ಸೇನಾ ಹೆಲಿಕಾಪ್ಟರ್ ದೊರೆತರೆ ಮಂಡ್ಯಕ್ಕೆ ಅಂಬರೀಶ್ ಪಾರ್ಥಿವ ಶರೀರ: ಸಿಎಂ

 ಇಂದು ಸಂಜೆ 4 ರಿಂದ ನಾಳೆ ಬೆಳಗ್ಗೆ 6 ಗಂಟೆವರೆಗೆ ಮಂಡ್ಯದಲ್ಲಿ ಅಂತಿಮ ದರ್ಶನ ವ್ಯವಸ್ಥೆ ಕಲ್ಪಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.

Last Updated : Nov 25, 2018, 10:52 AM IST
ಸೇನಾ ಹೆಲಿಕಾಪ್ಟರ್ ದೊರೆತರೆ ಮಂಡ್ಯಕ್ಕೆ ಅಂಬರೀಶ್ ಪಾರ್ಥಿವ ಶರೀರ: ಸಿಎಂ  title=

ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಶ್ ಅವರ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ರವಾನಿಸಲು ಚಿಂತನೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಮಂಡ್ಯಕ್ಕೆ ಅಂಬರೀಶ್ ಪಾರ್ಥಿವ ಶರೀರ ತರಲೇಬೇಕೆಂದು ಜನತೆ ಪಟ್ಟುಹಿಡಿದಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ಬೆಂಗಳೂರಿನಿಂದ ಮಂಡ್ಯಕ್ಕೆ- ಮಂಡ್ಯದಿಂದ ಬೆಂಗಳೂರಿಗೆ ಪಾರ್ಥಿವ ಶರೀರ ವಾಪಸ್ ತರುವುದು ಶಾಸ್ತ್ರ ಸಮ್ಮತವಲ್ಲ. ಈ ಹಿನ್ನೆಲೆಯಲ್ಲಿ ಮಂಡ್ಯಗೆ ಪಾರ್ಥಿವ ಶರೀರ ತೆಗೆದುಕೊಂಡು ಹೋಗುವುದು ಸೂಕ್ತವಲ್ಲ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಮಂಡ್ಯದ ಜನರು ಒತ್ತಾಯ ಮಾಡುತ್ತಿರುವುದರಿಂದ ಹೆಲಿಕಾಪ್ಟರ್ ಮೂಲಕ ಮಂಡ್ಯಕ್ಕೆ ಪಾರ್ಥಿವ ಶರೀರ ತೆಗೆದುಕೊಂಡು ಹೋಗಲು ಚಿಂತನೆ ನಡೆಸಲಾಗಿದೆ ಎಂದರು.

ಮಂಡ್ಯಕ್ಕೆ ರಸ್ತೆ ಮೂಲಕ ಪಾರ್ಥಿವ ಶರೀರ ರವಾನೆ ಮಾಡುವುದು ಕಷ್ಟಕರ. ಹೆಲಿಕಾಪ್ಟರ್‌ಗಾಗಿ ರಕ್ಷಣಾ ಇಲಾಖೆ ಮಂತ್ರಿ ನಿರ್ಮಲಾ ಸೀತಾರಾಂ ಅವರನ್ನು ಸಂಪರ್ಕಿಸಲಾಗಿದೆ. ಒಂದು ವೇಳೆ ಸೇನಾ ಹೆಲಿಕಾಪ್ಟರ್‌ ಸಿಕ್ಕರೆ ಮಂಡ್ಯದ ವಿಶ್ವೇಶ್ವರ ಸ್ಟೇಡಿಯಂನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು. ಇಂದು ಸಂಜೆ 4 ರಿಂದ ನಾಳೆ ಬೆಳಗ್ಗೆ 6 ಗಂಟೆವರೆಗೆ ಅಂತಿಮ ದರ್ಶನ ವ್ಯವಸ್ಥೆ ಕಲ್ಪಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.

ಮಂಡ್ಯದ ಅಭಿಮಾನಿಗಳಿಗೆ ಬೆಂಗಳೂರಿಗೆ ಆಗಮಿಸಿ ಅಂತಿಮ ದರ್ಶನ ಪಡೆಯಲು ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು. ಮಂಡ್ಯಕ್ಕೆ ಪಾರ್ಥಿವ ಶರೀರ ತೆಗೆದುಕೊಂಡು ಹೋಗದೆ ಇರುವುದು ಸರ್ಕಾರದ ತೀರ್ಮಾನವಲ್ಲ. ಇದು ಅಂಬರೀಶ್‌ ಕುಟುಂಬದ ನಿರ್ಧಾರ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

ಮಂಡ್ಯದ ಮಗ ಅಂಬರೀಶ್. ಹಾಗಾಗಿ ಅವರ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ತರಲೇಬೇಕು, ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲೇಬೇಕು ಎಂದು ಅಂಬಿ ಅಭಿಮಾನಿಗಳು ಮಂಡ್ಯದಲ್ಲಿ ಪಟ್ಟು ಹಿಡಿದಿದ್ದಾರೆ. ಈ ಬೆನ್ನಲೇ ಯಾವುದೇ ಅಹಿತಕರ ಘಟನೆ ನಡೆಯದಂತೆ ಮಂಡ್ಯದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. 

Trending News