'ಅಯೋಧ್ಯೆ ಬೇಡ, ನಮಗೆ ಸಾಲ ಮನ್ನಾ ಮಾಡಿ': ದಿಲ್ಲಿ ಚಲೋದಲ್ಲಿ ರೈತರ ಘೋಷಣೆ

ರಾಷ್ಟ್ರ ರಾಜಧಾನಿಯಲ್ಲಿ ದೆಹಲಿಯಲ್ಲಿ ರೈತರ ಕಿಸಾನ್ ಮುಕ್ತಿ ಮಾರ್ಚ್ ನಲ್ಲಿ 'ಜೈ ಜವಾನ್, ಜೈ ಕಿಸಾನ್'  ಮತ್ತು 'ಅಯೋಧ್ಯ ನಹಿ, ಕರ್ಜ್ ಮಾಫಿ ಚಾಹಿಯೆ'('ಅಯೋಧ್ಯೆ ಬೇಡ ನಮಗೆ ಸಾಲ ಮನ್ನಾ ಮಾಡಿ) ಎನ್ನುವ ರೈತರ ಘೋಷಣೆಗಳು ಮೊಳಗಿದವು. 

Last Updated : Nov 30, 2018, 03:49 PM IST
 'ಅಯೋಧ್ಯೆ ಬೇಡ, ನಮಗೆ ಸಾಲ ಮನ್ನಾ ಮಾಡಿ': ದಿಲ್ಲಿ ಚಲೋದಲ್ಲಿ ರೈತರ ಘೋಷಣೆ  title=
photo:PTI

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ದೆಹಲಿಯಲ್ಲಿ ರೈತರ ಕಿಸಾನ್ ಮುಕ್ತಿ ಮಾರ್ಚ್ ನಲ್ಲಿ 'ಜೈ ಜವಾನ್, ಜೈ ಕಿಸಾನ್'  ಮತ್ತು 'ಅಯೋಧ್ಯ ನಹಿ, ಕರ್ಜ್ ಮಾಫಿ ಚಾಹಿಯೆ'('ಅಯೋಧ್ಯೆ ಬೇಡ ನಮಗೆ ಸಾಲ ಮನ್ನಾ ಮಾಡಿ) ಎನ್ನುವ ರೈತರ ಘೋಷಣೆಗಳು ಮೊಳಗಿದವು. 

ಗುರುವಾರದಂದು ರಾಮಲೀಲಾ ಮೈದಾನದಲ್ಲಿ ನೆಲೆಗೊಂಡಿದ್ದ ರೈತರು ಇಂದು ಜಂತರ್ ಮಂತರ್ ರ ಹತ್ತಿರದ ಸಂಸದ ಮಾರ್ಗ್ ಗೆ ತೆರಳಿ "ನಮಗೆ ಅಯೋಧ್ಯೆ ಬೇಡ ನಮ್ಮ ಸಾಲಮನ್ನಾ ಮಾಡಿ" ಎನ್ನುವ ಘೋಷಣೆ ಕೂಗಿದರು.

'ಚಲೋ ದಿಲ್ಲಿ' ಎಂದು ಸಹ ಕರೆಯಲ್ಪಡುವ ಕಿಸಾನ್ ಮುಕ್ತಿ ಮಾರ್ಚ್, ದೇಶದ ಕೃಷಿ ಬಿಕ್ಕಟ್ಟನ್ನು ಗಮನ ಸೆಳೆಯುವ ಗುರಿಯನ್ನು ಹೊಂದಿದೆ. ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಸಂಸತ್ ನಲ್ಲಿ  21 ದಿನಗಳ ಕಾಲ ವಿಶೇಷ ಅಧಿವೇಶನವನ್ನು ನಡೆಸಬೇಕು, ಅಲ್ಲದೇ ಕನಿಷ್ಠ ಬೆಂಬಲ ಬೆಲೆಯನ್ನು ಸಹ ಒದಗಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

ಆಲ್ ಇಂಡಿಯಾ ಕಿಸಾನ್ ಸಂಘರ್ಶ್ ಕೋಆರ್ಡಿನೇಶನ್ ಕಮಿಟಿಯು ನೇತೃತ್ವದ ಈ ಹೋರಾಟದಲ್ಲಿ ಸುಮಾರು 180 ಕ್ಕೂ ಅಧಿಕ ರೈತ ಸಂಘಟನೆಗಳು ಪಾಲ್ಗೊಂಡಿವೆ.ಆಂಧ್ರಪ್ರದೇಶ, ಕರ್ನಾಟಕ, ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ ಮತ್ತು ಇತರ ರಾಜ್ಯಗಳ ರೈತರು ಮತ್ತು ಗ್ರಾಮೀಣ ಪ್ರದೇಶದ ಕೂಲಿ ಕಾರ್ಮಿಕರು ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ.

"ಅಬ್ ಹಕ್ ಕೆ ಬಿನಾ ಬಿ ಕ್ಯಾ ಜೀನಾ, ಯೆ ಜೀನ್ ಕೆ ಸಮಾನ್ ನಹಿ (ಹಕ್ಕುಗಳಿಲ್ಲದೆ ಹೋದರೆ ಬದುಕಿಗೆ ಅರ್ಥವಿಲ್ಲ ) ಎಂದು ಘೋಷಣೆ ಕೂಗಿದ ರೈತರು ಕಿಸಾನ್ ಸಂಸದ್ ಸಿದ್ದಪಡಿಸಿದ ಎರಡು ಕಿಸಾನ್ ಮುಕ್ತಿ ಮಸೂದೆಗಳನ್ನು ಸಂಸತ್ ನಲ್ಲಿ ಜಾರಿಗೆ ತರಬೇಕು. ಆ ಮೂಲಕ ,ಸಾಲ, ನ್ಯಾಯಯುತ ಬೆಲೆ, ವೇತನ, ಉದ್ಯೋಗ, ಒಳ್ಳೆಯ ಶಿಕ್ಷಣ, ಆರೋಗ್ಯ ರಕ್ಷಣೆ, ಪೋಷಣೆಯ ಭದ್ರತೆ ನೀಡುವಂತಾಗಬೇಕು. ಅಲ್ಲದೆ ಎಂಎಸ್ ಸ್ವಾಮಿನಾಥನ್ ವರದಿಯನ್ನು ಸಹ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.

ಈ ರೈತರ ಹೋರಾಟಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್, ನ್ಯಾಷನಲ್ ಕಾನ್ಫರೆನ್ಸ ನ ಫಾರೂಕ್ ಅಬ್ದುಲ್ಲಾ, ತೃಣಮೂಲ ಕಾಂಗ್ರೆಸ್ ನ ದಿನೇಶ್ ತ್ರಿವೇದಿ, ಲೋಕತಾಂತ್ರಿಕ ಜನತಾ ದಳದ ಶರದ್ ಯಾದವ್, ಸಾಮಾಜಿಕ ಕಾರ್ಯಕರ್ತರಾದ ಮೇಧಾ ಪಾಟ್ಕರ್ ಮತ್ತು ಪತ್ರಕರ್ತ ಪಿ. ಸಾಯಿನಾಥ್ ಸೇರಿದಂತೆ ಹಲವು ನಾಯಕರು ಈ ರ್ಯಾಲಿಗೆ ಬೆಂಬಲ ಸೂಚಿಸಿದ್ದಾರೆ.

Trending News