ನವದೆಹಲಿ: ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗಾಯ್ ನೇತೃತ್ವದ ಐವರು ನ್ಯಾಯಮೂರ್ತಿಗಳಿರುವ ಪೀಠದಿಂದ ಅಯೋಧ್ಯಾ ರಾಮ ಜನ್ಮ ಭೂಮಿ ಆಸ್ತಿ ಹಕ್ಕು ಪ್ರಕರಣದ ವಿಚಾರಣೆ ಇಂದಿನಿಂದ ನಡೆಯಲಿದೆ. ಲೋಕಸಭಾ ಚುನಾವಣೆ ಸನಿಹವಿರುವುದರಿಂದ ಈ ಪ್ರಕರಣದ ಅಂತಿಮ ವಿಚಾರಣೆಯ ಸ್ವರೂಪ ಹಾಗೂ ದಿನಾಂಕವನ್ನು ಇಂದೇ ನಿರ್ಧರಿಸುವ ಸಾಧ್ಯತೆಯಿದೆ.
ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ವಿವಾದಮುಕ್ತವಾದ ಭೂಮಿಯನ್ನು ರಾಮ ಜನ್ಮಭೂಮಿ ನ್ಯಾಸ್ ಟ್ರಸ್ಟ್ ಗೆ ಹಿಂದಿರುಗಿಸುವಂತೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಮೊರೆಹೋಗಿದೆ. ಕೆಲವು ವಾರಗಳ ಹಿಂದೆ ಸರ್ಕಾರ ಸ್ವಾಧೀನ ಪಡಿಸಿಕೊಂಡಿರುವ 67 ಎಕರೆ ಭೂಮಿಯನ್ನು ಮಾಲಿಕರಿಗೆ ಹಿಂದುರಿಗಿಸಬೇಕೆಂದು ಕೇಂದ್ರ ಸರ್ಕಾರವು ಸುಪ್ರೀಂ ನಲ್ಲಿ ಅರ್ಜಿ ಸಲ್ಲಿಸಿತ್ತು.
ಜನವರಿ 29ರಂದು ಈ ವಿಚಾರಣೆ ನಡೆಸಬೇಕಿತ್ತು. ಆದರೆ ಜಸ್ಟೀಸ್ ಬೊಬ್ಡೆ ಅವರ ಅನುಪಸ್ಥಿತಿಯಿಂದ ವಿಚಾರಣೆಯನ್ನು ಮುಂದೂಡಲಾಗಿತ್ತು. ಈಗ ಜಸ್ಟೀಸ್ ಬೊಬ್ಡೆ ಅವರು ರಜೆ ಅವಧಿ ಮುಗಿಸಿಕೊಂಡು ಹಿಂತಿರುಗಿದ್ದಾರೆ. ಜಸ್ಟೀಸ್ ಬೊಬ್ಡೆ ಅವರಲ್ಲದೆ, ಜಸ್ಟೀಸ್ ಚಂದ್ರಚೂಡ್, ಜಸ್ಟೀಸ್ ಭೂಷಣ್, ಜಸ್ಟೀಸ್ ಅಬ್ದುಲ್ ನಜೀರ್ ಅವರು ನ್ಯಾಯಪೀಠದಲ್ಲಿದ್ದಾರೆ.
ಚುನಾವಣೆ ಹತ್ತಿರದಲ್ಲಿರುವುದರಿಂದ ರಾಮ ಮಂದಿರ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಬೇಕು ಎಂಬುದು ಕೆಲವರ ಆಶಯವಾಗಿದೆ. ಆದರೆ ಈ ವಿಚಾರದಲ್ಲಿ ಸುಪ್ರೀಂಕೋರ್ಟ್ ಆದೇಶ ನೀಡುವವರೆಗೂ ನಾವು ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಸಂದರ್ಶನವೊಂದರಲ್ಲಿ ಪ್ರಧಾನಿ ಮೋದಿ ತಿಳಿಸಿದ್ದಾರೆ.
2010 ರಲ್ಲಿ ಅಲಹಾಬಾದ್ ಹೈಕೋರ್ಟ್ ಅಯೋಧ್ಯೆಯ 2.77 ಎಕರೆ ಭೂಮಿಯನ್ನು ಸುನ್ನಿ ವಕ್ಫ್ ಬೋರ್ಡ್, ನಿರ್ಮೋಹಿ ಅಖಾರಾ ಮತ್ತು ರಾಮ್ ಲಲ್ಲಾ ಹೀಗೆ ಮೂರು ಭಾಗಗಳಾಗಿ ವಿಂಗಡಿಸಲಾಗಿತ್ತು. ಆದರೆ ತೀರ್ಪನ್ನು ಖಂಡಿಸಿ ಈಗ ಸುಪ್ರೀಂಕೋರ್ಟ್ ನಲ್ಲಿ ಅರ್ಜಿಯನ್ನು ಸಲ್ಲಿಸಲಾಗಿದೆ. ಈ ಹಿನ್ನಲೆಯಲ್ಲಿ ಇಂದು ವಿಚಾರಣೆ ನಡೆಯಲಿದೆ.