ಬೆಂಗಳೂರು: ಆ್ಯಂಬಿಡೆಂಟ್ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಜನಾರ್ಧನ ರೆಡ್ಡಿ ಜಾಮೀನು ಅರ್ಜಿ ವಿಚಾರಣೆ ನಡೆಸಿರುವ 1ನೇ ಎಸಿಎಂಎಂ ನ್ಯಾಯಾಲಯ, ವಿಚಾರಣೆ ಮುಕ್ತಾಯಗೊಳಿಸಿದ್ದು, ಬುಧವಾರಕ್ಕೆ ಜಾಮೀನು ಅರ್ಜಿ ಆದೇಶವನ್ನು ಕಾಯ್ದಿರಿಸಿದೆ. ರೆಡ್ಡಿಗೆ ಜೈಲಾ? ಬೇಲಾ? ಎಂಬ ಆದೇಶವನ್ನು ನ್ಯಾಯಾಲಯ ಇಂದು ಪ್ರಕಟಿಸಲಿದೆ.
ಆ್ಯಂಬಿಡೆಂಟ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಜನಾರ್ಧನ ರೆಡ್ಡಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಮತ್ತೊಂದೆಡೆ ರೆಡ್ಡಿ ಪರ ವಕೀಲರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.
ಮಂಗಳವಾರ ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿದ್ದ 1ನೇ ಎಸಿಎಂಎಂ ನ್ಯಾಯಾಲಯದ ಮುಂದೆ ರೆಡ್ಡಿ ಪರ ಹಿರಿಯ ವಕೀಲ ಸಿ.ಹೆಚ್. ಹನುಮಂತರಾಯ ವಾದ ಮಂಡಿಸಿ, 57 ಕೆಜಿ ಚಿನ್ನಕ್ಕೂ ರೆಡ್ಡಿಗೂ ಸಂಬಂಧ ಇಲ್ಲ. 4ನೇ ಆರೋಪಿ ರಮೇಶ್ನಿಂದ 5ನೇ ಆರೋಪಿ ಅಲಿಖಾನ್ ಚಿನ್ನ ಪಡೆದಿದ್ದಾರೆ ಎನ್ನಲಾಗಿದೆ. ಅಲಿಖಾನ್ ಚಿನ್ನ ಕೊಡಬೇಕೇ ಹೊರತು ಜನಾರ್ದನ ರೆಡ್ಡಿಯಲ್ಲ. ಆದರೆ, ಪ್ರಕರಣದ 1ನೇ ಆರೋಪಿ ಫರೀದ್'ಗೆ ಜಾಮೀನು ಸಿಕ್ಕಿದೆ. ಉಳಿದ ಆರೋಪಿಗಳಿಗೆ ಮಧ್ಯಂತರ ಜಾಮೀನು ನೀಡಲಾಗಿದೆ.
ಆದರೆ, ದೂರಿಗೆ ಸಂಬಂಧವೇ ಇಲ್ಲದ 6ನೇ ಆರೋಪಿ ರೆಡ್ಡಿಯವರನ್ನು ಬಂಧನಕ್ಕೊಳಪಡಿಸಲಾಗಿದೆ. ಎಫ್ಐಆರ್ನಲ್ಲಿ ರೆಡ್ಡಿ ಹೆಸರಿಲ್ಲ. ಕೋರ್ಟ್ಗೆ ಸಲ್ಲಿಸಿರುವ ರಿಮೈಂಡ್ ಅಪ್ಲೀಕೇಷನ್ನಲ್ಲೂ ಹೆಸರಿಲ್ಲ. ಆದರೂ ಬಂಧಿಸಲಾಗಿದೆ. ನೋಟಿಸ್ ಕೊಟ್ಟ ಕೂಡಲೇ ಸಿಸಿಬಿ ಕಚೇರಿಗೆ ವಿಚಾರಣೆಗೆ ರೆಡ್ಡಿ ಹಾಜರಾಗಿದ್ದು, 12 ಗಂಟೆಗಳ ಕಾಲ ವಿಚಾರಣೆ ನಡೆಸಿ ಸಿಸಿಬಿ ಕಚೇರಿಯಲ್ಲೇ ಉಳಿಸಿಕೊಂಡು ಆ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಸಿಬಿಐ ಪ್ರಕರಣಗಳಲ್ಲಿ ರೆಡ್ಡಿ ಹಾಜರಾಗಬೇಕಿರುವ ಕಾರಣ ಜಾಮೀನು ಮಂಜೂರು ಮಾಡಬೇಕೆಂದು ಮನವಿ ಮಾಡಿದರು.
ಪ್ರತಿವಾದ ಮಂಡಿಸಿದ ಸಿಸಿಬಿ ಪರ ವಕೀಲ ವೆಂಕಟಗಿರಿಯವರು, ಪ್ರಕರಣದಲ್ಲಿ 600-700 ಕೋಟಿ ರೂ. ವಂಚನೆಯಾಗಿದೆ. ಪ್ರಕರಣದಲ್ಲಿ ರೆಡ್ಡಿ 20 ಕೋಟಿ ರೂ.ಪಡೆದುಕೊಂಡಿದ್ದಾರೆ. ಅಕ್ರಮವಾಗಿ ಒಪ್ಪಂದ ಮಾಡಿಕೊಂಡಿದ್ದಾರೆ. ಜನವರಿಯಿಂದ ಈ ಕುರಿತು ತನಿಖೆ ನಡೆಸಲಾಗಿದೆ ಎಂದು ತಿಳಿಸಿದರು.
ಈ ವೇಳೆ ಪ್ರತಿಕ್ರಿಯೆ ನೀಡಿದ 1ನೇ ಎಸಿಎಂಎಂ ಕೋರ್ಟ್ ನ್ಯಾ.ಜಗದೀಶ್, ರೆಡ್ಡಿ ಮತ್ತು ಕಂಪನಿಗೆ ನೇರ ಸಂಬಂಧ ಇದೆಯೇ? ಹಣವನ್ನು ರೆಡ್ಡಿ ಯಾರಾದರೂ ಕೊಟ್ಟಿದ್ದಾರಾ? ನೇರವಾಗಿ ಯಾವುದಾದರೂ ನಂಟು ಇದೆಯೇ? ಸುಮ್ಮನೆ ಆರೋಪ ಮಾಡಬೇಕೆಂದು ಮಾಡಬೇಡಿ. ನೇರವಾದ ಸಂಬಂಧ ಇರೋದರ ಬಗ್ಗೆ ಮಾಹಿತಿ ನೀಡಿ. ದೂರು ಇರುವುದೇ ಒಂದು, ನೀವು ಮಾಡುತ್ತಿರುವ ತನಿಖೆಯೇ ಮತ್ತೊಂದು. ಗ್ರಾಹಕರು ಅಥವಾ ದೂರುದಾರರು ರೆಡ್ಡಿ ವಿರುದ್ಧ ಕೇಸ್ ಕೊಟ್ಟಿಲ್ಲ. ಹಾಗಿದ್ದರೂ ಸಂಬಂಧ ಇದೆ ಎಂದು ಹೇಗೆ ಹೇಳುತ್ತೀರಾ? ಎಂದು ಸಿಸಿಬಿ ಅಧಿಕಾರಿಗೆ ತರಾಟೆ ತೆಗೆದುಕೊಂಡರು.
ಬಳಿಕ ವಿಚಾರಣೆ ಮುಗಿಸಿ ನ್ಯಾಯಾಧೀಶರು ತೀರ್ಪನ್ನು ಬುಧವಾರಕ್ಕೆ ಕಾಯ್ದಿರಿಸಿದ್ದಾರೆ.