Who is Chethan Sharma: ಚೇತನ್ ಶರ್ಮಾ… ಜೀ ನ್ಯೂಸ್ ಮಾಡಿದ ಸ್ಟಿಂಗ್ ಆಪರೇಷನ್ ಮೂಲಕ ಚೇತನ್ ಶರ್ಮಾ ಹೆಸರು ಇದ್ದಕ್ಕಿದ್ದಂತೆ ಹೈಲೈಟ್ ಆಗಿತ್ತು. ಟೀಂ ಇಂಡಿಯಾದ ನಕಲಿ ಫಿಟ್ನೆಸ್ ರಹಸ್ಯಗಳು, ಆಟಗಾರರ ಆಯ್ಕೆ, ವಿಶ್ರಾಂತಿಯ ಹೆಸರಿನಲ್ಲಿ ಆಟಗಾರರನ್ನು ಆಟದಿಂದ ದೂರವಿಡುವ ತಂತ್ರ, ಯಾರನ್ನು ಕೈಬಿಡಬೇಕು-ಯಾರಿಗೆ ಅವಕಾಶ ನೀಡಬೇಕು ಎಂದು ನಿರ್ಧರಿಸುವವರು ಯಾರು? ಬಿಸಿಸಿಐ ಮುಖ್ಯಸ್ಥರಾಗಿದ್ದ ಸೌರವ್ ಗಂಗೂಲಿ ಮತ್ತು ವಿರಾಟ್ ಕೊಹ್ಲಿ ನಡುವಿನ ಘರ್ಷಣೆ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಡುವಿನ ಅಹಂ ಹೀಗೆ ಅದೆಷ್ಟೋ ವಿಚಾರಗಳು ಚೇತನ್ ಶರ್ಮಾ ಬಾಯಿಂದ ಹೊರಬಂದಿದೆ.
ಇದನ್ನೂ ಓದಿ: “ವಿರಾಟ್ ಕೊಹ್ಲಿ ಸುಳ್ಳುಗಾರ”: Zee News ರಹಸ್ಯ ಕಾರ್ಯಾಚರಣೆಯಲ್ಲಿ ಕೊಹ್ಲಿ ಬಗ್ಗೆ ಚೇತನ್ ಬಿಚ್ಚಿಟ್ಟ ಮಹಾರಹಸ್ಯವೇನು!
ಯಾರು ಈ ಚೇತನ್ ಶರ್ಮಾ? ಈ ಹಿಂದೆ ಟೀಂ ಇಂಡಿಯಾದಲ್ಲಿ ಚೇತನ್ ಶರ್ಮಾ ಅವರ ಸ್ಥಾನ ಏನಾಗಿತ್ತು? ಅವರು ಬಿಸಿಸಿಐ ಆಯ್ಕೆ ಸಮಿತಿಯ ಮುಖ್ಯಸ್ಥರಾದದ್ದು ಹೇಗೆ? ಈ ಎಲ್ಲಾ ವಿಚಾರಗಳಿಗೆ ಇಂದು ನಾವು ಉತ್ತರ ನೀಡುತ್ತೇವೆ.
ಜನವರಿ 3, 1966 ರಂದು ಜನಿಸಿದ ಚೇತನ್ ಶರ್ಮಾ, 1983 ರಲ್ಲಿ 17 ನೇ ವಯಸ್ಸಿನಲ್ಲಿ ಪಂಜಾಬ್‌ಗಾಗಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಅದರ ಮುಂದಿನ ವರ್ಷ ODI ಅಂತರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದರು. ಟೀಂ ಇಂಡಿಯಾ ಪರವಾಗಿ ಏಕದಿನ ಹಾಗೂ ಟೆಸ್ಟ್ ಪಂದ್ಯಗಳನ್ನು ಆಡಿರುವ ಚೇತನ್ ಶರ್ಮಾ ವೇಗದ ಬೌಲರ್ ಆಗಿ ಹೆಸರು ಮಾಡಿದ್ದಾರೆ.
