'ಕಮಲ' ಬಿಟ್ಟು 'ಕೈ' ಹಿಡಿಯಲಿರುವ ಶತ್ರುಘ್ನ ಸಿನ್ಹಾ

ಬಿಜೆಪಿ ಪಕ್ಷದಲ್ಲಿ ಬಂಡಾಯ ನಾಯಕರಾಗಿ ಗುರುತಿಸಿಕೊಂಡಿದ್ದ ಶತ್ರುಘ್ನ ಸಿನ್ಹಾ ಇಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ.

Last Updated : Mar 28, 2019, 10:23 AM IST
'ಕಮಲ' ಬಿಟ್ಟು 'ಕೈ' ಹಿಡಿಯಲಿರುವ ಶತ್ರುಘ್ನ ಸಿನ್ಹಾ title=
File Image

ನವದೆಹಲಿ/ಪಾಟ್ನಾ: ಬಿಜೆಪಿಯ ರೆಬೆಲ್​ ನಾಯಕ ಎಂದು ಗುರುತಿಸಿಕೊಂಡಿದ್ದ, ಭಾರತೀಯ ಜನತಾ ಪಕ್ಷಲ್ಲಿದ್ದುಕೊಂಡೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೋಟು ಅಮಾನ್ಯೀಕರಣ ಹಾಗೂ ಜಿಎಸ್​ಟಿ ಕ್ರಮವನ್ನು ಬಹಿರಂಗವಾಗಿ ಟೀಕಿಸುತ್ತಿದ್ದ ಶತ್ರುಘ್ನ ಸಿನ್ಹಾ ಇಂದು 'ಕಾಂಗ್ರೆಸ್' ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಸೇರ್ಪಡೆಗೊಳ್ಳಲಿರುವ ಶತ್ರುಘ್ನ ಸಿನ್ಹಾ, ಇಂದು ಬೆಳಿಗ್ಗೆ 11 ಗಂಟೆಗೆ ಪಕ್ಷದ ಸದಸ್ಯತ್ವ ಪಡೆಯಲಿದ್ದಾರೆ. ಈ ಸಮಯದಲ್ಲಿ ಬಿಹಾರ ಕಾಂಗ್ರೆಸಿನ ಪ್ರಮುಖ ನಾಯಕರು ಉಪಸ್ಥಿತರಿರುತ್ತಾರೆ ಎಂದು ಮೂಲಗಳು ತಿಳಿಸಿವೆ.

ಇತ್ತೀಚೆಗೆ ಬಿಹಾರದ ಎಲ್ಲಾ ಸ್ಥಾನಗಳಿಗೆ ಪಕ್ಷದ ಅಭ್ಯರ್ಥಿಗಳನ್ನು ಘೋಷಿಸಿದ್ದ ಬಿಜೆಪಿ ತಮ್ಮ ಟೀಕೆಗಳಿಂದಾಗಿ ಬಿಜೆಪಿಗೆ ಬಿಸಿತುಪ್ಪವಾಗಿ ಪರಿಣಮಿಸಿದ್ದ ಶತ್ರುಘ್ನ ಸಿನ್ಹಾ ಅವರಿಗೆ ಟಿಕೆಟ್ ಕತ್ತರಿಸಿತ್ತು. 'ಬಿಹಾರಿ ಬಾಬು' ಎಂದೇ ಖ್ಯಾತಿ ಪಡೆದಿರುವ, ಸತತ ಎರಡು ಬಾರಿ ಪಾಟ್ನಾ ಸಾಹಿಬ್ ಕ್ಷೇತ್ರದಿಂದ ಜಯಗಳಿಸಿದ್ದ ಶತ್ರುಘ್ನ ಸಿನ್ಹಾ ಅವರಿಗೆ ಬಿಜೆಪಿ ಆ ಕ್ಷೇತ್ರದಿಂದ ಟಿಕೆಟ್ ನೀಡುವ ಬದಲಿಗೆ, ಸಿನ್ಹಾ ಅವರ ಕ್ಷೇತ್ರದಲ್ಲಿ ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಅವರನ್ನು ಕಣಕ್ಕಿಳಿಸಿದೆ.

ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ಡಿಎ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿದ್ದ ಸಿನ್ಹಾ, ಮೋದಿ ಸರ್ಕಾರದಲ್ಲೂ ಸಚಿವಾಕಾಂಕ್ಷಿಯಾಗಿದ್ದರು. 2009 ಮತ್ತು 2014ರಲ್ಲಿ ಪಾಟ್ನಾ ಸಾಹಿಬ್​ ಕ್ಷೇತ್ರ ಪ್ರತಿನಿಧಿಸಿದ್ದ ಅವರು, ಈ ಬಾರಿ ಕೂಡ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಉತ್ಸುಕರಾಗಿದ್ದರು. ಆದರೆ ಬಿಜೆಪಿ ಟಿಕೆಟ್​ ನೀಡದ ಹಿನ್ನೆಲೆಯಲ್ಲಿ ಕಾಂಗ್ರೆಸ್​ ಸೇರುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. 

Trending News