ಕುದುರೆ ವ್ಯಾಪಾರಕ್ಕೆ ಬಗ್ಗುವ ಅಗತ್ಯ ನಮಗಿಲ್ಲ: ಭೈರತಿ ಬಸವರಾಜು

ಯಾವುದೇ ಕಾರಣಕ್ಕೂ ರಾಜೀನಾಮೆ ಹಿಂಪಡೆಯುವ ಮಾತೇ ಇಲ್ಲ. ರಾಜಕಾರಣದಲ್ಲೇ ಇರಬೇಕು ಎಂಬ ಅನಿವಾರ್ಯತೆ ನಮಗಿಲ್ಲ. ಮನೆಯಲ್ಲಿ ಬೇಕಾದರೂ ಇರುತ್ತೇವೆ ಆದರೆ ರಾಜೀನಾಮೆ ವಾಪಸ್ ಪಡೆಯಲ್ಲ ಎಂದು ಅತೃಪ್ತ ಶಾಸಕ ಭೈರತಿ ಬಸವರಾಜ್ ಹೇಳಿದ್ದಾರೆ. 

Last Updated : Jul 9, 2019, 03:43 PM IST
ಕುದುರೆ ವ್ಯಾಪಾರಕ್ಕೆ ಬಗ್ಗುವ ಅಗತ್ಯ ನಮಗಿಲ್ಲ: ಭೈರತಿ ಬಸವರಾಜು title=

ಬೆಂಗಳೂರು: ನಮ್ಮನ್ನು ಯಾರೂ ಬಂಧನದಲ್ಲಿ ಇಟ್ಟಿಲ್ಲ. ಕುದುರೆ ವ್ಯಾಪಾರಕ್ಕೆ ಬಗ್ಗುವ ಅಗತ್ಯವೂ ನಮಗಿಲ್ಲ ಎಂದು ಅತೃಪ್ತ ಶಾಸಕ ಭೈರತಿ ಬಸವರಾಜ್ ಹೇಳಿದ್ದಾರೆ. 

ಮುಂಬೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಲೂ ಸ್ಪೀಕರ್ ಕರೆ ಮಾಡಿ ಕರೆದರೆ ನಾವು ಬೆಂಗಳೂರಿಗೆ ಬರಲು ಸಿದ್ಧ. ನಮ್ಮ ಸ್ವಂತ ಖರ್ಚಿನಲ್ಲಿ ಮುಂಬೈಗೆ ಬಂದಿದ್ದೇವೆ. ಯಾರ ಆಶ್ರಯವನ್ನೂ ನಾವು ಪಡೆದಿಲ್ಲ. ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿದವರು ನಾವು, ಕುದುರೆ ವ್ಯಾಪಾರಕ್ಕೆ ಬಗ್ಗುವ ಅಗತ್ಯವಿಲ್ಲ ಎಂದು ಹೇಳಿದರು.

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ರಾಜೀನಾಮೆ ನೀಡಿದ ಶಾಸಕರನ್ನು ಅನರ್ಹಗೊಳಿಸುವ ಬಗ್ಗೆ ನಿರ್ಧಾರ ಕೈಗೊಂಡಿರುವ ಬಗ್ಗೆ ಸಿದ್ದರಾಮಯ್ಯ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಬಸವರಾಜ್, ಕಾಂಗ್ರೆಸ್ ಪಕ್ಷದಲ್ಲಿ 35 ವರ್ಷದಿಂದ ಕೆಲಸ ಮಾಡಿದ್ದೇನೆ. ಸಿದ್ದರಾಮಯ್ಯ ಅವರಿಗಿಂದ ಮುಂಚೆಯೇ ನಾನು ಕಾಂಗ್ರೆಸ್ ಪಕ್ಷದಲ್ಲಿದ್ದೇನೆ. ನಮಗೆ ಎಷ್ಟು ನೋವಿದೆ ಎಂದು ಹೇಳಲು ಸಾಧ್ಯವಿಲ್ಲ. ಇಂದಿಗೂ ಕೂಡ ನಾನು ಯಾರ ಬೆನ್ನಿಗೂ ಚೂರಿ ಹಾಕುವ ಕೆಲಸ ಮಾಡಿಲ್ಲ. ಅವರಿಗೆ ಹೇಳಿಯೇ ರಾಜೀನಾಮೆ ನೀಡಿದ್ದೇನೆ. ಯಾವುದೇ ಕಾರಣಕ್ಕೂ ರಾಜೀನಾಮೆ ಹಿಂಪಡೆಯುವ ಮಾತೇ ಇಲ್ಲ. ರಾಜಕಾರಣದಲ್ಲೇ ಇರಬೇಕು ಎಂಬ ಅನಿವಾರ್ಯತೆ ನಮಗಿಲ್ಲ. ಮನೆಯಲ್ಲಿ ಬೇಕಾದರೂ ಇರುತ್ತೇವೆ ಆದರೆ ರಾಜೀನಾಮೆ ವಾಪಸ್ ಪಡೆಯಲ್ಲ ಎಂದು ಖಡಕ್ ಆಗಿ ಹೇಳಿದರು.

ಮುಂದುವರೆದು ಮಾತನಾಡುತ್ತಾ, ನಾವೇನು ಬಾಂಬೆಗೆ ಆಟವಾಡಲು ಬಂದಿಲ್ಲ. ನಮ್ಮ ಕ್ಷೇತ್ರದ ಜನರು ಅಭಿವೃದ್ಧಿಯಾಗಿಲ್ಲ ಎಂದು ನಮ್ಮನ್ನು ಪ್ರಶ್ನೆ ಮಾಡುವಾಗ ಉತ್ತರ ಕೊಡಲು ಸಾಧ್ಯವಾಗುತ್ತಿಲ್ಲ. ಇದರಿಂದ ನಮಗೆ ಬಹಳಷ್ಟು ನೋವಾಗಿದೆ. ಆ ಕಾರಣದಿಂದಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇವೆಯೇ ಹೊರತು ಈಗಲೂ ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದೇವೆ ಎಂದು ಸ್ಪಷ್ಟಪಡಿಸಿದರು.

Trending News