ಸಾವಯವ ಕೃಷಿ ಮೂಲಕ ಇಡೀ ರಾಜ್ಯದ ಗಮನ ಸೆಳೆದ ಈ ಗ್ರಾಮ

ಸಾವಯವ ಉತ್ಪನ್ನಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೃಷಿ ಇಲಾಖೆಯಿಂದ ಸೌಲಭ್ಯ ಪಡೆದು ಎರೆಹುಳು ತೊಟ್ಟಿಗಳನ್ನು ನಿರ್ಮಿಸಿಕೊಂಡು, ಎರೆಗೊಬ್ಬರ ಉತ್ಪಾದನೆ ಮಾಡಿ ಅದರಿಂದ ಸಾವಯವ ಉತ್ಪನ್ನಗಳನ್ನು ಹೆಚ್ಚಾಗಿ ಉತ್ಪನ್ನ ಮಾಡುವತ್ತ ಹೆಜ್ಜೆ ಇಟ್ಟಿರುವ ಜಗಳೂರು ತಾಲ್ಲೂಕಿನ ಚಿಕ್ಕಬನ್ನಿ ಹಟ್ಟಿ ಹಾಗೂ ಚಿಕ್ಕಬನ್ನಿಹಟ್ಟಿ ಗೊಲ್ಲರಹಟ್ಟಿ ರೈತರು ಅಭಿನಂದನಾರ್ಹರು.

Last Updated : Sep 10, 2020, 03:38 PM IST
ಸಾವಯವ ಕೃಷಿ ಮೂಲಕ ಇಡೀ ರಾಜ್ಯದ ಗಮನ ಸೆಳೆದ ಈ ಗ್ರಾಮ  title=
Photo Courtsey : facebook

ಬೆಂಗಳೂರು: ಸಾವಯವ ಉತ್ಪನ್ನಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೃಷಿ ಇಲಾಖೆಯಿಂದ ಸೌಲಭ್ಯ ಪಡೆದು ಎರೆಹುಳು ತೊಟ್ಟಿಗಳನ್ನು ನಿರ್ಮಿಸಿಕೊಂಡು, ಎರೆಗೊಬ್ಬರ ಉತ್ಪಾದನೆ ಮಾಡಿ ಅದರಿಂದ ಸಾವಯವ ಉತ್ಪನ್ನಗಳನ್ನು ಹೆಚ್ಚಾಗಿ ಉತ್ಪನ್ನ ಮಾಡುವತ್ತ ಹೆಜ್ಜೆ ಇಟ್ಟಿರುವ ಜಗಳೂರು ತಾಲ್ಲೂಕಿನ ಚಿಕ್ಕಬನ್ನಿ ಹಟ್ಟಿ ಹಾಗೂ ಚಿಕ್ಕಬನ್ನಿಹಟ್ಟಿ ಗೊಲ್ಲರಹಟ್ಟಿ ರೈತರು ಅಭಿನಂದನಾರ್ಹರು.

ರಾಗಿ, ಜೋಳ, ಸಜ್ಜೆ, ತೊಗರಿ, ಶೇಂಗಾ, ಹೀಗೆ ಬಹುಬೆಳೆ ಪದ್ಧತಿ ಅನುಸರಿಸುತ್ತಿರುವ ಗ್ರಾಮದ ಪ್ರತಿ ರೈತಕುಟುಂಬದಲ್ಲಿ ಕುರಿಗಳು, ರಾಸುಗಳು ಕಾಣಸಿಗುತ್ತವೆ. ಮನೆ ಮನೆಯಲ್ಲಿ 25 ರಿಂದ 200 ರವೆರೆಗೆ ಕುರಿಗಳನ್ನು ಹೊಂದಿರುವ ಕುಟುಂಬಗಳಿಗೆ ಜಮೀನಿನಲ್ಲಿ ಗೊಬ್ಬರಕ್ಕಾಗಿ ಕುರಿಗಳನ್ನು ನಿಲ್ಲಿಸುವುದು ಒಂದು ಉಪಕಸುಬಾಗಿದೆ.

