ಸಿಎಂ ಪುತ್ರ ಸೇರಿ ಮೂವರು ಕಾಂಗ್ರೆಸ್ ನಾಯಕರ ಮಕ್ಕಳಿಗೆ ಟಿಕೆಟ್?

ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ, ಕೆ.ಎಚ್. ಮುನಿಯಪ್ಪ ಪುತ್ರಿ ಹಾಗೂ ರಾಮಲಿಂಗ ರೆಡ್ಡಿ ಪುತ್ರಿಗೆ ಚುನಾವಣೆಯಲ್ಲಿ ಟಿಕೆಟ್ ದೊರೆಯುವ ಸಾಧ್ಯತೆ ಇದೆ.  

Last Updated : Apr 12, 2018, 11:41 AM IST
ಸಿಎಂ ಪುತ್ರ ಸೇರಿ ಮೂವರು ಕಾಂಗ್ರೆಸ್ ನಾಯಕರ ಮಕ್ಕಳಿಗೆ ಟಿಕೆಟ್? title=

ಬೆಂಗಳೂರು: ಮುಂದಿನ ತಿಂಗಳು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ಸೇರಿದಂತೆ ಮೂವರು ಕಾಂಗ್ರೆಸ್ ನಾಯಕರ ಮಕ್ಕಳಿಗೆ ಟಿಕೆಟ್ ದೊರೆಯುವ ಸಾಧ್ಯತೆ ಇದೆ.

ವರುಣಾ ಕ್ಷೇತ್ರದಿಂದ ಸಿಎಂ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರಗೆ ಟಿಕೆಟ್ ನೀಡಲು ಹೈಕಮಾಂಡ್ ಸಮ್ಮತಿ ಸೂಚಿಸಿದೆ ಎನ್ನಲಾಗಿದೆ. ಜೊತೆಗೆ ಕೆಜಿಎಫ್ ಕ್ಷೇತ್ರದಿಂದ ಸಂಸದ ಕೆ.ಎಚ್. ಮುನಿಯಪ್ಪ ಪುತ್ರಿ ರೂಪಾ ಶಶಿಧರ್ ಗೆ ಹಾಗೂ ಜಯನಗರ ಕ್ಷೇತ್ರದಿಂದ ಸಚಿವ ರಾಮಲಿಂಗಾ ರೆಡ್ಡಿ ಪುತ್ರಿ ಸೌಮ್ಯಾ ರೆಡ್ಡಿಗೆ ಟಿಕೆಟ್ ನೀಡಲು ಕಾಂಗ್ರೆಸ್ ವರಿಷ್ಠರು ಚಿಂತನೆ ನಡೆಸಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಏತನ್ಮಧ್ಯೆ ಸಚಿವ ಎಚ್.ಸಿ. ಮಹದೇವಪ್ಪ ಪುತ್ರ ಸುನೀಲ್ ಬೋಸ್‌, ಹಿರಿಯ ನಾಯಕ ರೆಹಮಾನ್ ಖಾನ್ ಪುತ್ರ ಪುತ್ರ ಮನ್ಸೂರ್ ಅಲಿಖಾನ್ ಮತ್ತು  ಸಿ.ಕೆ. ಜಾಫರ್‌ ಷರೀಫ್‌ ಮೊಮ್ಮಗ ರಹಮಾನ್‌ ಷರೀಫ್‌ ಟಿಕೆಟ್ ಕೈ ತಪ್ಪುವ ಸಾಧ್ಯತೆ ಇದೇ ಎನ್ನಲಾಗಿದೆ.

ಇನ್ನು ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ಸಚಿವ ಟಿ.ಬಿ. ಜಯಚಂದ್ರ ಪುತ್ರ ಸಂತೋಷ್‌ಗೆ ಟಿಕೆಟ್‌ ನೀಡುವಂತೆ  ಲಾಬಿ ನಡೆಸಿದ್ದಾರೆ ಎನ್ನಲಾಗಿದೆ. ಆದರೆ, ಜಾತಿ ಲೆಕ್ಕಾಚಾರ ಪರಿಗಣಿಸಿ ಯಾದವ ಸಮುದಾಯವರಿಗೆ ಟಿಕೆಟ್‌ ನೀಡಲು ಪಕ್ಷ ತೀರ್ಮಾನಿಸಿದೆ.

ಏಪ್ರಿಲ್ 9 ರಿಂದ ನವದೆಹಲಿಯಲ್ಲಿ ಪಕ್ಷದ ಹಿರಿಯ ಮುಖಂಡ ಮಧುಸೂದನ್ ಮಿಸ್ತ್ರಿ ನೇತೃತ್ವದ ಚುನಾವಣಾ ಸಮಿತಿ ಸಭೆ ನಡೆದಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಪಕ್ಷದ ಹಿರಿಯ ನಾಯಕರಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ. ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಒಂದೊಂದೇ ಕ್ಷೇತ್ರಗಳ ಬಗ್ಗೆ ಅವಲೋಕನ ನಡೆಸಲಾಗಿದೆ. ನಾಳೆ(ಏಪ್ರಿಲ್ 13) ದೆಹಲಿಯಲ್ಲಿ ಕಾಂಗ್ರೆಸ್‌ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಲಿದ್ದು, ಈ ಸಭೆಯಲ್ಲಿ 170 ಕ್ಷೇತ್ರಗಳ ಅಭ್ಯರ್ಥಿಗಳ ಮೊದಲ ಪಟ್ಟಿಗೆ ಹಸಿರು ನಿಶಾನೆ ನೀಡುವ ಸಾಧ್ಯತೆ ಇದೆ.

Trending News