ನವದೆಹಲಿ: ಲೋಕಸಭಾ ಚುನಾವಣೆಯ ನಾಲ್ಕನೇ ಹಂತದ ಮತದಾನ ಏಪ್ರಿಲ್ 29ರಂದು ನಡೆಯಲಿದ್ದು, 928 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇವರಲ್ಲಿ 210 ಅಭ್ಯರ್ಥಿಗಳ ವಿರುದ್ಧ ವಿವಿಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು 'ಪ್ರಜಾಸತ್ತಾತ್ಮಕ ಸುಧಾರಣಾ ಸಂಘ' (ಎಡಿಆರ್)) ಬುಧವಾರ ಬಿಡುಗಡೆ ಮಾಡಿರುವ ಸಮೀಕ್ಷೆಯೊಂದರಿಂದ ಬಹಿರಂಗವಾಗಿದೆ.
ಇವರಲ್ಲಿ 158 ಅಭ್ಯರ್ಥಿಗಳ ಮೇಲೆ ಗಂಭೀರ ಸ್ವರೂಪದ ಕ್ರಿಮಿನಲ್ ಪ್ರಕರಣಗಳಿದ್ದು, 12 ಅಭ್ಯರ್ಥಿಗಳು ತಮ್ಮ ಮೇಲಿರುವ ಕ್ರಿಮಿನಲ್ ಪ್ರಕರಣದ ಅಪರಾಧಿಗಳೆಂದು ಘೋಷಿಸಿಕೊಂಡಿದ್ದಾರೆ. ಇವರಲ್ಲಿ ಐವರ ಮೇಲೆ ಕೊಲೆ ಪ್ರಕರಣ, 24 ಅಭ್ಯರ್ಥಿಗಳ ಮೇಲೆ ಕೊಲೆ ಯತ್ನ ಪ್ರಕರಣ, 4 ಅಭ್ಯರ್ಥಿಗಳ ಮೇಲೆ ಅಪಹರಣ ಪ್ರಕರಣ, 21 ಅಭ್ಯರ್ಥಿಗಳ ವಿರುದ್ಧ ಮಹಿಳಾ ವಿರುದ್ಧ ಅಪರಾಧದ ಪ್ರಕರಣ ಮತ್ತು 16 ಅಭ್ಯರ್ಥಿಗಳ ಮೇಲೆ ದ್ವೇಷದ ಭಾಷಣ ಮಾಡಿದ ಪ್ರಕರಣಗಳು ದಾಖಲಾಗಿರುವುದಾಗಿ ಸಮೀಕ್ಷೆ ಹೇಳಿದೆ.
ಬಿಜೆಪಿ ಅಭ್ಯರ್ಥಿಗಳ ಪೈಕಿ 57 ಅಭ್ಯರ್ಥಿಗಳಲ್ಲಿ 25 ಅಭ್ಯರ್ಥಿಗಳು(ಶೇ.44), ಕಾಂಗ್ರೆಸ್ ಪಕ್ಷದ 57 ಅಭ್ಯರ್ಥಿಗಳಲ್ಲಿ 18 ಅಭ್ಯರ್ಥಿಗಳು(ಶೇ.32), ಬಿಎಸ್ಪಿಯ 54 ಅಭ್ಯರ್ಥಿಗಳಲ್ಲಿ 11 ಅಭ್ಯರ್ಥಿಗಳು(ಶೇ .20), ಶಿವಸೇನೆಯ 21 ಅಭ್ಯರ್ಥಿಗಳ ಪೈಕಿ12 ಅಭ್ಯರ್ಥಿಗಳು(ಶೇ.57) ಮತ್ತು 345 ಸ್ವತಂತ್ರ ಅಭ್ಯರ್ಥಿಗಳ ಪೈಕಿ 60 ಅಭ್ಯರ್ಥಿಗಳು(ಶೇ .17) ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿರುವುದಾಗಿ ಘೋಷಿಸಿಕೊಂಡಿದ್ದಾರೆ.
ಅಲ್ಲದೆ, ಬಿಜೆಪಿಯಿಂದ ಸ್ಪರ್ಧಿಸುತ್ತಿರುವ 57 ಸ್ಪರ್ಧಿಗಳಲ್ಲಿ 20 ಅಭ್ಯರ್ಥಿಗಳ ವಿರುದ್ಧ, ಕಾಂಗ್ರೆಸ್ ನ ಒಟ್ಟು 54 ಅಭ್ಯರ್ಥಿಗಳಲ್ಲಿ 9 ಅಭ್ಯರ್ಥಿಗಳ ವಿರುದ್ಧ, ಬಿಎಸ್ಪಿಯ 54 ಅಭ್ಯರ್ಥಿಗಳಲ್ಲಿ 10 ಅಭ್ಯರ್ಥಿಗಳ ವಿರುದ್ಧ, ಶಿವಸೇನೆಯ 21 ಅಭ್ಯರ್ಥಿಗಳ ಪೈಕಿ 9 ಅಭ್ಯರ್ಥಿಗಳ ವಿರುದ್ಧ ಮತ್ತು 345 ಸ್ವತಂತ್ರ ಅಭ್ಯರ್ಥಿಗಳ ಪೈಕಿ 45 ಅಭ್ಯರ್ಥಿಗಳ ವಿರುದ್ಧ ಗಂಭೀರ ಸ್ವರೂಪದ ಕ್ರಿಮಿನಲ್ ಆರೋಪಗಳಿರುವುದಾಗಿ ನಾಮಪತ್ರ ಸಲ್ಲಿಕೆ ವೇಳೆ ಘೋಷಿಸಿಕೊಂಡಿದ್ದಾರೆ.
ಅಭ್ಯರ್ಥಿಗಳು ತಮ್ಮ ನಾಮಪತ್ರಗಳ ಸಲ್ಲಿಕೆ ವೇಳೆ ಸಲ್ಲಿಸಿರುವ ಮಾಹಿತಿಗಳ ಆಧಾರದ ಮೇಲೆ ಪ್ರಜಾಸತ್ತಾತ್ಮಕ ಸುಧಾರಣಾ ಸಂಘ ಈ ಸಮೀಕ್ಷೆ ನಡೆಸಲಾಗಿದೆ.