ಮಂಡ್ಯ: ರಾಜ್ಯದ ಮುಖ್ಯಮಂತ್ರಿಯಾಗಿರುವ ಬಿ.ಎಸ್.ಯಡಿಯೂರಪ್ಪ ಓರ್ವ ದುರ್ಬಲ ಮುಖ್ಯಮಂತ್ರಿ ಎಂದು ಮಾಜಿ ಸಿಎಂ ಹಾಗೂ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ನೆರೆ ಹಾವಳಿ ಪರಿಹಾರದ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಇದೇ ಸಂದರ್ಭದಲ್ಲಿ ರಾಜ್ಯಕ್ಕೆ ಕೇಂದ್ರದಿಂದ ಅನುದಾನ ತರುವಲ್ಲಿ ವಿಫಲವಾಗಿರುವ ಸಿಎಂ ಯಡಿಯೂರಪ್ಪ ಒಬ್ಬ ದುರ್ಬಲ ಮುಖ್ಯಮಂತ್ರಿ ಎಂದು ಟೀಕಿಸಿದರು.
"ಕರ್ನಾಟಕದಲ್ಲಿ ಹಿಂದೆಂದೂ ಆಗದ ರೀತಿಯಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಬೇಕಿತ್ತು. ಆದರೆ ಅವರಿಗೆ ಕಾಳಜಿಯೇ ಇಲ್ಲ. ಬಿಜೆಪಿ ನಾಯಕರು ಪುಕ್ಕಲರು. ಯಡಿಯೂರಪ್ಪ ಇದಾನಲ್ಲಾ, ಇವ್ನು ದ ಮೋಸ್ಟ ವೀಕೆಸ್ಟ್ ಚೀಫ್ ಮಿನಿಸ್ಟರ್. ಮಂಡ್ಯ ಜಿಲ್ಲೆಯವರಾಗಿ ಗಡುಸಾಗಿರಬೇಕಿತ್ತು. ಆದರೆ, ಹುಟ್ಟಿದ್ದು ಇಲ್ಲಾದರೂ ರಾಜಕೀಯ ಮಾಡಿದ್ದು ಬೇರೆಡೆಯಾದ್ದರಿಂದ ಆ ಗಡಸುತನ ಅವರಿಗಿಲ್ಲ" ಎಂದು ಲೇವಡಿ ಮಾಡಿದರು.
ರಾಜ್ಯದಲ್ಲಿ ನೆರೆ ಹಾನಿಯಿಂದ ಸುಮಾರು 37 ಕೋಟಿ ರೂ.ಗಳಷ್ಟು ನಷ್ಟವಾಗಿದೆ. ಈ ಬಗ್ಗೆ ಅನುದಾನ ಕೋರಿ ರಾಜ್ಯ ಸರ್ಕಾರ ಕೇಂದ್ರದ ಬಾಲಿ ಮನವಿ ಮಾಡಿದ್ದರೂ ಸರ್ಕಾರದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ವಾಪಸ್ ಕಳುಹಿಸಿದೆ. ಈ ಬಗ್ಗೆ ರಾಜ್ಯದ 25 ಸಂಸದರೇಕೆ ಪ್ರಶ್ನಿಸುತ್ತಿಲ್ಲ? ಅವರಿಗೇನು ಜವಾಬ್ದಾರಿ ಇಲ್ಲವೇ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಇಂದು ಬೆಳಿಗ್ಗೆ ಸಹ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡದ, ಪ್ರವಾಹ ಪರಿಹಾರ ಕಾರ್ಯಕ್ಕೆ ಅನುದಾನ ಬಿಡುಗಡೆ ಮಾಡದ ಕೇಂದ್ರ ಸರ್ಕಾರದ ವಿರುದ್ದ ಟ್ವೀಟ್ ದಾಳಿ ನಡೆಸಿದ್ದ ಸಿದ್ದರಾಮಯ್ಯ ಅವರು, ದಿನಕ್ಕೊಂದು ದೇಶ ಸುತ್ತುವ, ಘಳಿಗೆಗೊಂದು ವೇಷ ಬದಲಿಸುವ ಈಗಿನ ಪ್ರಧಾನಿಗಳಿಗೆ ಒಂದು ಘಳಿಗೆ ಬಂದು ಪ್ರವಾಹ ಸಂತ್ರಸ್ತರ ಗೋಳು ಕೇಳುವ ಕನಿಷ್ಠ ಮಾನವೀಯತೆ ಇಲ್ಲದಿರುವುದು ದುರಂತದ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.