ರಾಮನಗರ: ರಾಮನಗರ ವಿಧಾನಸಭೆ ಉಪಚುನಾವಣೆ ಅಖಾದಲ್ಲಿರುವ ಮೈತ್ರಿ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಹಾಗೂ ಬಿಜೆಪಿ ಅಭ್ಯರ್ಥಿ ಎಲ್.ಚಂದ್ರಶೇಖರ್ ಅವರು ತಮ್ಮ ಸ್ವ ಕ್ಷೇತ್ರದಲ್ಲಿಯೇ ಮತದಾನ ಹಕ್ಕು ಚಲಾಯಿಸಲು ಸಾಧ್ಯವಾಗದಂತಾಗಿದೆ.
ಮೈತ್ರಿ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಹಾಗೂ ಇತ್ತೀಚೆಗಷ್ಟೇ ಬಿಜೆಪಿ ತೊರೆದು ಜೆಡಿಎಸ್ ಪಕ್ಷಕ್ಕೆ ಬೆಂಬಲ ನೀಡುವುದಾಗಿ ಹೇಳಿ ಚುನಾವಣಾ ಕಣದಿಂದ ಹಿಂದೆ ಸರಿದಿದ್ದ ಅಭ್ಯರ್ಥಿ ಎಲ್.ಚಂದ್ರಶೇಖರ್ ಅವರ ಮತಗಳು ಮಾಗಡಿ ವಿಧಾನಸಭಾ ಕ್ಷೇತ್ರದ ಬಿಡದಿ ಹೋಬಳಿ ವ್ಯಾಪ್ತಿಯಲ್ಲಿ ಬರುವುದರಿಂದ ರಾಮನಗರ ಕ್ಷೇತ್ರದಲ್ಲಿ ಮತದಾನ ಮಾಡುವ ಅವಕಾಶ ಇಲ್ಲದಂತಾಗಿದೆ. ಹೀಗಾಗಿ ಅಭ್ಯರ್ಥಿಗಳು ತಮ್ಮ ಮತಗಳನ್ನು ತಮಗೇ ಹಾಕಿಕೊಳ್ಳಲು ಆಗದಂತಾಗಿದೆ.
ರಾಮನಗರ ಕ್ಷೇತ್ರದಲ್ಲಿ ಒಟ್ಟು 2,06,324 ಮತದಾರರಿದ್ದಾರೆ. ಇವರಲ್ಲಿ 1,02,564 ಮಹಿಳಾ ಮತದಾರರು ಹಾಗೂ 1,03,712 ಪುರುಷ ಮತದಾರರು ಇದ್ದಾರೆ. ಕ್ಷೇತ್ರದಲ್ಲಿ ಒಟ್ಟು 266 ಮತಗಟ್ಟೆಗಳು, 91 ಅತಿಸೂಕ್ಷ್ಮ ಮತಗಟ್ಟೆಗಳು, 185 ಸೂಕ್ಷ್ಮಮತಗಟ್ಟೆಗಳಿದ್ದು, ಮಹಿಳೆಯರಿಗೆ ಪ್ರತ್ಯೇಕವಾಗಿ ಪಿಂಕ್ ಮತಗಟ್ಟೆಗಳ ವ್ಯವಸ್ಥೆಯೂ ಇದೆ.