ಅಮರಾವತಿ: ಮಹಾರಾಷ್ಟ್ರದ ಕೊಳೆಗೇರಿಗೆ ಮರಳಿದ ಬುಡಕಟ್ಟು ಜನರನ್ನು ವಶಕ್ಕೆ ಪಡೆಯಲು ಹೋದ ಪೊಲೀಸ್ ತಂಡದ ಮೇಲೆ ಬುಡಕಟ್ಟು ಜನಾಂಗದವರು ನಡೆಸಿದ ದಾಳಿಯಲ್ಲಿ ಅನೇಕ ಪೊಲೀಸರು ಗಾಯಗೊಂಡಿದ್ದಾರೆ.
ಪೊಲೀಸರು ಮತ್ತು ಅರಣ್ಯ ಸಿಬ್ಬಂದಿ ಮೇಲೆ ಕೊಡಲಿ ಮತ್ತು ಈಟಿಯಿಂದ ಬುಡಕಟ್ಟು ಜನರು ನಡೆಸಿದ ಆಕ್ರಮಣದಲ್ಲಿ 15 ಮಂದಿ ಗಾಯಗೊಂಡಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ. ದಾಳಿ ಸಂದರ್ಭದಲ್ಲಿ 15 ವಾಹನಗಳು ಜಖಂಗೊಂಡಿವೆ. ಘಟನೆ ಬಳಿಕ ಆ ಪ್ರದೇಶದಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ.
ಅಮರಾವತಿಯ ಹುಲಿ ಸಂರಕ್ಷಿತ ಅರಣ್ಯದಲ್ಲಿದ್ದ 8 ರಿಂದ 10 ಬುಡಕಟ್ಟು ಗ್ರಾಮಗಳನ್ನು 2002ರಲ್ಲಿಯೇ ಅಕೋಲಾ ಜಿಲ್ಲೆಯ ಖೋಪಾಟ್ ಪ್ರದೇಶದಲ್ಲಿ ಪುನರ್ವಸತಿ ಮಾಡಲಾಗಿತ್ತು. ಆದರೆ, ಈ ಪ್ರದೇಶ ನಗರಕ್ಕೆ ಹತ್ತಿರವಾದ್ದರಿಂದ ಇದು ಆದಿವಾಸಿಗಳ ಜೀವನಶೈಲಿಯನ್ನು ಸಂಪೂರ್ಣ ಬದಲಿಸಿತು. ವ್ಯವಸಾಯ ಹಾಗು ಇನ್ನಿತರ ಭೂಮಿಗೆ ಸಂಬಂಧಿಸಿದ ಕೆಲಸಗಳಿಂದ ಅವರು ದೂರಾಗಬೇಕಾಯಿತು, ಯಾತ್ರಿಕ ನಗರ ಜೀವನ ಶೈಲಿ, ಹಣದುಬ್ಬರ ಮತ್ತು ಇನ್ನಿತರ ವಿಷಯಗಳಿಗೆ ಹೊಂದಿಕೊಳ್ಳುವುದು ಅವರಿಗೆ ಕಷ್ಟವಾಯಿತು. ಹೀಗಾಗಿ ಅವರು ತಮ್ಮ ಮೂಲ ಸ್ಥಳಗಳಿಗೆ ಹಿಂದಿರುಗಿ ಕ್ಯಾಂಪ್ ಹೂಡಿದ್ದರು ಎನ್ನಲಾಗಿದೆ.
ಆದರೆ, ಸಂರಕ್ಷಿತ ಹುಲಿ ಅಭಯಾರಣ್ಯದಲ್ಲಿ ಜನರು ವಾಸ ಮಾಡುವುದು ವನ್ಯಜೀವಿ ಕಾನುನೂನಿಗೆ ವಿರುದ್ಧವಾಗಿರುವುದರಿಂದ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ಅವರನ್ನು ಅಲ್ಲಿಂದ ಹೊರಹಾಕಲು ಪ್ರಯತ್ನಿಸಿದಾಗ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.