ಬೆಂಗಳೂರು: ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಮೊನ್ನೆಯಷ್ಟೇ ಸಭೆ ನಡೆಸಿದ್ದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಇಂದು ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಸಭೆ ನಡೆಸಲಿದ್ದಾರೆ.
ರೈತರಿಗೆ ಕಬ್ಬಿನ ಬಾಕಿ ಹಣ ಉಳಿಸಿಕೊಂಡಿರುವ ಮಾಲೀಕರೊಂದಿಗೆ ಸಿಎಂ ಸಭೆ ಕರೆದಿದ್ದು, ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಧ್ಯಾಹ್ನ 12:30ಕ್ಕೆ ಸಭೆ ನಡೆಯಲಿದೆ. ಇಂದಿನ ಸಭೆಗೆ ಎಲ್ಲಾ ಸಕ್ಕರೆ ಕಾರ್ಖಾನೆ ಮಾಲೀಕರು ಹಾಜರಾಗಬೇಕೆಂದು ಕಟ್ಟು ನಿಟ್ಟಿನ ಸೂಚನೆ ನೀಡಿರುವ ಕುಮಾರಸ್ವಾಮಿ ಸಭೆಗೆ ಬರದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
ಮಂಗಳವಾರ ಪ್ರತಿಭಟನಾ ನಿರತ ರೈತ ಸಂಘಟನೆಗಳ ಪ್ರತಿನಿಧಿಗಳು, ಸಕ್ಕರೆ ಕಾರ್ಖಾನೆಗಳು ಮತ್ತು ಅಧಿಕಾರಿಗಳೊಂದಿಗೆ ಆರೂವರೆ ಗಂಟೆಗಳ ಸುದೀರ್ಘ ಸಭೆ ನಡೆಸಿದ್ದ ಸಿಎಂ ಸಕ್ಕರೆ ಕಾರ್ಖಾನೆ ಮಾಲೀಕರು ಸಮ್ಮತಿಸಿದ ದರದಲ್ಲಿ ರೈತರಿಗೆ ಬಾಕಿ ಪಾವತಿಸುವ ನಿಟ್ಟಿನಲ್ಲಿ ಸರ್ಕಾರ ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಿದೆ. ಇದಲ್ಲದೆ ಮುಂದಿನ ದಿನಗಳಲ್ಲಿ ರೈತರಿಗೆ ಕಾರ್ಖಾನೆಗಳಿಂದ ತೂಕ, ಇಳುವರಿ ಪ್ರಮಾಣ, ಕಟಾವು ಮತ್ತು ಸಾರಿಗೆ ವೆಚ್ಚ ಮೊದಲಾದ ವಿಚಾರಗಳಲ್ಲಿ ಮೋಸವಾಗದಂತೆ ತಡೆಯಲು ಸರ್ಕಾರ ಕೆಲವು ನಿಯಮಾವಳಿಗಳನ್ನು ರೂಪಿಸಲಿದೆ ಎಂದು ತಿಳಿಸಿದ್ದರು.
ಅಲ್ಲದೆ, ರೈತರು ಯಾವ ಸಮಸ್ಯೆಯಿದ್ದರೂ ನನ್ನೊಂದಿಗೆ ನೇರವಾಗಿ ಚರ್ಚಿಸುವಂತೆ ಕೋರಿದ್ದೇನೆ. ರೈತರು ಯಾವ ಕಾರಣಕ್ಕೂ ಕಳವಳಕ್ಕೆ ಒಳಗಾಗಬಾರದು. ಸರ್ಕಾರ ರೈತರ ಪರವಾಗಿದೆ ಎಂಬ ಭರವಸೆಯನ್ನೂ ನೀಡಿದ್ದರು.