ಮೈಸೂರು: ಲೋಕಸಭಾ ಚುನಾವಣೆಗೆ ಕೆಲವೇ ದಿನ ಉಳಿದಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಮೊದಲ ಬಾರಿಗೆ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿರುವ ಪ್ರಧಾನಿ ಮೋದಿ ಕಾಂಗ್ರೆಸ್ ಪ್ರಣಾಳಿಕೆಯನ್ನು ಕಟುವಾಗಿ ಟೀಕಿಸಿದರು.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಬಿಜೆಪಿ ವಿಜಯ ಸಂಕಲ್ಪ ಸಭಾದಲ್ಲಿ ಭಾಗವಹಿಸಿ ಮಾತನಾಡಿದ ಮೋದಿ, ಕಾಂಗ್ರೆಸ್ ಗೆ ಬಡವರನ್ನು ಉದ್ದಾರ ಮಾಡುವ ಉದ್ದೇಶವಲ್ಲ. ಬಡವರ ಹೆಸರಿನಲ್ಲಿ ಯೋಜನೆ ಆರಂಭಿಸಿ ಹಣ ಲೂಟಿ ಮಾಡುವ ಆಲೋಚನೆ ಇದೆ. ಹೀಗಾಗಿಯೇ ರೈತರ ಸಾಲಮನ್ನಾ ಹೆಸರಿನಲ್ಲಿ ಇಲ್ಲಿನ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ದುಡ್ಡು ಹೊಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದರು.
2030ರ ವೇಳೆಗೆ ಆರ್ಥಿಕವಾಗಿ ವಿಶ್ವದಲ್ಲೇ ಉತ್ತಮ ಸ್ಥಾನ
2030ರಲ್ಲಿ ಭಾರತವು ಪ್ರಪಂಚದ ಅಗ್ರ ಮೂರು ಆರ್ಥಿಕತೆಗಳಲ್ಲಿದೆ ಸ್ಥಾನ ಪಡೆಯಲಿದೆ. ನವ ಭಾರತದಲ್ಲಿನ ಅಧುನಿಕ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವುದು ನಮ್ಮ ಮುಖ್ಯ ಧ್ಯೇಯವಾಗಿದ್ದು, ಮುಂದಿನ ಐದು ವರ್ಷಗಳಲ್ಲಿ ದೇಶಾದ್ಯಂತ ಕಾರ್ಯನಿರ್ವಹಿಸುವ ವಿಮಾನ ನಿಲ್ದಾಣಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವ ಉದ್ದೇಶವನ್ನು ಹೊಂದಿದ್ದೇವೆ. ಬೆಂಗಳೂರು-ಮೈಸೂರು 8 ಪಥದ ರಸ್ತೆ ಅಂತ್ಯಗೊಂಡರೆ ಮೈಸೂರು ಅಭಿವೃದ್ಧಿಯಾಗಲಿದೆ. ಉಡಾನ್ ಯೋಜನೆಯಡಿ ವಿಮಾನ ನಿಲ್ದಾಣ ಅಭಿವೃದ್ಧಿಯಾಗಲಿದೆ. ಐದು ವರ್ಷಗಳ ಹಿಂದೆ ಹೇಳಿದ್ದ 'ಸಬ್ ಕೇ ಸಾಥ್ ಸಬ್ ಕಾ ವಿಕಾಸ್'ಎಂಬ ತತ್ವದೊಂದಿಗೆ ಇಂದೂ ಸಹ ಮುಂದೆ ಸಾಗುತ್ತಿದ್ದೇನೆ ಎಂದು ಮೋದಿ ಹೇಳಿದರು.
ಮೋದಿ ತೊಲಗಿಸುವುದೇ ಕೆಲವು ಪಕ್ಷಗಳ ಧ್ಯೇಯ, ದೇಶದ ಅಭಿವೃದ್ದಿಯಲ್ಲ
ಪ್ರಧಾನಿ ನರೇಂದ್ರ ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸುವುದೇ ಹಲವು ಪಕ್ಷಗಳ ಧ್ಯೇಯವೇ ಹೊರತು, ದೇಶದ ಅಭಿವೃದ್ಧಿಯಲ್ಲ. ಹಾಗಾಗಿಯೇ ಎಲ್ಲಾ ಭಾಷಣಗಳಲ್ಲಿ ಮೋದಿ ಹಠಾವೋ ಮೋದಿ ಹಠವೋ ಎಂದು ಹೇಳುತ್ತಿದ್ದಾರೆ. ಈ ಹಿಂದೆ ಗರೀಬಿ ಹಠಾವೋ ಎಂದು ಹೇಳುತ್ತಿದ್ದರು. ಆದರೀಗ ದೇಶದ ಬಡಜನತೆಯೇ ಕಾಂಗ್ರೆಸ್ ಹಠಾವೋ ಎನ್ನುತ್ತಿದ್ದಾರೆ ಎಂದು ಟೀಕಿಸಿದರು.