ಇನ್ನೈದು ವರ್ಷದಲ್ಲಿ ಬೆಂಗಳೂರಿನಲ್ಲಿ ಸಂಚರಿಸಲಿವೆ ಎಲೆಕ್ಟ್ರಿಕ್ ಬಸ್‌: ಡಿಸಿಎಂ

ಕಳೆದ 20 ವರ್ಷದಲ್ಲಿ ಬೆಂಗಳೂರು ಹೆಚ್ಚು ವೇಗವಾಗಿ ಬೆಳೆಯುತ್ತಿದೆ. ಐಟಿ-ಬಿಟಿ, ಕೈಗಾರಿಕೆ, ವಿಜ್ಞಾನ , ಸಂಶೋಧನೆ, ಏರೋ ಸ್ಪೇಸ್ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ಬೆಂಗಳೂರು ಕೇಂದ್ರವಾಗಿದೆ.   

Last Updated : Aug 30, 2018, 07:18 AM IST
ಇನ್ನೈದು ವರ್ಷದಲ್ಲಿ ಬೆಂಗಳೂರಿನಲ್ಲಿ ಸಂಚರಿಸಲಿವೆ ಎಲೆಕ್ಟ್ರಿಕ್ ಬಸ್‌: ಡಿಸಿಎಂ title=
Pic: Twitter@DrParameshwara

ಬೆಂಗಳೂರು: ಇನ್ನು ಐದು ವರ್ಷದಲ್ಲಿ ಬೆಂಗಳೂರಿನಲ್ಲಿ ಡೀಸೆಲ್ ಹಾಗೂ ಪೆಟ್ರೋಲ್ ಬಸ್‌ಗಳ ಸ್ಥಳದಲ್ಲಿ ಎಲೆಕ್ಟ್ರಿಕ್ ಬಸ್‌ಗಳು ಸಂಚರಿಸಲಿವೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಹೇಳಿದರು.

ಅಂತರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ 8ನೇ ಬಸ್‌ ವಲ್ಡ್ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಬೆಂಗಳೂರು ಕಳೆದ 20 ವರ್ಷದಲ್ಲಿ ಹೆಚ್ಚು ವೇಗವಾಗಿ ಬೆಳೆಯುತ್ತಿದೆ. ಐಟಿ-ಬಿಟಿ, ಕೈಗಾರಿಕೆ, ವಿಜ್ಞಾನ , ಸಂಶೋಧನೆ, ಏರೋ ಸ್ಪೇಸ್ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ಬೆಂಗಳೂರು ಕೇಂದ್ರವಾಗಿದೆ. 

ಇಲ್ಲಿ ಮೂಲ ಸಮಸ್ಯೆ ಎಂದರೆ ಟ್ರಾಫಿಕ್. ಬೆಂಗಳೂರಿನಲ್ಲಿ ನಿತ್ಯ 70 ಲಕ್ಷ ವಾಹನಗಳು ಸಂಚರಿಸುತ್ತಿವೆ. ಆದರೆ ಈ ವಾಹನಗಳಿಗೆ ವ್ಯವಸ್ಥಿತ ರಸ್ತೆಗಳಿಲ್ಲ. ಡೀಸೆಲ್, ಪೆಟ್ರೋಲ್ ಬಸ್‌ಗಳಿಂದ ವಾಯುಮಾಲಿನ್ಯ ಕೂಡ ಹೆಚ್ಚಾಗಿದೆ. ಅಷ್ಟೆ ಅಲ್ಲದೆ ಬಿಎಂಟಿಸಿಯಿಂದ‌ ಆರು ಸಾವಿರ ವಾಹನಗಳು ಸಂಚರಿಸುತ್ತಿವೆ. ಈ ಎಲ್ಲವೂ ಡೀಸೆಲ್ ಆಗಿರುವುದರಿಂದ ವಾಯುಮಾಲಿನ್ಯ ಕೂಡ ಹೆಚ್ಚುತ್ತವೆ. ಹೀಗಾಗಿ ಎಲೆಕ್ಟ್ರಿಕ್ ಬಸ್‌ಗಳನ್ನು ಪರಿಚಯಿಸುವುದು ಉತ್ತಮ ಎಂದರು.

ಹೈದರಾಬಾದ್‌ನಿಂದ ಬೆಂಗಳೂರಿಗೆ ವರ್ಷದ ತೆರಿಗೆ 26 ಲಕ್ಷ ಪಾವತಿಸಬೇಕಿದೆ. ಈ ನಿಯಮವನ್ನು ಸಡಿಲಿಸಿ, ತೆರಿಗೆ ಕಡಿಮೆ ಮಾಡುವ ಕುರಿತು ಚರ್ಚಿಸಲಾಗುವುದು ಎಂದರು.

ಈ ಬಾರಿ ಬಸ್‌ ವಲ್ಡ್‌ ಬೆಂಗಳೂರಿನಲ್ಲಿ ನಡೆಯುತ್ತಿರುವುದು ನಮ್ಮ‌ ನಗರಕ್ಕೆ ಹೆಮ್ಮೆಯ ವಿಚಾರ. ಇದರಿಂದ ಸಾರಿಗೆ ಕ್ಷೇತ್ರದಲ್ಲಿ ಹೂಡಿಕೆ ಕೂಡ ಹೆಚ್ಚುವ ನಿರೀಕ್ಷೆ ಇದೆ. ಈ ಪ್ರದರ್ಶನದಲ್ಲಿ ಚೈನಾ, ಕೊರಿಯಾ, ಆಸ್ಟ್ರೇಲಿಯಾ, ಬೆಲ್ಜಿಯಂನಿಂದ ಕಂಪನಿಗಳು ಆಗಮಿಸಿದ್ದು,  ತಮ್ಮ ತಮ್ಮ ತಂತ್ರಜ್ಞಾನವನ್ನು ಹಂಚಿಕೊಳ್ಳುತ್ತಿದ್ದಾರೆ ಎಂದು ಪರಮೇಶ್ವರ ಹೇಳಿದರು.

Trending News