ಬೆಂಗಳೂರು: ತೆರಿಗೆ ವಂಚನೆ ಆರೋಪದಡಿ ಬೆಂಗಳೂರಿನ ಜೆ.ಪಿ.ನಗರದಲ್ಲಿರುವ ಚಿತ್ರ ನಟ ಕಿಚ್ಚ ಸುದೀಪ್ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ ಹಿನ್ನೆಲೆಯಲ್ಲಿ ಸುದೀಪ್ ಅವರು ಮೈಸೂರಿನಿಂದ ಬೆಂಗಳೂರಿಗೆ ಹಿಂತಿರುಗಿದ್ದು, ಐಟಿ ಅಧಿಕಾರಿಗಳಿಗೆ ಅಗತ್ಯವಾದ ಮಾಹಿತಿ ನೀಡಿ ಸಹಕರಿಸುತ್ತಿದ್ದಾರೆ.
ಇದೇ ಸಂದರ್ಭದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸುದೀಪ್, "ಫಾರ್ಮಾಲಿಟೀಸ್ ಏನಿದೆ ಅದಕ್ಕೆ ನಾವು ಸಹಕರಿಸಬೇಕು. ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ ಎಂದಾಕ್ಷಣ ಅದು ವೈಯಕ್ತಿಕ ದಾಳಿ ಎಂದರ್ಥ ಅಲ್ಲ. ನಾನು ಏನಾದರೂ ತಪ್ಪು ಮಾಡಿದ್ದರೆ ಆತಂಕ ಪಡಬೇಕು. ಆದರೆ ನಾನು ಯಾವ ತಪ್ಪೂ ಮಾಡಿಲ್ಲ. ಈ ರೇಡ್ನಿಂದಾದ್ರು ನನಗೆ ಬರಬೇಕಾದ ಹಣ ಬಂದ್ರೆ ಸಾಕು" ಎಂದು ಸುದೀಪ್ ಹೇಳಿದ್ದಾರೆ.
ಮುಂದುವರೆದು ಮಾತನಾಡಿದ ಅವರು, ಆದಾಯ ತೆರಿಗೆ ದಾಳಿ ಕೇವಲ ರಾಜಕೀಯ ಪಕ್ಷಗಳಿಗೆ ಸಂಬಂಧಿಸಿದ್ದಲ್ಲ. ಕೆಜಿಎಫ್, ದಿ ವಿಲನ್, ನಟಸಾರ್ವಭೌಮ ಸಿನಿಮಾಗಳಿಗೆ ಸಂಬಂಧಿಸಿದಂತೆ ಈ ದಾಳಿ ನಡೆದಿರಬಹುದು. ಮನೆಯಲ್ಲಿ ತಾಯಿ ಒಬ್ಬರೇ ಇದ್ದ ಕಾರಣಕ್ಕೆ ಚಿತ್ರೀಕರಣ ಮೊಟಕುಗೊಳಿಸಿ ವಾಪಸ್ ಬಂದೆ. ಅಷ್ಟಕ್ಕೂ ನಾನು ಭಯ ಬೀಳಲು ಅಧಿಕಾರಿಗಳು ಕಾಂಪೌಂಡ್ ಹಾರಿ ಮನೆಗೆ ಬಂದಿಲ್ಲ. ಗೇಟ್ ಮೂಲಕವೇ ಒಳಗೆ ಬಂದಿದ್ದಾರೆ ಎಂದು ಸುದೀಪ್ ಹೇಳಿದರು.