ಬೆಂಗಳೂರು: ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿದ್ದ ರಾಜಕೀಯ ಹೈಡ್ರಾಮಕ್ಕೆ ಕೊನೆಗೂ ತೆರೆ ಬಿದ್ದಿದ್ದೆ. ವಿಶ್ವಾಸಮತ ಯಾಚನೆಯಲ್ಲಿ ಬಹುಮತ ಇಲ್ಲದೆ ಸಿಎಂ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಂಡ ಬೆನ್ನಲ್ಲೇ ಬಿಜೆಪಿ ಶಾಸಕರು ವಿಜಯೋತ್ಸವ ಆಚರಿಸಿದ್ದಾರೆ.
ಬಹುಮತ ಸಾಬೀತುಪಡಿಸುವಲ್ಲಿ ದೋಸ್ತಿ ಸರ್ಕಾರ ವಿಫಲವಾಗುತ್ತಿದ್ದಂತೆ ವಿಕ್ಟರಿ ಚಿಹ್ನೆ ತೋರಿಸುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಗೆಲುವನ್ನು ಸಂಭ್ರಮಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಪ್ರಜಾಪ್ರಭುತ್ವಕ್ಕೆ ಸಿಕ್ಕ ಗೆಲುವು. ಇಂದಿನ ನಿರ್ಣಯವನ್ನು ನಾವೆಲ್ಲರೂ ಒಪ್ಪುತ್ತೇವೆ. 14 ತಿಂಗಳ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರದ ಬಗ್ಗೆ ರಾಜ್ಯದ ಜನ ಬೇಸತ್ತಿದ್ದರು. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಲಿದೆ ಎಂದು ಕರ್ನಾಟಕದ ಜನತೆಗೆ ಭರವಸೆ ನೀಡುತ್ತೇನೆ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದರು.
ಮುಂದುವರೆದು ಮಾತನಾಡುತ್ತ, ನಾಳೆಯಿಂದಲೇ ರಾಜ್ಯದ ಜನತೆಗೆ ಒಳ್ಳೆಯದಾಗಲಿದೆ. ನನ್ನ ಮೊದಲ ಆದ್ಯತೆ ಬರಗಾಲದಿಂದ ತತ್ತರಿಸಿರುವ ರಾಜ್ಯದ ಜನತೆಗೆ ಅನ್ನ ಕೊಡುವ ರೈತ ಸಮುದಾಯ. ಹಾಗಾಗಿ ರಾಜ್ಯದಲ್ಲಿ ಬರಪರಿಹಾರಕ್ಕಾಗಿ ತ್ವರಿತವಾಗಿ ಕೆಲಸ ಮಾಡುತ್ತೇವೆ ಎಂದು ಯಡಿಯೂರಪ್ಪ ಹೇಳಿದರು.
BS Yeddyurappa, BJP: We assure the farmers that we will give more importance to them in the coming days. We will take an appropriate decision at the soonest. https://t.co/3rZlnIP33J
— ANI (@ANI) July 23, 2019
ಕಳೆದ ನಾಲ್ಕು ದಿನಗಳಿಂದ ವಿಶ್ವಾಸಮತಯಾಚನೆ ಬಗ್ಗೆ ನಡೆದ ಚರ್ಚೆಯ ಬಳಿಕ ಮಂಗಳವಾರ ನಡೆದ ವಿಶ್ವಾಸಮತ ಯಾಚನೆಯಲ್ಲಿ ವಿಶ್ವಾಸಮತದ ಪರವಾಗಿ ದೋಸ್ತಿ ಸರ್ಕಾರಕ್ಕೆ 99 ಮತಗಳು ಮತ್ತು ವಿಶ್ವಾಸಮತ ಪ್ರಸ್ತಾವನೆಯ ವಿರುದ್ಧವಾಗಿ 105 ಮತಗಳು ಚಲಾವಣೆ ಆದವು. ಬಹುಮತಕ್ಕೆ 103 ಮತಗಳ ಅಗತ್ಯ ಇದ್ದ ಹಿನ್ನೆಲೆಯಲ್ಲಿ ದೋಸ್ತಿ ಸರ್ಕಾರ 99 ಮತಗಳನ್ನು ಪಡೆಯುವ ಮೂಲಕ ಬಹುಮತ ಸಾಬೀತುಪಡಿಸುವಲ್ಲಿ ವಿಫಲವಾದ ಕಾರಣ 14 ತಿಂಗಳ ದೋಸ್ತಿ ಸರ್ಕಾರ ಇಲ್ಲಿಗೆ ಅಂತ್ಯಗೊಂಡಿದೆ.
ಮೂಲಗಳ ಪ್ರಕಾರ, ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಜುಲೈ 25ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.