ನಾಳೆ ವಜ್ರಮಹೋತ್ಸವ: ನವ ವಧುವಿನಂತೆ ಸಿಂಗಾರಗೊಳ್ಳುತ್ತಿದೆ ವಿಧಾನ ಸೌಧ

                    

Last Updated : Oct 24, 2017, 04:29 PM IST
ನಾಳೆ ವಜ್ರಮಹೋತ್ಸವ: ನವ ವಧುವಿನಂತೆ ಸಿಂಗಾರಗೊಳ್ಳುತ್ತಿದೆ ವಿಧಾನ ಸೌಧ title=

ಬೆಂಗಳೂರು: ವಿಧಾನಸೌಧ 60 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ 'ವಜ್ರಮಹೋತ್ಸವ' ವನ್ನು ಆಚರಿಸಲಾಗುತ್ತಿದ್ದು, ಇದರ ಅಂಗವಾಗಿ ವಿಧಾನಸೌಧವು ನವ ವಧುವಿನಂತೆ ಸಿಂಗಾರಗೊಳ್ಳುತ್ತಿದೆ.

ವಜ್ರಮಹೋತ್ಸವಕ್ಕೆ ವಿಧಾನಸೌಧ ನವ ವಧುವಿನಂತೆ ಸಿಂಗಾರಗೊಳ್ಳುತ್ತಿದ್ದು, ಸುಣ್ಣ-ಬಣ್ಣ, ವಿದ್ಯುತ್ ದೀಪಾಲಂಕಾರ ಮತ್ತು ಹೂವಿನ ಅಲಂಕಾರದಿಂದ ಕಂಗೊಳಿಸುತ್ತಿದೆ. ಖಾಸಗಿ ಇವೆಂಟ್ ಮ್ಯಾನೇಜ್ಮೆಂಟ್ ಸಿಬ್ಬಂದಿಯಿಂದ ಅಲಂಕಾರ ಕಾರ್ಯ ನಡೆಯುತ್ತಿದೆ. ವಿಧಾನ ಸಭೆ, ವಿಧಾನ ಪರಿಷತ್ ಆವರಣ ಹೂವಿನಿಂದ ಅಂತಿಮ ಹಂತದ ಅಲಂಕಾರ ಕಾರ್ಯ ಪೂರ್ಣಗೊಳಿಸುತ್ತಿರುವ ಡಿಎನ್ಎ ನೆಟ್ವರ್ಕ್ ಎಂಬ ಖಾಸಗಿ ಕಂಪೆನಿ ಇಡೀ ವಿಧಾನ ಸಭೆ, ವಿಧಾನ ಸೌಧದ ಆವರಣವನ್ನ ಸಿಂಗಾರಗೊಳಿಸುತ್ತಿದೆ.

ಖಾಸಗಿ‌ ಮ್ಯಾನೇಜ್ಮೆಂಟ್ ಕಂಪೆನಿ ವಿಧಾನಸೌಧದ ಸಿಂಗಾರಕ್ಕಾಗಿ ಸಾರ್ವಜನಿಕ ಉದ್ಯಮಗಳ ಸಮಿತಿ ಅಧ್ಯಕ್ಷ ಡಾ. ಮಾಲಕರೆಡ್ಡಿ ಅವರ ಕೊಠಡಿಯನ್ನೇ ತಮ್ಮ ಸುಪರ್ದಿಗೆ ಪಡೆದುಕೊಂಡಿದೆ. .

ಆದರೆ, ವಿಧಾನಸೌಧದ ಮೆಟ್ಟಿಲುಗಳು ಮತ್ತು ಶೌಚಾಲಯಗಳ ದುರಸ್ತಿ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಈ ಕೆಲಸಗಳಿಗಾಗಿ ರಾಜ್ಯ ಸರ್ಕಾರ ಲೋಕೋಪಯೋಗಿ ಇಲಾಖೆಗೆ ಈಗಾಗಲೇ 20 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ.

ಬುಧವಾರ ನಡೆಯಲಿರುವ ವಜ್ರಮಹೋತ್ಸವ ಸಮಾರಂಭಕ್ಕಾಗಿ ವಿಧಾನಸೌಧದ ಹೊರ-ಒಳಭಾಗಗಳಲ್ಲಿ ಕಣ್ಣು ಕೂರೈಸುವಂತೆ ದೀಪಾಲಂಕಾರ ಮಾಡಲಾಗಿದ್ದು, ದ್ವಾರಗಳಿಗೂ ಮೆರುಗು ನೀಡಲಾಗಿದೆ. 

