ಬೆಂಗಳೂರು: ಲೋಕಸಭಾ ಚುನಾವಣೆಗೆ ದೇಶದಲ್ಲಿ ಮೂರನೇ ಹಂತದ ಹಾಗೂ ರಾಜ್ಯದಲ್ಲಿ ಎರಡನೇ ಹಂತದ ಮತದಾನ ಇಂದು ಬೆಳಿಗ್ಗೆ 7 ಗಂಟೆಯಿಂದ ಆರಂಭವಾಗಿದೆ. ಎಪ್ರಿಲ್ 18ರಂದು ರಾಜ್ಯದ 14 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಇನ್ನುಳಿದ 14 ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ.
ರಾಜ್ಯದಲ್ಲಿ ಎರಡನೇ ಹಂತದಲ್ಲಿ ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರ್ಗಿ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಮತದಾನಕ್ಕಾಗಿ ಸುಮಾರು 28,028 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಮತದಾರರು ತಮ್ಮ ಹಕ್ಕು ಚಲಾವಣೆಗಾಗಿ ಬೆಳಿಗ್ಗೆಯಿಂದಲೇ ಉತ್ಸುಕರಾಗಿ ಮತಗಟ್ಟೆಗಳತ್ತ ಬರುತ್ತಿದ್ದ್ದಾರೆ. ಎಲ್ಲೆಡೆ ಶಾಂತಿಯುತವಾಗಿ ಮತದಾನ ನಡೆಯುತ್ತಿದ್ದು, ಹಲವೆಡೆ ಇವಿಎಂಗಳಲ್ಲಿ ದೋಷ ಕಂಡುಬಂದಿರುವ ಬಗ್ಗೆ ವರದಿಗಳಾಗಿವೆ.
ಈ 14 ಲೋಕಸಭಾ ಕ್ಷೇತ್ರಗಳಲ್ಲಿ ಘಟಾನುಘಟಿ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಅನಂತ ಕುಮಾರ್ ಹೆಗಡೆ, ರಮೇಶ್ ಜಿಗಜಿಣಗಿ, ಜಿ.ಎಂ. ಸಿದ್ದೇಶ್ವರ್, ಮಧು ಬಂಗಾರಪ್ಪ, ಬಿ.ವೈ. ರಾಘವೇಂದ್ರ, ವಿ.ಎಸ್.ಉಗ್ರಪ್ಪ , ಈಶ್ವರ್ ಖಂಡ್ರೆ, ಪ್ರಹ್ಲಾದ್ ಜೋಶಿ, ವಿನಯ ಕುಲಕರ್ಣಿ, ಸುರೇಶ್ ಅಂಗಡಿ, ಕರಡಿ ಸಂಗಣ್ಣ ಸೇರಿದಂತೆ ಒಟ್ಟು 237 ಮಂದಿ ಚುನಾವಣಾ ಕಣದಲ್ಲಿದ್ದು, 1.22 ಕೋಟಿ ಪುರುಷರು, 1.20 ಕೋಟಿ ಮಹಿಳೆಯರು, 2022 ಲೈಂಗಿಕ ಅಲ್ಪಸಂಖ್ಯಾತರು ಸೇರಿ 2.43 ಕೋಟಿ ಮತದಾರರು ಇವರ ಭವಿಷ್ಯವನ್ನು ನಿರ್ಧರಿಸಲಿದ್ದಾರೆ.