ಮಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಸಿದ್ದರಾಮಯ್ಯ ಅವರದ್ದೇ ಮಹತ್ವದ ಪಾತ್ರ. ಅವರನ್ನು ಕಡೆಗಣಿಸಲು ಸಾಧ್ಯವೇ ಎಂದು ಕಾಂಗ್ರೆಸ್ ಶಾಸಕ ಬಿ.ನಾರಾಯಣರಾವ್ ಪ್ರಶ್ನಿಸಿದ್ದಾರೆ.
ಧರ್ಮಸ್ಥಳದ ಶಾಂತಿವನದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು 10ಕ್ಕೂ ಹೆಚ್ಚು ಶಾಸಕರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಶಾಸಕ ಬಿ.ನಾರಾಯಣರಾವ್ ಸಿದ್ದರಾಮಯ್ಯ ಅವರು ನಮ್ಮ ನಾಯಕರು. ಅವರಿಲ್ಲದೆ ಸರ್ಕಾರ ಉಳಿಯುವುದು ಸಾಧ್ಯವೇ? ನಾವ್ಯಾರೂ ಅವರನ್ನು ಕಡೆಗಣಿಸಿಲ್ಲ. ಈ ಸರಕಾರದಲ್ಲಿ ಅವರದ್ದೇ ಪ್ರಮುಖ ಪಾತ್ರ. ಅವರೇ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರು ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು ಎಂದು ಹೇಳಿದರು.
ಸಚಿವರಾದ ಶಿವಾನಂದ ಪಾಟೀಲ್, ರಮೇಶ್ ಜಾರಕಿಹೋಳಿ, ಪರಿಷತ್ ಸದಸ್ಯ ಧರ್ಮಸೇನಾ, ಬಳ್ಳಾರಿ ಶಾಸಕ ನಾಗೇಂದ್ರ, ಕಾಗವಾಡ ಶಾಸಕ ಶ್ರೀಮಂತ ಪಾಟೀಲ್, ಬಸವ ಕಲ್ಯಾಣ ಶಾಸಕ ಬಿ.ನಾರಾಯಣ ರಾವ್, ಅಥಣಿ ಶಾಸಕ ಮಹೇಶ್ ಕಮಟಳ್ಳಿ, ರಾಯಚೂರು ಸಂಸದ ಬಿ.ವಿ.ನಾಯಕ್, ರಾಯಚೂರು ಗ್ರಾಮೀಣ ಶಾಸಕ ಬಸವನಗೌಡ ದದ್ದಲ್, ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್, ಮಾಜಿ ಸಚಿವ ಆಂಜನೇಯ, ಐವಾನ್ ಡಿ ಸೋಜ ಅವರು ಶಾಂತಿವನಕ್ಕೆ ಭೇಟಿ ನೀಡಿ ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಿದರು.
ಸಿದ್ದರಾಮಯ್ಯ ಅವರು ಮೈತ್ರಿ ಸರ್ಕಾರದ ಭವಿಷ್ಯದ ಬಗ್ಗೆ ಸಂಶಯ ವ್ಯಕ್ತಪಡಿಸಿದ ಹೇಳಿಕೆಯ ವೀಡಿಯೋ ಬಹಿರಂಗವಾದ ಹಿನ್ನೆಲೆಯಲ್ಲೇ ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯ ಅವರನ್ನು ಭೇಟಿ ಆಗಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.