ಬೆಳಗಾವಿ ಚಳಿಗಾಲದ ಅಧಿವೇಶನ ಅಂತ್ಯ

     

Last Updated : Nov 25, 2017, 11:17 AM IST
ಬೆಳಗಾವಿ ಚಳಿಗಾಲದ ಅಧಿವೇಶನ ಅಂತ್ಯ title=

ಬೆಳಗಾವಿ: ಕಳೆದ ಹತ್ತು ದಿನಗಳಿಂದ ಬೆಳಗಾವಿ ಸುವರ್ಣಸೌಧದಲ್ಲಿ ನಡೆಯುತ್ತಿದ್ದ ಚಳಿಗಾಲದ ಅಧಿವೇಶನ ನ.24ರಂದು ಕೊನೆಗೊಂಡಿದೆ. 

ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ವಿದೇಯಕವು ವೈದ್ಯರ ಮುಷ್ಕರಕ್ಕೆ ಕಾರಣವಾಗಿ ವೈದ್ಯಕೀಯ ಲೋಕದಲ್ಲಿ ತುರ್ತು ಪರಿಸ್ಥಿತಿ ನಿರ್ಮಿಸಿತ್ತು. ಆದರೂ ಪಟ್ಟು ಬಿಡದ ಸರ್ಕಾರ ಕಾಯ್ದೆಯನ್ನು ಕೆಲ ಮಾರ್ಪಾಡುಗಳೊಂದಿಗೆ ಅಂಗೀಕರಿಸಿತು.

ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿಯಿರುವ ಹಿನ್ನಲೆಯಲ್ಲಿ ಈ ಬಾರಿಯ ಚಳಿಗಾಲ ಅಧಿವೇಶನ ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿತ್ತು. ಆದರೆ, ವಿಧಾನಸಭೆಯಲ್ಲಿ ಕೇವಲ ನಾಲ್ವರು ಶಾಸಕರು ಚರ್ಚೆಯಲ್ಲಿ ಪಾಲ್ಗೊಂಡರೆ, ವಿಧಾನ ಪರಿಷತ್ ನಲ್ಲಿ 25 ಶಾಸಕರು ಭಾಗಿಯಾಗಿದ್ದರು. ಶಾಸಕರ ನಿರುತ್ಸಾಹ ಸ್ಪಂದನೆ ಅಧಿವೇಶನದಲ್ಲಿ ಎದ್ದು ಕಂಡಿತ್ತು. 

ಈ ನಡುವೆಯೂ ಬಹುನಿರೀಕ್ಷಿತ ಮೌಢ್ಯ ಪ್ರತಿಬಂಧಕ ಮತ್ತು ಅಮಾನವೀಯ ಪದ್ಧತಿಗಳ ನಿಷೇಧ ಕಾಯ್ದೆ, ಬಡ್ತಿ ಮೀಸಲಾತಿ ಮಸೂದೆಗಳು ಸುದೀರ್ಘ ಚರ್ಚೆಯ ಮೂಲಕ ಅಂಗೀಕಾರಗೊಂಡಿತು. ಇಂಧನ ಖರೀದಿಯಲ್ಲಿ ಬಿ.ಎಸ್.ಯಡಿಯೂರಪ್ಪ ಮತ್ತು ಶೋಭಾ ಕರಂದ್ಲಾಜೆ ಅವಧಿಯಲ್ಲಿ ನಡೆದ ಅವ್ಯವಹಾರದ ಬಗ್ಗೆ ಇಂದನ ಸಚಿವ ಡಿ.ಕೆ. ಶಿವಕುಮಾರ್ ನೇತೃತ್ವದ ಸಮಿತಿಯ ವರದಿ ಭಾರಿ ಚರ್ಚೆ ಹುಟ್ಟು ಹಾಕಿತು. ಇದಲ್ಲದೆ ಕೆರೆ ಅಧ್ಯಯನ ಸದನ ಸಮಿತಿ, ನೈಸ್ ಸದನ ಸಮಿತಿ ವರದಿಗಳು ಸದನದಲ್ಲಿ ಬಿರುಸಿನ‌ ಚರ್ಚೆಗೆ ಕಾರಣವಾಗಿದ್ದವು.

ಉತ್ತರ ಕರ್ನಾಟಕಕ್ಕೆ ಸಂಬಂಧಿಸಿ ಸರ್ಕಾರವನ್ನು ಹಣಿಯುವಲ್ಲಿ ಪ್ರತಿಪಕ್ಷಗಳು ವಿಫಲವಾದವು. ಇದೇ ಸಂದರ್ಭವನ್ನು ಉತ್ತಮವಾಗಿ ಬಳಸಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂಕಿ ಅಂಶಗಳ ಮೂಲಕ ಉತ್ತರ ಕರ್ನಾಟಕಕ್ಕೆ ತಮ್ಮ ಸರ್ಕಾರ ನೀಡಿರುವ ಕೊಡುಗೆಗಳನ್ನು ವಿವರಿಸಿದರು. 

ಇಷ್ಟಾದರೂ ಕೂಡ ಉತ್ತರ ಕರ್ನಾಟಕ ಜನತೆಯ ಸಂಕಷ್ಟಗಳು ಹಾಗೂ ಸಮಸ್ಯೆಗಳನ್ನು ಚರ್ಚೆಸುವಲ್ಲಿ ಸದನ ವಿಫಲವಾಗಿದೆ ಎಂದು ಜನತೆ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

Trending News