ಚಳಿಗಾಲ ಬಂತೆಂದರೆ ಕೆಲವರಿಗೆ ಆನಂದ, ಕೆಲವರಿಗೆ ಅಯ್ಯೋ ಈ ಚಳಿಗಾಲ ಯಾವಾಗ ಮುಗಿಯುತ್ತೋ ಅನ್ನೋ ಚಿಂತೆ. ಚಳಿಗಾಲದಲ್ಲಿ ವೈರಸ್ ಮತ್ತು ಶೀತದ ಸಮಸ್ಯೆಯು ಮಕ್ಕಳಿಂದ ಹಿರಿಯರವರೆಗೂ ಭಾದಿಸದೆ ಇರದು. ಈ ಋತುವಿನಲ್ಲಿ ದೇಹವನ್ನು ಬೆಚ್ಚಗಿರಿಸಲು, ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಕೆಲವು ವಿಷಯಗಳನ್ನು ನೀವು ತಿಳಿದಿರಬೇಕು. ಹಿರಿಯರು ನೀಡುವ ಕೆಲವು ಸಲಹೆಗಳನ್ನು ಪಾಲಿಸುವುದರಿಂದ ನಾವು ಎದ್ದು-ಬಿದ್ದು ಎಲ್ಲದಕ್ಕೂ ಆಸ್ಪತ್ರೆಗೆ ಹೋಗುವುದನ್ನು ತಪ್ಪಿಸಬಹುದು. ಅಂತಹದೇ ಒಂದು ಸಲಹೆ ಬೆಲ್ಲ ತಿನ್ನುವುದು. ಅದರಲ್ಲೂ ಬೆಲ್ಲ-ಕಡಲೆ ಎರಡನ್ನೂ ಚಳಿಗಾಲದಲ್ಲಿ ತಿನ್ನುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು.
ಹೌದು, ಬೆಲ್ಲವನ್ನು ಕಡಲೆಯೊಂದಿಗೆ ಬೆರೆಸಿ ತಿನ್ನುವುದರಿಂದ ಅದು ಔಷಧವಾಗಿ ಕಾರ್ಯನಿರ್ವಹಿಸುತ್ತದೆ. ಈ ಎರಡು ಸೂಪರ್ ಫುಡ್ ಗಳನ್ನು ಒಗ್ಗೂಡಿಸುವ ಮೂಲಕ, ಅನೇಕ ರೋಗಗಳನ್ನು ನಿವಾರಿಸಬಹುದು.
ಹೇರಳವಾದ ಕಬ್ಬಿಣಾಂಶ:
ಬೆಲ್ಲ ಮತ್ತು ಕಡಲೆಯಲ್ಲಿ ಕಬ್ಬಿಣದ ಅಂಶ ಸಮೃದ್ಧವಾಗಿವೆ. ಇದರಿಂದಾಗಿ ರಕ್ತಹೀನತೆ ತಪ್ಪಿಸಬಹುದು. ಅದೇ ಸಮಯದಲ್ಲಿ ಹುರಿದ ಕಡಲೆಯಲ್ಲಿ ಕಬ್ಬಿಣಾಂಶದ ಜೊತೆಗೆ ಪ್ರೋಟೀನ್ ಸಹ ಸರಿಯಾದ ಪ್ರಮಾಣದಲ್ಲಿ ಕಂಡು ಬರುತ್ತದೆ. ಈ ರೀತಿಯಲ್ಲಿ ಕಡಲೆ-ಬೆಲ್ಲ ಸೇವಿಸುವುದರಿಂದ ಕಬ್ಬಿಣಾಂಶ ಮತ್ತು ರಕ್ತಹೀನತೆಗೆ ಸಂಬಂಧಿಸಿದ ಕಾಯಿಲೆಗಳಿಂದ ದೂರವಿರಬಹುದು.
ಮಲಬದ್ಧತೆಯ ಸಮಸ್ಯೆ ನಿವಾರಣೆ:
ಹೊಟ್ಟೆಗೆ ಸಂಬಂಧಿಸಿದ ಅಸ್ವಸ್ಥತೆಗಳನ್ನೂ ತೊಡೆದು ಹಾಕಲು ಬೆಲ್ಲ ಉತ್ತಮ ಎಂದು ಪರಿಗಣಿಸಲಾಗಿದೆ. ಮಲಬದ್ಧತೆ ಸಮಸ್ಯೆ ನಿವಾರಣೆಗೆ ಕಡಲೆ-ಬೆಲ್ಲ ಸೇವಿಸುವಂತೆ ಹಲವರು ಸಲಹೆ ನೀಡುತ್ತಾರೆ.
ರಕ್ತಹೀನತೆ ಹೇಗೆ?
ರಕ್ತದಲ್ಲಿ ಹಿಮೋಗ್ಲೋಬಿನ್ ಕೊರತೆ ಉಂಟಾಗುವುದರಿಂದ ರಕ್ತಹೀನತೆ ಕಂಡುಬರುತ್ತದೆ. ಈ ರೋಗವು ಹೆಚ್ಚಾಗಿ ಮಹಿಳೆಯರಲ್ಲಿ ಕಂಡುಬರುತ್ತದೆ. ಈ ಸಮಸ್ಯೆಯು ವಿಶೇಷವಾಗಿ ಕಬ್ಬಿಣದ ಕೊರತೆಯಿಂದಾಗಿ ಆಯಾಸ ಮತ್ತು ದೌರ್ಬಲ್ಯವು ಸಾಮಾನ್ಯವಾಗಿ ಕಂಡುಬರುತ್ತದೆ. ಅಂತಹ ಸಂದರ್ಭಗಳಲ್ಲಿ, ಮಹಿಳೆಯರು ತಮ್ಮ ಆಹಾರದಲ್ಲಿ ಕಬ್ಬಿಣದ ಭರಿತ ವಸ್ತುಗಳನ್ನು ತೆಗೆದುಕೊಳ್ಳಲು ಸಲಹೆ ನೀಡುತ್ತಾರೆ. ಕಬ್ಬಿಣಾಂಶ ಭರಿತ ಆಹಾರ ಸೇವನೆಯಿಂದ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಬಹುದು.
ಕಡಲೆ-ಬೆಲ್ಲ ಸೇವನೆ ನಿಮ್ಮನ್ನು ರಕ್ತಹೀನತೆಯಿಂದ ರಕ್ಷಿಸುವುದು ಮಾತ್ರವಲ್ಲ, ಜೊತೆಗೆ ದೇಹಕ್ಕೆ ಅಗತ್ಯವಾದ ಶಕ್ತಿಯನ್ನೂ ಒದಗಿಸುತ್ತದೆ. ದೇಹದಲ್ಲಿ ಉಂಟಾಗುವ ಆಯಾಸ ಮತ್ತು ದೌರ್ಬಲ್ಯವನ್ನೂ ಕಡಿಮೆಮಾಡುತ್ತದೆ. ನಿಯಮಿತವಾಗಿ ಹಾಗೂ ನಿಯಂತ್ರಿತ ಪ್ರಮಾಣದಲ್ಲಿ ಇದನ್ನು ಸೇವಿಸುವುದರಿಂದ ಇದು ಹೆಚ್ಚು ಪ್ರಯೋಜನಕಾರಿಯಾಗಿದೆ.