ಚೋರ್ ಬಚಾವೋ ಸಂಸ್ಥೆ ಎನ್ನುತ್ತಿದ್ದವರು ಈಗ ಸಿಬಿಐ ಜಪ ಮಾಡುತ್ತಿದ್ದಾರೆ-ಸಿದ್ದರಾಮಯ್ಯ

ಸಿಬಿಐ ಎಫ್‍ಐಆರ್ ದಾಖಲು ಮಾಡಿದೆ ಎಂದ ಮಾತ್ರಕ್ಕೆ ಜಾರ್ಜ್ ಅವರು ರಾಜೀನಾಮೆ ನೀಡುವ ಅಗತ್ಯವಿಲ್ಲ.

Last Updated : Nov 22, 2017, 03:21 PM IST
ಚೋರ್ ಬಚಾವೋ ಸಂಸ್ಥೆ ಎನ್ನುತ್ತಿದ್ದವರು ಈಗ ಸಿಬಿಐ ಜಪ ಮಾಡುತ್ತಿದ್ದಾರೆ-ಸಿದ್ದರಾಮಯ್ಯ   title=

ಬೆಳಗಾವಿ: ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ, ಕಮಿಷನ್ ದಂಧೆ ನಡೆಯುತ್ತಿದೆ ಎಂಬ ಯಡಿಯೂರಪ್ಪ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಯವರು ಸಿಬಿಐ ಎಂದರೆ ಚೋರ್ ಬಚಾವೋ ಸಂಸ್ಥೆ ಎನ್ನುತ್ತಿದ್ದವರು. ಈಗ ಆ ತನಿಖಾ ಸಂಸ್ಥೆಯ ಜಪ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಚಿಕ್ಕೋಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಯಡಿಯೂರಪ್ಪ ಅವರು ಸರ್ಕಾರದ ಮೇಲೆ ಮಾಡುತ್ತಿರುವ ಆರೋಪಕ್ಕೆ ಪ್ರತಿಕ್ರಿಯಿಸುವಾಗ, ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿ ಬಂದವರು ಯಾರು ? ಊಟ ಮಾಡಲು ಅಥವಾ ಸಂಬಂಧ ಬೆಳೆಸಲು ಅವರು ಜೈಲಿಗೆ ಹೋಗಿದ್ದರೇ ? ನಮ್ಮದು ಹಗರಣ ಮುಕ್ತ ಸರ್ಕಾರ. ನಮ್ಮಲ್ಲಿ ಯಾವುದೇ ಭ್ರಷ್ಟಾಚಾರ ಇಲ್ಲ ಎಂದು ಸ್ಪಷ್ಟಪಡಿಸಿದರು. 

ಮುಂದುವರೆದು ಮಾತನಾಡಿದ ಸಿದ್ದರಾಮಯ್ಯ ಬಿಜೆಪಿ ಆಡಳಿತದ ಅವಧಿಯಲ್ಲಿ ಇಂಧನ ಇಲಾಖೆಯಲ್ಲಿ ನಡೆದಿರುವ ಹಗರಣದ ತನಿಖೆಯನ್ನು ಯಾವ ಸಂಸ್ಥೆಗೆ ವಹಿಸಬೇಕು ಎಂಬುದನ್ನು ಸರ್ಕಾರ ಶೀಘ್ರವೇ ನಿರ್ಧರಿಸುತ್ತದೆ ಎಂದು ತಿಳಿಸಿದರು. ಬಿಜೆಪಿ ಆಡಳಿತದಲ್ಲಿ ಒಂದೇ ಒಂದು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಿಲ್ಲ. ಈಗ ಸಿಬಿಐ ಸಂಸ್ಥೆ ಮೇಲೆ ಆ ಪಕ್ಷದ ನಾಯಕರಿಗೆ ಪ್ರೀತಿ ಬಂದಿದೆ. ಸಿಬಿಐ ಎಂದರೆ 'ಚೋರ್ ಬಚಾವೋ ಸಂಸ್ಥೆ' ಎನ್ನುತ್ತಿದ್ದವರು. ಈಗ ಆ ತನಿಖಾ ಸಂಸ್ಥೆಯ ಜಪ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೇಳಿ ರಕ್ಷಣೆ ಪಡೆಯುವುದು ಇದರ ಉದ್ದೇಶ ಎಂದು ಟೀಕಿಸಿದರು. 

ಇದೇ ಸಂದರ್ಭದಲ್ಲಿ ಕೆ.ಜೆ.ಜಾರ್ಜ್ ಪರ ಬ್ಯಾಟಿಂಗ್ ಮಾಡಿದ ಸಿಎಂ, ಸಿಬಿಐ ಎಫ್‍ಐಆರ್ ದಾಖಲು ಮಾಡಿದೆ ಎಂದ ಮಾತ್ರಕ್ಕೆ ಜಾರ್ಜ್ ಅವರು ರಾಜೀನಾಮೆ ನೀಡುವ ಅಗತ್ಯವಿಲ್ಲ. ಅದು ಕೇವಲ ಪ್ರಾಥಮಿಕ ವರದಿ ಅಷ್ಟೇ. ಯಡಿಯೂರಪ್ಪ ಅವರ ವಿರುದ್ಧವೂ ಹಲವಾರು ಎಫ್‍ಐಆರ್ ಗಳು ದಾಖಲಾಗಿವೆ. ಹೀಗಾಗಿ ಅವರೂ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕಲ್ಲವೇ ? ಎಂದು ಪ್ರಶ್ನಿಸಿದರು.

Trending News