ನವದೆಹಲಿ: ಪ್ರಿಯಾಂಕಾ ಗಾಂಧಿ ಬರುವ ಫೆಬ್ರುವರಿ 4 ರಿಂದ ಕುಂಭಮೇಳದ ನಿಮಿತ್ತ ಗಂಗಾ ನದಿಯಲ್ಲಿ ಮೀಯುವ ಮೂಲಕ ರಾಜಕೀಯಕ್ಕೆ ಅಧಿಕೃತ ಪ್ರವೇಶ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಿಯಾಂಕಾ ಗಾಂಧಿ ಜೊತೆಗೆ ಅಂದು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ಸಾಥ್ ನೀಡಲಿದ್ದಾರೆ.ವಿಶೇಷವೆಂದರೆ ಅದೇ ದಿನದಂದು ಅವರು ಉತ್ತರಪ್ರದೇಶದ ಪೂರ್ವ ಭಾಗದ ಕಾಂಗ್ರೆಸ್ ಪಕ್ಷದ ಉಸ್ತುವಾರಿ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ. ಲಕ್ನೊದಲ್ಲಿ ರಾಹುಲ್ ಗಾಂಧಿ ಜೊತೆ ಸೇರಿ ಪ್ರಿಯಾಂಕಾ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ತಿಳಿದುಬಂದಿದೆ.
ಕಾಂಗ್ರೆಸ್ ಪಕ್ಷದ ಮೂಲಗಳು ತಿಳಿಸಿರುವಂತೆ ಪ್ರಿಯಾಂಕ ಮತ್ತು ರಾಹುಲ್ ಇಬ್ಬರು ಸಹಿತ ಮೌನಿ ಅಮಾವಾಸ್ಯೆ ದಿನ ಗಂಗಾ ಸ್ಥಾನ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಒಂದು ವೇಳೆ ಆ ದಿನ ತಪ್ಪಿದರೆ ಫೆ.10 ಬಸಂತ್ ಪಂಚಮಿಯಂದು ಗಂಗಾ ನದಿಯಲ್ಲಿ ಮೀಯಲಿದ್ದಾರೆ ಎನ್ನಲಾಗಿದೆ.
ಇದೇ ಮೊದಲ ಬಾರಿಗೆ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಇಬ್ಬರು ಕುಂಭಮೇಳದ ನಿಮಿತ್ತ ಗಂಗೆಯಲ್ಲಿ ಸ್ಥಾನ ಮಾಡುತ್ತಿರುವುದು ಎನ್ನಲಾಗಿದೆ.ಈ ಹಿಂದೆ 2001 ರಲ್ಲಿ ಸೋನಿಯಾ ಗಾಂಧಿ ಅವರು ಕುಂಭಮೇಳಕ್ಕೆ ಭೇಟಿ ನೀಡಿದ್ದರು.