ಸಿದ್ದರಾಮಯ್ಯಗೆ ಬೆಳ್ಳಿ ಖಡ್ಗ, ಹಾರ, ಪೇಟ ತೊಡಿಸಿ ಸನ್ಮಾನಿಸಿದ ಮುಸ್ಲಿಂ ಧರ್ಮಗುರು

ರಾಜಕೀಯ ಕಾರಣಗಳಿಗೆ ಬಿಜೆಪಿ ಟಿಪ್ಪು ಜಯಂತಿಯನ್ನು ವಿರೋಧಿಸುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು.

Last Updated : Nov 10, 2018, 12:19 PM IST
ಸಿದ್ದರಾಮಯ್ಯಗೆ ಬೆಳ್ಳಿ ಖಡ್ಗ, ಹಾರ, ಪೇಟ ತೊಡಿಸಿ ಸನ್ಮಾನಿಸಿದ ಮುಸ್ಲಿಂ ಧರ್ಮಗುರು title=

ಬೆಂಗಳೂರು: ಟಿಪ್ಪು ಜಯಂತಿ ಆಚರಣೆ ಅಂಗವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು  ಮುಸ್ಲಿಂ ಧರ್ಮ ಗುರುಗಳು ಸನ್ಮಾನಿಸಿದ್ದಾರೆ. 

ಇಂದು ಬೆಳಿಗ್ಗೆ ಸಿದ್ದರಾಮಯ್ಯ ಅವರ ಕಾವೇರಿ ನಿವಾಸಕ್ಕೆ ಆಗಮಿಸಿದ ಮುಸ್ಲಿಂ ಧರ್ಮಗುರು, ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಬೆಳ್ಳಿ ಖಡ್ಗ, ಬೆಳ್ಳಿ ಹಾರ, ಪೇಟ ತೊಡಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಜಮೀರ್ ಅಹಮ್ಮದ್ ಹಾಜರಿದ್ದರು. 

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ರಾಜಕೀಯ ಕಾರಣಗಳಿಗೆ ಬಿಜೆಪಿ ಟಿಪ್ಪು ಜಯಂತಿಯನ್ನು ವಿರೋಧಿಸುತ್ತಿದೆ. ಟಿಪ್ಪು ಖಡ್ಗ ಕೈಯಲ್ಲಿ ಹಿಡಿದು ಪೇಟ ತೊಟ್ಟಾಗ ಬಿಜೆಪಿ ಮುಖಂಡರು ಯಾರೂ ವಿರೋಧ ಮಾಡಲಿಲ್ಲ. ಅಲ್ಲದೇ ಟಿಪ್ಪು ಪುಸ್ತಕಕ್ಕೆ ಜಗದೀಶ್ ಶೆಟ್ಟರ್ ಮುನ್ನುಡಿ ಬರೆದಿದ್ದಾರೆ. ಬಿಜೆಪಿ ನಾಯಕರು ಟಿಪ್ಪು ಬಗ್ಗೆ ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದರು.

ಟಿಪ್ಪು ಸುಲ್ತಾನ್ ಕಾಲದಲ್ಲಿ ಸಾಮರಸ್ಯವಿತ್ತು. ನಮ್ಮ ಕಾಲದಲ್ಲಿ 13 ಜಯಂತಿಗಳನ್ನು ಮಾಡಿದ್ದೇವೆ. ಕಿತ್ತೂರು ರಾಣಿ ಚೆನ್ನಮ್ಮ, ಹೇಮರೆಡ್ಡಿ ಮಲ್ಲಮ್ಮ, ವಾಲ್ಮೀಕಿ ಸೇರಿದಂತೆ 13 ಜನರ ಜಯಂತಿ ಮಾಡಿದ್ದೇವೆ. ಅದರಲ್ಲಿ ಟಿಪ್ಪು ಜಯಂತಿ ಕೂಡ ಒಂದು. ಆದರೆ ಬಿಜೆಪಿಯವರು ದುರುದ್ದೇಶದಿಂದ ರಾಜಕೀಯ ಲಾಭಕ್ಕಾಗಿ ಟಿಪ್ಪು ಜಯಂತಿಯನ್ನು ವಿರೋಧ ಮಾಡುತ್ತಿದ್ದಾರೆ ಎಂದರು.

Trending News