತಪಟ್ಟಿದ್ದಾರೆ ಎಂದು ತಿಳಿಸಲಾಯಿತು.
ನಂತರ ಪೊಲೀಸರ ಮೊರೆ ಹೋದ ಫಾಹೀನ್ ಕುಟುಂಬ ಸದಸ್ಯರು, ಫಾಹೀನ್ ಅವರ ಸಾವಿಗೆ ಆಕೆಯ ಪತಿಯೇ ಕಾರಣ ಎಂದು ದೂರು ದಾಖಲಿಸಿದ್ದಾರೆ. ಅಷ್ಟೇ ಅಲ್ಲದೆ ಇಮಾಮ್ ಈಗಾಗಲೇ ನಾಲ್ಕು ಜನರನ್ನು ವಿವಾಹವಾಗಿದ್ದಾರೆ ಮತ್ತು ಸುಳ್ಳು ಭರವಸೆಗಳನ್ನು ನೀಡಿ 21 ವರ್ಷದ ಯುವತಿಯನ್ನು ಮದುವೆಯಾಗಿದ್ದಾನೆ ಎಂದು ಪೊಲೀಸರಿಗೆ ಮಾಹಿತಿ ನೀಡಿದರು.
ಫಾಹೀನ್ ಅವರ ತಂದೆ ಮದುವೆಯನ್ನು ವಿರೋಧಿಸಿದ್ದರೂ, ಆದರೂ ಆಕೆಯ ಒತ್ತಾಯದ ಮೇರೆಗೆ ಅವರು ಮದುವೆಗೆ ಒಪ್ಪಿಕೊಳ್ಳಬೇಕಾಗಿತ್ತು ಎಂದು ಹೇಳಲಾಗಿದೆ.
ಕಂಡಿವ್ಲಿ ಪೊಲೀಸರು ಫಾಹೀನ್ ಅವರ ಕೊಲೆ ಪ್ರಕರಣವನ್ನು ದಾಖಲಿಸಿ ಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಇಮಾಮ್‌ನನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಸುತ್ತಿದ್ದಾರೆ.