ಬೆಂಗಳೂರು : ಇನ್ನೇನು ಸಂಕ್ರಾಂತಿ ಹಬ್ಬ ಸಮೀಪಿಸುತ್ತಿದೆ. ಇನ್ನೆರಡು ದಿನ ಕಳೆದರೆ ಸಂಕ್ರಾಂತಿ ಹಬ್ಬದ ಸಂಭ್ರಮ ಕಳೆ ಕಟ್ಟುತ್ತದೆ. ಸಂಕ್ರಾಂತಿ ದಿನ ವಿವಿಧ ರೀತಿಯ ಅಡುಗೆಗಳನ್ನು ಮಾಡಲಾಗುತ್ತದೆ. ಅವುಗಳಲ್ಲಿ ಅತಿ ಮುಖ್ಯವಾದುದು ಪೊಂಗಲ್. ಈ ದಿನ ಸಿಹಿ ಪೊಂಗಲ್ ಮತ್ತು ಖಾರಾ ಪೊಂಗಲ್ ಅನ್ನು ತಯಾರಿಸಲಾಗುತ್ತದೆ. ಸಂಕ್ರಾಂತಿ ದಿನ ಹೊಸದಾಗಿ ಕೊಯ್ಲು ಮಾಡಿದ ಅಕ್ಕಿಯನ್ನು ಬಳಸಿ ಪೊಂಗಲ ತಯಾರಿಸಲಾಗುತ್ತದೆ.
ಪೊಂಗಲ್ ಅನ್ನು ಅಕ್ಕಿ, ಹೆಸರು ಬೇಳೆ, ಜೀರಿಗೆ, ಇಂಗು, ಕರಿಬೇವು, ಕರಿಮೆಣಸು, ತುಪ್ಪ ಬಳಸಿ ತಯಾರಿಸಲಾಗುತ್ತದೆ. ಖಾರಾ ಪೊಂಗಲ್ ಅನ್ನು ಸುಲಭವಾಗಿ ಕೆಲವೇ ನಿಮಿಷಗಳಲ್ಲಿ ತಯಾರಿಸಬಹುದು. ಇದರ ರುಚಿ ಕೂಡಾ ಅದ್ಬುತವಾಗಿರುತ್ತದೆ. ರುಚಿಯ ಜೊತೆಗೆ ಆರೋಗ್ಯಕ್ಕೂ ಬೆಸ್ಟ್ ಈ ಖಾದ್ಯ.
ಇದನ್ನೂ ಓದಿ : Plastic Water Bottle: ರಸ್ತೆ ಪಕ್ಕದಲ್ಲಿ ಸಿಗೋ ವಾಟರ್ ಬಾಟಲ ನೀರು ಕುಡಿದ್ರೆ, ಬಂಜೆತನ ಬರುತ್ತಂತೆ!
ಪೊಂಗಲ್ ತಯಾರಿಸುವ ವಿಧಾನ ಹೀಗಿದೆ.
ಪೊಂಗಲ್ ತಯಾರಿಸಲು ಬೇಕಾಗುವ ಸಾಮಗ್ರಿಗಳು :
1. ಅಕ್ಕಿ - 1/2 ಕಪ್
2. ಹೆಸರು ಬೇಳೆ - 1/2 ಕಪ್
3. ಜೀರಿಗೆ - ಒಂದು ಚಮಚ
4. ಸಾಸಿವೆ -ಒಂದು ಚಮಚ
5. ಕರಿಮೆಣಸು - 10 ಕಾಳು
6. ಹಸಿಮೆಣಸಿನ ಕಾಯಿ ಎರಡರಿಂದ ಮೂರು
7. ಕರಿಬೇವಿನ ಎಲೆಗಳು - ಎರಡು ದಂಟು
7 .ತುಪ್ಪ - ಎರಡು ಚಮಚ
8. ಶುಂಠಿ - ಸಣ್ಣ ಗಾತ್ರದ್ದು
9, ಚಿಟಿಕಿ ಅರಶಿನ
10.ಗೋಡಂಬಿ (ಬೇಕಿದ್ದರೆ ಮಾತ್ರ ಬಳಸಬಹುದು )
ಪೊಂಗಲ್ ಮಾಡುವ ವಿಧಾನ :
1. ಮೊದಲು ಕುಕ್ಕರ್ ಗೆ ಒಂದು ದೊಡ್ಡ ಚಮಚ ತುಪ್ಪ ಹಾಕಿಕೊಳ್ಳಿ.