‘ಕನಿಷ್ಠ ಒಂದು ವಾರ ಹಾಳಾಗದಂಥ ಹೂಗಳನ್ನು ವಿದೇಶದಿಂದ ತರಿಸಿಕೊಂಡು ವಿಧಾನಸೌಧವನ್ನು ಅಲಂಕರಿಸಲು ಉದ್ದೇಶಿಸಲಾಗಿತ್ತು. ಆದರೆ, ವೆಚ್ಚ ಕಡಿತಗೊಳಿಸಿದ ಕಾರಣಕ್ಕೆ ಸ್ಥಳೀಯವಾಗಿ ಹೂ ಖರೀದಿಸಲಾಗುತ್ತಿದೆ’ ಎಂದು ವಿಧಾನಸಭೆ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದರು.

ಈ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ವಿಧಾನಮಂಡಲದ ವಿಶೇಷ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡುವ ಮೂಲಕ ಬೆಳಿಗ್ಗೆ 11 ಗಂಟೆಗೆ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ನಂತರ, ವಿಧಾನಸೌಧ ಹಾಗೂ ವಿಕಾಸಸೌಧದ ಮಧ್ಯೆ ಇರುವ ಗಾಂಧಿ ಪ್ರತಿಮೆ ಎದುರು ಉಭಯ ಸದನಗಳ ಶಾಸಕರು, ರಾಷ್ಟ್ರಪತಿ ಜೊತೆ ಗ್ರೂಪ್‌ ಫೋಟೊ ತೆಗೆಸಿಕೊಳ್ಳಲಿದ್ದಾರೆ.

ಆನಂತರ ಬ್ಯಾಂಕ್ವೆಟ್ ಹಾಲ್‌ನಲ್ಲಿ ಭೋಜನ ಕೂಟ ಏರ್ಪಡಿಸಲಾಗಿದೆ. ಮಧ್ಯಾಹ್ನ 3 ಗಂಟೆಗೆ ಬ್ಯಾಂಕ್ವೆಟ್ ಹಾಲ್‌ನಲ್ಲಿ ವಿಧಾನಸೌಧ ಕುರಿತಂತೆ ನಿರ್ದೇಶಕ ಗಿರೀಶ್ ಕಾಸರವಳ್ಳಿ, ಸೀತಾರಾಂ ನಿರ್ದೇಶಿಸಿರುವ ಸಾಕ್ಷ್ಯ ಚಿತ್ರ ಪ್ರದರ್ಶನ ಹಾಗೂ ಮಾಸ್ಟರ್ ಕಿಶನ್ ನಿರ್ದೇಶನದ ‘3 ಡಿ ವರ್ಚುಯಲ್ ರಿಯಾಲಿಟಿ’ ವಿಡಿಯೊ ಪ್ರದರ್ಶನ ನಡೆಯಲಿದೆ.

ವಿಧಾನಸೌಧದ ಪೂರ್ವದ್ವಾರದ ಮೆಟ್ಟಿಲುಗಳ ಮೇಲೆ ಸಂಜೆ 5 ರಿಂದ 6 ಗಂಟೆವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. 6ರಿಂದ 6.30 ರವರೆಗೆ ವಿಧಾನಸೌಧ ನಿರ್ಮಾಣಕ್ಕೆ ಪ್ರಧಾನಿ ದಿ. ಜವಾಹರಲಾಲ್ ನೆಹರು ಅವರಿಂದ ಅಡಿಗಲ್ಲು ಹಾಕಿಸಿದ ರಾಜ್ಯದ ಮೊದಲ ಮುಖ್ಯಮಂತ್ರಿ ಕೆ.ಸಿ ರೆಡ್ಡಿ, ವಿಧಾನಸೌಧ ಕಟ್ಟಡ ನಿರ್ಮಾಣ ಮಾಡಿದ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಮತ್ತು ಮಾಜಿ ಮುಖ್ಯಮಂತ್ರಿ ಕಡಿದಾಳ್ ಮಂಜಪ್ಪ ಅವರಿಗೆ ಗೌರವಾರ್ಪಣೆ ನಡೆಯಲಿದ್ದು, ಈ ನಾಯಕರ ಕುಟುಂಬದವರು ಗೌರವ ಸ್ವೀಕರಿಸಲಿದ್ದಾರೆ.

ಬಳಿಕ ಪೂರ್ವದ್ವಾರದ ಮೆಟ್ಟಿಲುಗಳ ಮೇಲೆ ಸಂಗೀತ ನಿರ್ದೇಶಕ ಹಂಸಲೇಖ ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಜತೆಗೆ ಸಮಾನಂತರವಾಗಿ ವಿಧಾನಸೌಧ ಕಟ್ಟಡದ ಮೇಲೆ ತ್ರೀಡಿ ಮ್ಯಾಪಿಂಗ್ ಮೂಲಕ ಸರ್ಕಾರದ ಜನಪರ ಯೋಜನೆಗಳನ್ನು ಚಿತ್ರಗಳ ಮೂಲಕ ಪ್ರದರ್ಶಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

Trending News