ಮಾರ್ಚ್ 9ರಂದು ಮಂಗಳೂರಿಗೆ ರಾಜನಾಥ್ ಸಿಂಗ್ ಭೇಟಿ

ಮಾರ್ಚ್ 9ರಂದು ಬೆಳಗ್ಗೆ 11 ಗಂಟೆಗೆ ಮಂಗಳೂರಿನ ಕೇಂದ್ರ ಮೈದಾನದಲ್ಲಿ ನಡೆಯಲಿದ್ದು, ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಭಾಗವಹಿಸಲಿದ್ದಾರೆ.

Last Updated : Mar 8, 2019, 01:16 PM IST
ಮಾರ್ಚ್ 9ರಂದು ಮಂಗಳೂರಿಗೆ ರಾಜನಾಥ್ ಸಿಂಗ್ ಭೇಟಿ title=

ಮಂಗಳೂರು: ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಮಾರ್ಚ್ 9 ರಂದು ಮಂಗಳೂರಿಗೆ ಭೇಟಿ ನೀಡಲಿದ್ದಾರೆ.

ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳನ್ನೊಳಗೊಂಡ ಬಿಜೆಪಿ ಕ್ಲಸ್ಟರ್‌ ಮಟ್ಟದ ಕಾರ್ಯಕರ್ತರ ಸಮಾವೇಶವು ಮಾರ್ಚ್ 9ರಂದು ಬೆಳಗ್ಗೆ 11 ಗಂಟೆಗೆ ಮಂಗಳೂರಿನ ಕೇಂದ್ರ ಮೈದಾನದಲ್ಲಿ ನಡೆಯಲಿದ್ದು, ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಮುಖಂಡ ಮೋನಪ್ಪ ಭಂಡಾರಿ ತಿಳಿಸಿದ್ದಾರೆ. 

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಈ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಶಕ್ತಿಕೇಂದ್ರ, ಮಹಾ ಶಕ್ತಿಕೇಂದ್ರ, ಮಂಡಲಗಳ ಪದಾಧಿಕಾರಿಗಳು, ಜಿಲ್ಲಾ ಮಟ್ಟದ ಬಿಜೆಪಿ ಮುಖಂಡರು ಭಾಗವಹಿಸಲಿದ್ದಾರೆ. ಸುಮಾರು 8ರಿಂದ 10 ಸಾವಿರ ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಹಾಗೂ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಅಂದು ಸಂಜೆ 3.30ಕ್ಕೆ ನಗರದ ಟಿ.ಎಂ.ಎ.ಪೈ ಅಂತಾರಾಷ್ಟ್ರೀಯ ಕನ್ವೆನ್ಶನ್‌ ಸೆಂಟರ್‌ನಲ್ಲಿ ಚಿಂತಕರ ಸಮಾವೇಶ ಏರ್ಪಡಿಸಲಾಗಿದ್ದು, ಈ ಕಾರ್ಯಕ್ರಮದಲ್ಲೂ ರಾಜನಾಥ್‌ ಸಿಂಗ್‌ ಭಾಗವಹಿಸಿ, ಉದ್ಯಮಿಗಳು, ವೈದ್ಯರು, ಬುದ್ಧಿ ಜೀವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಬಳಿಕ ಸಂಜೆ 7 ಗಂಟೆಗೆ ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರು ದೆಹಲಿಗೆ ಮರಳಲಿದ್ದಾರೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ ತಿಳಿಸಿದ್ದಾರೆ. 

Trending News