2.ಅದಕ್ಕೆ ಅರ್ಧ ಕಪ್ ಹೆಸರುಬೇಳೆ ಹಾಕಿಕೊಂಡು 2 ನಿಮಿಷಗಳವರೆಗೆ ಚೆನ್ನಾಗಿ ಹುರಿಯಿರಿ.
3. ನಂತರ ಅರ್ಧ ಕಪ್ ಅಕ್ಕಿ ಸೇರಿಸಿ ಒಂದು ನಿಮಿಷಗಳವರೆಗೆ ಹುರಿಯಿರಿ. (ಅಕ್ಕಿಯನ್ನು 15 ನಿಮಿಷಗಳವರೆಗೆ ನೆನೆಸಿಟ್ಟು ಕೊಳ್ಳಬಹುದು, ಅಥವಾ ಹಾಗೆಯೇ ಕೂಡಾ ಬಳಸಬಹುದು. )
4. ನಂತರ ಐದು ಕಪ್ ನೀರು ಸೇರಿಸಿ. ಈಗಲೇ ರುಚಿಗೆ ತಕ್ಕಷ್ಟು ಉಪ್ಪು ಕೂಡಾ ಸೇರಿಸಿಕೊಳ್ಳಿ.
5. ದೊಡ್ಡ ಉರಿಯಲ್ಲಿ ಮೂರು ವಿಸಿಲ್ ಬರುವವರೆಗೆ ಬೇಯಿಸಿಕೊಳ್ಳಿ.
6.ನಂತರ ಒಂದು ಬಾಣಲೆಯಲ್ಲಿ ಒಂದು ಚಮಚ ತುಪ್ಪ ಬಿಸಿ ಮಾಡಿ ಅದಕ್ಕೆ ಒಂದು ಸಣ್ಣ ಚಮಚ ಸಾಸಿವೆ, ಜೀರಿಗೆ, ಸ್ವಲ್ಪ ಜಜ್ಜಿದ ಶುಂಠಿ, ಕರಿಬೇವು ಸೇರಿಸಿ ಹುರಿದುಕೊಳ್ಳಿ. ಅದಕ್ಕೆ ಕರಿಮೆಣಸು, ಹಸಿ ಮೆಣಸಿನ ಕಾಯಿ ಮತ್ತು ಗೋಡಂಬಿ ಸೇರಿಸಿ ಮತ್ತೆ ಚೆನ್ನಾಗಿ ಹುರಿದುಕೊಳ್ಳಿ. ಈಗ ಚಿಟಿಕಿ ಅರಶಿನ ಸೇರಿಸಿಕೊಳ್ಳಿ.
7. ಈಗಾಗಲೇ ಬೇಯಿಸಿ ಇಟ್ಟುಕೊಂಡಿರುವ ಅಕ್ಕಿ ಮತ್ತು ಹೆಸರುಬೇಳೆಗೆ ತಯಾರಿಸಿಕೊಂಡಿರುವ ಒಗ್ಗರಣೆಯನ್ನು ಸೇರಿಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈ ಹಂತದಲ್ಲಿ ಅನ್ನ ಮತ್ತು ಹೆಸರು ಬೇಳೆಯನ್ನು ಸಣ್ಣ ಉರಿಯಲ್ಲಿ ಇಟ್ಟುಕೊಳ್ಳಿ.
8 ಇಷ್ಟಾದರೆ ರುಚಿಕರ ಮತ್ತು ಆರೋಗ್ಯಕರ ಖಾರ ಪೊಂಗಲ್ ರೆಡಿಯಾಗುತ್ತದೆ.