ಮೊದಲ ಅಂತಾರಾಷ್ಟ್ರೀಯ ಪಂದ್ಯ
1984 ರಲ್ಲಿ, ಚೇತನ್ ಶರ್ಮಾ ಪಾಕಿಸ್ತಾನದ ಲಾಹೋರ್‌ನಲ್ಲಿ ಆ ದೇಶದ ವಿರುದ್ಧ ಟೆಸ್ಟ್ ಪಂದ್ಯವನ್ನು ಆಡುವ ಮೂಲಕ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನವನ್ನು ಪ್ರಾರಂಭಿಸಿದರು. ಇಲ್ಲಿ ಇನ್ನೊಂದು ವಿಶೇಷವೆಂದರೆ ಚೇತನ್ ಶರ್ಮಾ ಮೊದಲ ಟೆಸ್ಟ್ ಪಂದ್ಯದ ಮೊದಲ ಓವರ್ ನ 5ನೇ ಎಸೆತದಲ್ಲಿ ಮೊಹಿಸಿನ್ ಖಾನ್ ಅವರನ್ನು ಔಟ್ ಮಾಡುವ ಮೂಲಕ ಮೊದಲ ಓವರ್ ನಲ್ಲೇ ವಿಕೆಟ್ ಪಡೆದ ಭಾರತದ 3ನೇ ಕ್ರಿಕೆಟಿಗ ಎಂಬ ದಾಖಲೆ ಪಡೆದರು.
ಚೇತನ್ ಶರ್ಮಾ ಏಕದಿನ ವಿಶ್ವಕಪ್ ಪಂದ್ಯವೊಂದರಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಚೇತನ್ ಶರ್ಮಾ ಅವರು 1987 ರ ರಿಲಯನ್ಸ್ ವಿಶ್ವಕಪ್ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಈ ದಾಖಲೆಯನ್ನು ಮಾಡಿದ್ದಾರೆ.
ಚೇತನ್ ಶರ್ಮಾ ಅವರು ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ದೇಸ್ಪ್ರೇಮ್ ಆಜಾದ್ ಅವರಿಂದ ಕ್ರಿಕೆಟ್ ತರಬೇತಿ ಪಡೆದರು. ಸ್ವತಃ ಕಪಿಲ್ ದೇವ್ ಅವರಿಗೆ ತರಬೇತಿ ನೀಡಿದವರು. ಪ್ರಸ್ತುತ, ದೇಶ್ ಪ್ರೇಮ್ ಆಜಾದ್ ಈ ಪೀಳಿಗೆಯ ಆಟಗಾರರಾದ ವೆಂಕಟೇಶ್ ಅಯ್ಯರ್ ಮತ್ತು ಶಾರ್ದೂಲ್ ಠಾಕೂರ್ ಅವರಿಗೆ ತರಬೇತಿ ನೀಡುತ್ತಿದ್ದಾರೆ.
ಶ್ರೀಲಂಕಾ ಪ್ರವಾಸದ 3 ಟೆಸ್ಟ್ ಪಂದ್ಯಗಳಲ್ಲಿ 14 ವಿಕೆಟ್:
1985 ರಲ್ಲಿ, ಚೇತನ್ ಶರ್ಮಾ ಶ್ರೀಲಂಕಾ ಪ್ರವಾಸದಲ್ಲಿ 3 ಟೆಸ್ಟ್ ಪಂದ್ಯಗಳಲ್ಲಿ 14 ವಿಕೆಟ್‌ಗಳನ್ನು ಪಡೆಯುವ ಮೂಲಕ ಸೂಪರ್ ಫಾಸ್ಟ್ ಬೌಲರ್ ಆಗಿ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರು.
ಇಂಗ್ಲೆಂಡ್ ನೆಲದಲ್ಲಿ ಮುರಿಯಲಾಗದ ದಾಖಲೆ!
1986ರಲ್ಲಿ ಇಂಗ್ಲೆಂಡ್ ಪ್ರವಾಸದಲ್ಲಿದ್ದಾಗ ಭಾರತ ತಂಡವನ್ನು 2-0 ಅಂತರದಿಂದ ಸೋಲಿಸಿತ್ತು. ಆ ಎರಡು ಪಂದ್ಯಗಳಲ್ಲಿ ಚೇತನ್ ಶರ್ಮಾ ಒಟ್ಟು 16 ವಿಕೆಟ್ ಪಡೆದಿರುವುದು ಗಮನಾರ್ಹ. ಒಂದೇ ಪಂದ್ಯದಲ್ಲಿ 10 ವಿಕೆಟ್ ಪಡೆದ ಆಟಗಾರ ಎಂಬ ದಾಖಲೆ ನಿರ್ಮಿಸಿದರು. ಇಂಗ್ಲೆಂಡ್‌ನಲ್ಲಿ ಒಂದೇ ಪಂದ್ಯದಲ್ಲಿ 10 ವಿಕೆಟ್ ಪಡೆದ ಏಕೈಕ ಆಟಗಾರ ಎಂಬ ಚೇತನ್ ಶರ್ಮಾ ಅವರ ದಾಖಲೆಯನ್ನು ಇದುವರೆಗೆ ಯಾರೂ ಮುರಿದಿಲ್ಲ.
