ಬೆಂಗಳೂರು: ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ರಂಪಾಟ ನಡೆದಿದ್ದು, ಕಾಂಗ್ರೆಸ್ ಪಕ್ಷದ ಮುಖಂಡ ಕೆಜಿಎಫ್ ಬಾಬು ವಿರುದ್ಧ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜೊತೆಗೆ ಕೆಜಿಎಫ್ ಬಾಬು ಮಾತನಾಡುತ್ತಿದ್ದರು. ಈ ವೇಳೆ ಕಾಂಗ್ರೆಸ್ನ ಹಿರಿಯ ನಾಯಕ ಆರ್.ವಿ.ದೇವರಾಜ್ ವಿರುದ್ಧ ಮಾತನಾಡುತ್ತಿದ್ದರು. ಕಾಂಗ್ರೆಸ್ ಪಕ್ಷ ಹೀಗೆ ನಡೆದರೆ ಮುಂಬರುವ ಚುನಾವಣೆಯಲ್ಲಿ 80 ಕ್ಷೇತ್ರಗಳನ್ನು ಗೆಲ್ಲುವುದಿಲ್ಲವೆಂದು ಹೇಳಿದಾಗ ‘ಕೈ’ ಕಾರ್ಯಕರ್ತರು ಬಾಬು ವಿರುದ್ಧ ಕೆಂಡಾಮಂಡಲಗೊಂಡರು. ಹೀಗೆಲ್ಲ ಇಲ್ಲಿ ನಿಂತು ಮಾತಾಡಬೇಡ ಅಂತಾ ಏಕವಚನದಲ್ಲೇ ಹೇಳಿ ಹೊರಗೆ ಕಳಿಸಿದರು.
ಇದನ್ನೂ ಓದಿ: ಆಟೋ ಚಾಲಕರ ಸುಲಿಗೆಗೆ ಲಗಾಮು ಹಾಕಲು ಮುಂದಾದ ಸಂಚಾರಿ ಪೊಲೀಸರು, BMRCL
ಕೆಜಿಎಫ್ ಬಾಬು ಹೇಳಿದ್ದೇನು?
‘ನಾನು ಚಿಕ್ಕಪೇಟೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಪ್ರತಿ ಮನೆಗೆ ತಲಾ 5 ಸಾವಿರ ರೂ. ಕೊಟ್ಟಿದ್ದೇನೆ. ಇದಕ್ಕಾಗಿ 30 ಕೋಟಿ ರೂ. ಹಣ ಖರ್ಚು ಮಾಡಿದ್ದೇನೆ. ಇದನ್ನ ಯಾರೂ ಧೈರ್ಯವಾಗಿ ಹೇಳೋದಿಲ್ಲ. ಆದರೆ ಕಾಂಗ್ರೆಸ್ ಕಾರ್ಯಕರ್ತರು ನನಗೆ ಸಾಥ್ ನೀಡಲಿಲ್ಲ. ನಾನು 3 ಸಾವಿರ ಮನೆ ಕಟ್ಟಿಕೊಡುತ್ತಿದ್ದೇನೆ. ಬಡವರು ಬಡವರಾಗಿಯೇ ಇರಬೇಕಾ?’ ಎಂದು ಪ್ರಶ್ನಿಸಿದರು.
180 ಕೋಟಿ ರೂ. ಹಣ ಖರ್ಚು ಮಾಡ್ತಿದ್ದೇನೆ. ಆರ್.ವಿ.ದೇವರಾಜ್ ಸ್ಲಂ ಬೋರ್ಡ್ ನಲ್ಲಿ ಡಿಪಾಸಿಟ್ ಮಾಡ್ಬೇಕು ಅಂತಿದ್ದಾರೆ. ಅವರು ಕಲಾಸಿಪಾಳ್ಯದಲ್ಲಿ ದೂರು ಕೊಟ್ಟಿದ್ದಾರೆ. ಅವರು ಕೆಲಸ ಮಾಡೋದಿಲ್ಲ, ಬೇರೆಯವರಿಗೂ ಕೆಲಸ ಮಾಡಲು ಬಿಡೋದಿಲ್ಲ. ಹೀಗಾದ್ರೆ ಕ್ಷೇತ್ರ ಉದ್ಧಾರವಾಗುತ್ತಾ? ಎಂದು ಬಾಬು ಕಿಡಿಕಾರಿದರು.