ಇದನ್ನೂ ಓದಿ : ಖಾಲಿ ಹೊಟ್ಟೆಯಲ್ಲಿ ಈ ಎಲೆಗಳನ್ನು ಸೇವಿಸಿದರೆ ದೂರವಾಗುವುದು ಅಪಾಯಕಾರಿ ಕಾಯಿಲೆಗಳು
ಸಿಹಿ ಪೊಂಗಲ್ ಮಾಡುವ ವಿಧಾನ :
ಸಿಹಿ ಪೊಂಗಲ್ ಗೆ ಬೇಕಾಗುವ ಸಾಮಗ್ರಿ :
1. ಅಕ್ಕಿ - 1/2 ಕಪ್
2. ಹೆಸರು ಬೇಳೆ - 1/2 ಕಪ್
3. ಬೆಲ್ಲ - 1/2 ಕಪ್
4. ಹಾಲು - 1/2 ಕಪ್
5 ಒಣದ್ರಾಕ್ಷಿ, ಗೋಡಂಬಿ ಸ್ವಲ್ಪ
6. ತುಪ್ಪ - ಎರಡು ಚಮಚ
1. ಮೊದಲು ಕುಕ್ಕರ್ ಗೆ ಒಂದು ದೊಡ್ಡ ಚಮಚ ತುಪ್ಪ ಹಾಕಿಕೊಳ್ಳಿ.
2.ಅದಕ್ಕೆ ಅರ್ಧ ಕಪ್ ಹೆಸರುಬೇಳೆ ಹಾಕಿಕೊಂಡು 2 ನಿಮಿಷಗಳವರೆಗೆ ಚೆನ್ನಾಗಿ ಹುರಿಯಿರಿ.
3.ನಂತರ ಅರ್ಧ ಕಪ್ ಅಕ್ಕಿ ಸೇರಿಸಿ ಒಂದು ನಿಮಿಷಗಳವರೆಗೆ ಹುರಿಯಿರಿ.
4.ನಾಲ್ಕು ಕಪ್ ನೀರು ಹಾಕಿ ರುಚಿಗೆ ತಕ್ಕ ಉಪ್ಪು ಹಾಕಿ 3 ವಿಸಿಲ್ ನಷ್ಟು ಬೇಯಿಸಿಕೊಳ್ಳಿ.
5. ಬೇರೊಂದು ಬಾಣಲೆಯನ್ನು ಗ್ಯಾಸ್ ಮೇಲಿಟ್ಟು ಅರ್ಧ ಕಪ್ ಬೆಲ್ಲಕ್ಕೆ ಅರ್ಧ ಕಪ್ ನೀರು ಹಾಕಿ ಬೆಲ್ಲದ ನೀರು ತಯಾರಿಸಿಕೊಳ್ಳಿ. ಈ ಹಂತದಲ್ಲಿ ಉರಿ ಸಣ್ಣಗಿರಲಿ.
6. ಬೆಲ್ಲದ ನೀರು ತಯಾರಾದ ಮೇಲೆ ಮೊದಲೇ ತಯಾರಿಸಿತಟ್ಟುಕೊಂಡಿದ್ದ ಅನ್ನ ಮತ್ತು ಹೆಸರುಬೇಳೆ ಮಿಶ್ರಣವನ್ನು ಸೇರಿಸಿಕೊಂಡು ಚೆನ್ನಾಗಿ ಕಲಸಿಕೊಳ್ಳಿ. ಕೊಳ್ಳಿ.
7. ಈಗ ಕುದಿಸಿ ತಣ್ಣಗಾಗಿಸಿದ ಅರ್ಧ ಕಪ್ ಹಾಲು ಸೇರಿಸಿ ಮತ್ತೆ ಚೆನ್ನಾಗಿ ಕಲಸಿಕೊಳ್ಳಿ.
8. ಸಣ್ಣದೊಂದು ಪಾತ್ರೆಯಲ್ಲಿ ಎರಡು ಚಮಚ ತುಪ್ಪ ತೆಗೆದುಕೊಂಡು ಅದಕ್ಕೆ ಗೋಡಂಬಿ, ಒಣ ದ್ರಾಕ್ಷಿ ಸೇರಿಸಿ ಹುರಿದುಕೊಳ್ಳಿ. ನಂತರ ಇದನ್ನೂ ಈಗಾಗಲೇ ತಯಾರಿಸಿಟ್ಟು ಕೊಂಡಿದ್ದ ಪೊಂಗಲ್ ಗೆ ಸೇರಿಸಿ.
9. ಇಲ್ಲಿಗೆ ಸಿಹಿ ಪೊಂಗಲ್ ಕೂಡಾ ತಯಾರಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.