ವೃತ್ತಿಜೀವನ ಯಾವಾಗ ಕೊನೆಗೊಂಡಿತು?
ಚೇತನ್ ಶರ್ಮಾ 1996 ರಲ್ಲಿ ಕ್ರಿಕೆಟ್‌ನಿಂದ ನಿವೃತ್ತರಾದರು. ಅವರು 2004 ರಲ್ಲಿ ಹರಿಯಾಣದ ಪಂಚಕುಲದಲ್ಲಿ ವೇಗದ ಬೌಲಿಂಗ್ ಕ್ರಿಕೆಟ್ ಅಕಾಡೆಮಿಯನ್ನು ಸ್ಥಾಪಿಸಿದರೂ ಸಹ ಅದನ್ನು 2009 ರಲ್ಲಿ ಮುಚ್ಚಿದರು. ಆ ಬಳಿಕ ದೀರ್ಘಕಾಲದವರೆಗೆ ಕ್ರಿಕೆಟ್ ವಿವರಣೆಗಾರರಾಗಿದ್ದರು. ಚೇತನ್ ಶರ್ಮಾ ಮತ್ತೊಬ್ಬ ಹಿರಿಯ ಕ್ರಿಕೆಟಿಗ ಯಶಪಾಲ್ ಶರ್ಮಾ ಅವರ ಹತ್ತಿರದ ಸಂಬಂಧಿಯಾಗಿದ್ದಾರೆ.
ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಗೊಂಡ ಚೇತನ್ ಶರ್ಮಾ ಅವರು 2009 ರಲ್ಲಿ ಫರಿದಾಬಾದ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ನಂತರ ಬಿಜೆಪಿ ಸೇರಿ ಕ್ರೀಡಾ ಘಟಕದ ಸಂಚಾಲಕರಾದರು.
ಇದನ್ನೂ ಓದಿ: “ಟೀಂ ಇಂಡಿಯಾದ ಈ ಮೂವರ ವೃತ್ತಿಜೀವನ ಬಹುತೇಕ ಮುಳುಗಿದೆ” Zee News Sting Operationನಲ್ಲಿ ಚೇತನ್ ಶರ್ಮಾ ಹೇಳಿಕೆ!
ಡಿಸೆಂಬರ್ 2020 ರಲ್ಲಿ, ಚೇತನ್ ಶರ್ಮಾ ಅವರನ್ನು ಬಿಸಿಸಿಐ ಆಯ್ಕೆ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಆದರೆ ನವೆಂಬರ್ 2022 ರಲ್ಲಿ ನಡೆದ ವಿಶ್ವಕಪ್‌ನಿಂದ ಟೀಮ್ ಇಂಡಿಯಾ ನಿರ್ಗಮಿಸಿದ ನಂತರ, ಅವರನ್ನು ಆ ಸ್ಥಾನದಿಂದ ತೆಗೆದುಹಾಕಲಾಯಿತು. ಅದರ ನಂತರ, ಬಿಸಿಸಿಐ ಕ್ರಿಕೆಟ್ ಸಲಹಾ ಸಮಿತಿಯು ಕಳೆದ ತಿಂಗಳು, ಅಂದರೆ ಜನವರಿ 7, 2023 ರಂದು ಚೇತನ್ ಶರ್ಮಾ ಅವರನ್ನು ಬಿಸಿಸಿಐ ಆಯ್ಕೆ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಿ ಆದೇಶ ಹೊರಡಿಸಿತು.
ಚೇತನ್ ಶರ್ಮಾ ಮತ್ತೊಮ್ಮೆ ಈ ಹುದ್ದೆಯನ್ನು ಅಲಂಕರಿಸಿದ್ದಾರೆ. ಇದೀಗ ಜೀ ನ್ಯೂಸ್ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಬಿಸಿಸಿಐನಲ್ಲಿ ನಡೆಯುತ್ತಿರುವ ಗುಪ್ತ ಸಂಗತಿಗಳು ಬಹಿರಂಗವಾಗಿವೆ. ಈ ಮೂಲಕ ಮತ್ತೊಂದು ಸಂಚಲನ ಮೂಡಿಸಿದ್ದಾರೆ. ಇದು ಚೇತನ್ ಶರ್ಮಾ ಕಥೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.