ಮನೆಗಳನ್ನು ಅಲ್ಲಿನವರು ಖಾಲಿ ಮಾಡಲಿ, ನಾನು ಮನೆಯನ್ನು ಕಟ್ಟಿ ಕೊಡುತ್ತೇನೆ. 3 ಬಾರಿ ಗೆದ್ದಿದ್ದಾರೆ, 4 ಬಾರಿ ಸೋತಿದ್ದಾರೆ. ಒಂದೋ ಅವರು ಮಾಡಬೇಕು, ಇಲ್ಲ ನನಗೆ ಬಿಡಬೇಕು. ರೌಡಿಗಳನ್ನು ಕಳಿಸುವುದು, ಇಡಿ-ಐಟಿ ಕಳಿಸುತ್ತಾರೆ. ನಾನು ಕಾಂಗ್ರೆಸ್ ಪಕ್ಷದಲ್ಲೇ ಇದ್ದೇನೆ. ನಮ್ಮ ತಾತ-ಮುತ್ತಾತ ಎಲ್ಲರೂ ಇಲ್ಲೇ ಇದ್ದಾರೆ. ಹೀಗೆ ಆದರೆ ಕಾಂಗ್ರೆಸ್ 80 ಕ್ಷೇತ್ರವನ್ನೂ ದಾಟೋದಿಲ್ಲ ಎಂದು ಕೆಜಿಎಫ್ ಬಾಬು ಹೇಳಿದರು.
ಇದನ್ನೂ ಓದಿ: ನಾನು ಬಿಜೆಪಿ ಸೇರ್ಪಡೆ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ: ಸಂಸದೆ ಸುಮಲತಾ ಅಂಬರೀಶ್
ಕೆಜಿಎಫ್ ಬಾಬುಗೆ ಚಳಿ ಬಿಡಿಸಿದ ಕಾಂಗ್ರೆಸ್ ಕಾರ್ಯಕರ್ತರು!
ಕೆಪಿಸಿಸಿ ಕಚೇರಿಯಲ್ಲಿದ್ದ ಕಾರ್ಯಕರ್ತರು ಬಾಬುಗೆ ಏರು ಧ್ವನಿಯಲ್ಲಿ ಮಾತನಾಡಿ ಆಕ್ರೋಶ ವ್ಯಕ್ತಪಡಿಸಿದರು. ಹೀಗೆಲ್ಲ ಇಲ್ಲಿ ನಿಂತು ಮಾತಾಡಬೇಡ, ಹೊರಗೆ ಹೋಗು ಎಂದರು. ಆಗ ಕಾರ್ಯಕರ್ತರಿಗೇ ಆವಾಜ್ ಹಾಕಲು ಹೋದ ಕೆಜಿಎಫ್ ಬಾಬು, ಕೆಪಿಸಿಸಿ ಕಚೇರಿಯಲ್ಲಿ ಇರುವವರು ಸರಿ ಇಲ್ಲ, ಪಕ್ಷದ ಅಧ್ಯಕ್ಷರು ಹೆಂಡತಿ-ಮಕ್ಕಳನ್ನು ಬಿಟ್ಟು ಕೆಲಸ ಮಾಡ್ತಿದ್ದಾರೆ. ಸಿದ್ದರಾಮಯ್ಯನವರು ಹಗಲು-ರಾತ್ರಿ ಕೆಲಸ ಮಾಡ್ತಿದ್ದಾರೆ. ಆದರೆ ಕೆಪಿಸಿಸಿ ಕಚೇರಿಯಲ್ಲಿ ಇರುವವರು ಸರಿ ಇಲ್ಲ. ಇಲ್ಲಿ ಬಂದವರಿಗೆ ಮರ್ಯಾದೆ ಕೊಡುವುದಿಲ್ಲವೆಂದು ಹೇಳಿದರು.
ಈ ವೇಳೆ ಮಧ್ಯಪ್ರವೇಶಿಸಿದ ಕಾರ್ಯಕರ್ತರು, ಇದನ್ನೆಲ್ಲಾ ಹೋಗಿ ಹೊರಗೆ ಮಾತನಾಡು. ಕೆಪಿಸಿಸಿ ಕಚೇರಿಯಲ್ಲಿ ನಿಂತು ಮಾತನಾಡಬೇಡವೆಂದು ಕೆಜಿಎಫ್ ಬಾಬುಗೆ ತಾಕೀತು ಮಾಡಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.