ಬೆಂಗಳೂರು: ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಅವ್ಯವಹಾರ ನಡೆಸಲಾಗಿದೆ ಎಂಬ ಆರೋಪದ ಮೇಲೆ ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿ ಅವರನ್ನು ಅಮಾನತು ಮಾಡಲಾಗಿದೆ. ಈ ಬಗ್ಗೆ ವಿಧಾನ ಸಭೆ ಅಧೀನ ಕಾರ್ಯದರ್ಶಿಯಿಂದ ಆದೇಶ ಹೊರಬಿದ್ದಿದ್ದು, ವಿಶೇಷ ಮಂಡಳಿಯ ಆದೇಶಾನುಸಾರ ಅಮಾನತು ಆದೇಶ ಮಾಡಲಾಗಿದೆ.
2016 ರ ಬೆಳಗಾವಿ ಅಧಿವೇಶನಕ್ಕೆ 20 ಕೋಟಿ ರೂ. ಹಾಗೂ 2017 ರ ಅಧಿವೇಶನಕ್ಕೆ 21.57 ಕೋಟಿ ರೂ. ಖರ್ಚು ಮಾಡಿ ದುಂದು ವೆಚ್ಚ ಮಾಡಲಾಗಿದೆ ಎಂಬ ಆರೋಪ ಈ ಹಿಂದೆ ಕೇಳಿ ಬಂದಿತ್ತು. ಜತೆಗೆ, 2016-17ರ ಬೆಳಗಾವಿ ಅಧಿವೇಶನದಲ್ಲಿ ಔಚಿತ್ಯ ಸೂತ್ರ ಪಾಲಿಸಿಲ್ಲ. ಟೆಂಡರ್ ಕರೆಯದೆ, ಜಿಎಸ್ಟಿ ಬಿಲ್ ಪಾವತಿಸದೆ ಹಲವು ಕಾಮಗಾರಿ ನಡೆಸಲಾಗಿದೆ ಎಂಬ ಗಂಭೀರ ಆರೋಪ ಎಸ್.ಮೂರ್ತಿ ವಿರುದ್ಧ ಕೇಳಿ ಬಂದಿತ್ತು. ಸುಮಾರು 8.60 ಲಕ್ಷ ರೂ. ಖರ್ಚು ಮಾಡಲು ಟೆಂಡರ್ ಕರೆಯದೆ ಕಾಮಗಾರಿ ಮಾಡಲಾಗಿದೆ ಎಂದು ಆರೋಪ ಮಾಡಲಾಗಿತ್ತು.
ವಿಧಾನಸ ಸಭೆಯ ನಿಯಮಗಳನ್ನು ಪಾಲಿಸದೆ ಕಾಮಗಾರಿ ನಡೆಸಿ ವ್ಯಾಪಕ ಅಕ್ರಮ ಎಸಗಲಾಗಿದೆ ಎಂಬ ಆರೋಪಗಳ ಹಿನ್ನೆಲೆ, ತನಿಖೆ ನಡೆಸಿದ ಐವರ ಸಮಿತಿ ರಚಿಸಲಾಗಿತ್ತು. ಈ ತನಿಖಾ ಸಮಿತಿ ಸಲ್ಲಿಸಿದ ವರದಿಯ ಆಧಾರದ ಮೇಲೆ ಎಸ್.ಮೂರ್ತಿ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.