ಪಟ್ಟಣ ಸಂಪರ್ಕದಿಂದ ದೂರವಿದ್ದು, ವಾಹನಗಳ ಸೌಕರ್ಯ ಅಷ್ಟಾಗಿ ಇಲ್ಲದಂಥ ಈ ಗ್ರಾಮಗಳು ಕೃಷಿ ಇಲಾಖೆಯ ಸಾವಯವ ಕೃಷಿ ಅಳವಡಿಕೆ ಮತ್ತು ಪ್ರಮಾಣೀಕರಣ ಕಾರ್ಯಕ್ರಮದಡಿಯಲ್ಲಿ ಗುಂಪು ಪ್ರಮಾಣೀಕರಣಕ್ಕಾಗಿ ಆಯ್ಕೆಗೊಂಡಿವೆ. ಚಿಕ್ಕಬನ್ನಿಹಟ್ಟಿಯಲ್ಲಿ ಶ್ರೀ ಮುರುಡಬಸವೇಶ್ವರ ಸಾವಯವ ಕೃಷಿ ಸಮಿತಿ ಹಾಗೂ ಚಿಕ್ಕಬನ್ನಿಹಟ್ಟಿ ಗೊಲ್ಲರಹಟ್ಟಿಯಲ್ಲಿ ಶ್ರೀ ಸಿದ್ದೇಶ್ವರ ಸಾವಯವ ಕೃಷಿ ಸಮಿತಿ ಹೆಸರಿನಲ್ಲಿ ಗುಂಪುಗಳು ನೊಂದಾವಣೆಯಾಗಿದ್ದು, ಪ್ರತಿ ಗುಂಪು 45 ಜನ ರೈತಸದಸ್ಯರನ್ನು ಹೊಂದಿವೆ.

ಗುಂಪುಗಳು ರಾಗಿ, ಊಟದ ಜೋಳ, ಶೇಂಗಾ, ಮೆಕ್ಕೆಜೋಳ ಬೆಳೆಗಳಿಗೆ ಸಾವಯವ ಪ್ರಮಾಣೀಕರಣಕ್ಕಾಗಿ ಬೆಳೆಗಳನ್ನು ಆಯ್ಕೆ ಮಾಡಿಕೊಂಡಿರುತ್ತಾರೆ. ಸಾವಯವ ಬೆಳೆ ಉತ್ಪಾದನೆ ಹಾಗೂ ಪ್ರಮಾಣೀಕರಣವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಎರೆಹುಳು ಗೊಬ್ಬರ ಉತ್ಪಾದನೆ ಮಾಡಲು ಎರೆಹುಳು ಸಾಕಾಣಿಕೆ ಘಟಕಗಳನ್ನು ನಿರ್ಮಿಸಿಕೊಳ್ಳಲು ಸರ್ಕಾರದ ವತಿಯಿಂದ ಸಹಾಯಧನವನ್ನು ನೀಡಲಾಗುತ್ತಿದೆ. 

ಯೋಜನೆಯ ಅಂಗವಾಗಿ ಚಿಕ್ಕಬನ್ನಿಹಟ್ಟಿ ಗ್ರಾಮ ಹಾಗೂ ಚಿಕ್ಕಬನ್ನಿಹಟ್ಟಿ ಗೊಲ್ಲರಹಟ್ಟಿ ಗ್ರಾಮದಲ್ಲಿ ಈವರೆಗೆ ತಲಾ 15 ಜನ ರೈತರು ಜೋಡಿ ಅಂಕಣದ ಎರೆಹುಳು ತೊಟ್ಟಿಗಳನ್ನು ನಿರ್ಮಿಸಿಕೊಂಡು ಎರೆಗೊಬ್ಬರ ಉತ್ಪಾದನೆ ಮಾಡುತ್ತಿದ್ದಾರೆ..
ಗ್ರಾಮ ಪ್ರವೇಶಿಸಿ ಹಾಗೇ ಹೊಲದ ದಾರಿಯಲ್ಲಿ ಸಾಗುತ್ತಿದ್ದರೆ ಒಂದೊಂದೇ ಎರೆಹುಳು ತೊಟ್ಟಿಗಳು ಕಾಣಸಿಗುತ್ತವೆ. ಕೆಲ ರೈತರು ಜಮೀನಿನಲ್ಲಿ, ಕೆಲವರು ಕಣದಲ್ಲಿ ಲಭ್ಯವಿರುವ ಜಾಗದಲ್ಲಿ ತೊಟ್ಟಿಗಳನ್ನು ನಿರ್ಮಾಣ ಮಾಡಿಕೊಂಡು ಎರೆಗೊಬ್ಬರ ಉತ್ಪಾದನೆ ಪ್ರಾರಂಭಿಸಿದ್ದಾರೆ. ಇದೇ ಎರೆಹುಳು ಗೊಬ್ಬರ ಉಪಯೋಗಿಸಿಕೊಂಡು ಎರೆಹುಳು ಗೊಬ್ಬರಗಳ ಘಟಕಗಳ ಪಕ್ಕದಲ್ಲಿ ಸಾವಯವ ರೀತಿಯಲ್ಲಿ ತರಕಾರಿ, ಹೂವು ಉತ್ಪಾದನೆ ಮಾಡುತ್ತಿದ್ದಾರೆ. 

