ಅರಣ್ಯ, ಕಾನನ, ವನ ಎಂಬ ಹೆಸರುಗಳನ್ನು ಕೇಳಿದೊಡನೆಯೇ ಕಣ್ಮುಂದೆ ಬರುವುದು ಬೃಹತ್ಗಾತ್ರದ ಮರಗಳು, ಕಾಡು ಪ್ರಾಣಿಗಳು, ನದಿಗಳು, ಝರಿಗಳು. ಆದರೆ, ಈ ಅರಣ್ಯದಲ್ಲಿ ಬೃಹತ್ ಗಾತ್ರದ ಮರಗಳ ಬದಲಾಗಿ ಬೃಹತ್ ಗಾತ್ರದ ಶಿಲೆಗಳಿವೆ. ಹಾಗಾಗಿ ಈ ಅರಣ್ಯ ಸಂಪೂರ್ಣವಾಗಿ ಕಲ್ಲಿನಿಂದಲೇ ಆವೃತವಾಗಿದೆ. ಅಚ್ಚರಿಯಾಗುತ್ತಿದೆಯೇ? ಆದರೂ ಇದು ಸತ್ಯ!
ಒಂದರ ಪಕ್ಕ ಒಂದು ಸಾಲಾಗಿ ನಿಂತಿರುವ ಕಲ್ಲಿನ ಆಕೃತಿಗಳು ಅರಣ್ಯದಂತೆ0ಯೇ ಭಾಸವಾಗುತ್ತದೆ. ಹೀಗಾಗಿ ಇದು ಕಲ್ಲಿನ ಅರಣ್ಯ (ಸ್ಟೋನ್ ಫಾರೆಸ್ಟ್) ಎಂದೇ ಪ್ರಸಿದ್ಧಿ ಪಡೆದಿದೆ. ಈ ಅರಣ್ಯ ಇರುವುದು ಚೀನಾದ ನೈಋತ್ಯ ಭಾಗದಲ್ಲಿರುವ ಲುನಾನ್ ಯು ಸ್ವಾಯತ್ತ ಪ್ರಾಂತದ ಯುನಾನ್ ಪ್ರದೇಶದಲ್ಲಿ. ಈ ಅರಣ್ಯ 350 ಚದರ ಕಿ.ಮೀವರೆಗೆ ವಿಸ್ತರಿಸಿಕೊಂಡಿದೆ. ಅಂದರೆ 96 ಸಾವಿರ ಎಕರೆಯಷ್ಟು ಜಾಗದಲ್ಲಿ ಕೇವಲ ಬೃಹತ್ ಗಾತ್ರದ ಶಿಲೆಗಳೇ ತುಂಬಿಕೊಂಡಿದೆ!
ಈ ಪ್ರದೇಶ ಸಮುದ್ರ ಮಟ್ಟದಿಂದ ಸುಮಾರು 1600 ಅಡಿಯಿಂದ 1900 ಅಡಿಯ ಎತ್ತರದಲ್ಲಿದೆ. ಸುಮಾರು 270 ದಶ ಲಕ್ಷ ವರ್ಷಗಳ ಹಿಂದೆ ಸುಣ್ಣದ ಕಲ್ಲಿನಿಂದ ಈ ಅರಣ್ಯ ನಿರ್ಮಾಣಗೊಂಡಿದೆ ಎಂದು ಹೇಳಲಾಗಿದೆ.