‘ರಾಸಾಯನಿಕ ಮುಕ್ತ ಆಹಾರ ಸೇವನೆ ಆರೋಗ್ಯಕ್ಕು ಒಳ್ಳೆಯದು, ಭೂಮಿಯು ಫಲವತ್ತಾಗಿ ಉಳಿಯುತ್ತದೆ. ಸರ್ಕಾರದಿಂದ ದೊರೆತಿರುವ ಈ ಸಹಾಯ ರೈತರಿಗೆ ಅನುಕೂಲವಾಗಿದೆ’ಎನ್ನುತ್ತಾರೆ ಗ್ರಾಮದ ರೈತರು ಹಾಗೂ ಮಾಜಿ ಕೃಷಿ ಮಾರುಕಟ್ಟೆ ಉಪಾಧ್ಯಕ್ಷರಾದ ಮಹೇಶ್ ಹೇಳಿದರು.

ಬಾಕ್ಸ್ ವಿಷಯ: ಸಾವಯವ ಕೃಷಿ ನೀತಿ 2004 ರಡಿ ರಾಜ್ಯದಲ್ಲಿ ಈವರೆಗೆ ಕೃಷಿ ಇಲಾಖೆಯಿಂದ ಅನುಷ್ಠಾನಗೊಳ್ಳುತ್ತಿರುವ ಸಾವಯವ ಉತ್ತೇಜನ ಕಾರ್ಯಕ್ರಮಗಳಿಂದಾಗಿ ಸಾವಯವ ಉತ್ಪನ್ನಗಳ ಉತ್ಪಾದನೆ ಪ್ರಮಾಣ ಹೆಚ್ಚುತ್ತಿದ್ದು, ಗ್ರಾಹಕರಲ್ಲು ಸಾವಯವ ಉತ್ಪನ್ನಗಳ ಮಹತ್ವದ ಕುರಿತು ಅರಿವುಂಟಾಗಿದೆ. ಇದರಿಂದ ಸಾವಯವ ಉತ್ಪನ್ನಗಳ ಬೇಡಿಕೆ ಹೆಚ್ಚುತ್ತಿದೆ. ಆದರೆ ಸಾವಯವ ರೀತಿಯಿಂದಲೇ ಉತ್ಪನ್ನವಾಗಿರುವ ಉತ್ಪನ್ನಗಳೆಂದು ಖಾತರಿಪಡಿಸಿಕೊಳ್ಳುವ ಕುರಿತು ಅನುಮಾನ ವ್ಯಕ್ತವಾಗುತ್ತಿದೆ. ಈ ಅವಶ್ಯಕತೆಯನ್ನು ಮನಗಂಡು, ಕರ್ನಾಟಕ ಸರ್ಕಾರವು ದೇಶದಲ್ಲಿಯೇ ಪ್ರಥಮವಾಗಿ ಸಾವಯವ ಕೃಷಿಕರ ಉತ್ಪಾದನೆಗೆ ದೃಢೀಕರಣ/ ಪ್ರಮಾಣೀಕರಣ ನೀಡುವ ಯೋಜನೆಯಾದ “ಸಾವಯವ ಕೃಷಿ ಅಳವಡಿಕೆ ಮತ್ತು ದೃಢೀಕರಣ ಕಾರ್ಯಕ್ರಮ” ವನ್ನು ಅನುಷ್ಠಾನಗೊಳಿಸುತ್ತಿದೆ.

ಈ ಕಾರ್ಯಕ್ರಮದಲ್ಲಿ ವೈಯಕ್ತಿಕವಾಗಿ ಹಾಗೂ ಗುಂಪಿನಲ್ಲಿ ನೊಂದಾಯಿಸಿಕೊಂಡ ರೈತರಿಗೆ ಪರಿವರ್ತನಾ ಅವಧಿಯಾದ 3 ವರ್ಷಗಳಲ್ಲಿ ಸಾವಯವ ಉತ್ಪನ್ನಗಳನ್ನು ಉತ್ಪಾದನೆ ಮಾಡಲು ಪ್ರತ್ಸಾಹಿಸಿ, ಅವುಗಳಿಗೆ ದೃಢೀಕರಣ ನೀಡುವ ಉದ್ದೇಶ ಹೊಂದಿದೆ.ಜಿಲ್ಲೆಯಲ್ಲಿ ಈವರೆಗೆ 28 ಗುಂಪುಗಳು ಹಾಗೂ 26 ವೈಯಕ್ತಿಕ ಅರ್ಜಿಗಳು ನೊಂದಾವಣೆಯಾಗಿರುತ್ತವೆ. ಮೊದಲ ವರ್ಷದ ಪ್ರಮಾಣೀಕರಣ ಪ್ರಕ್ರಿಯೆ ಆರಂಭವಾಗಿದೆ.

ಮಾಹಿತಿ: ವಾರ್ತಾ ಇಲಾಖೆ 
 

Trending News