ಬಿಡಿಎದಲ್ಲಿ ಮತ್ತೊಂದು ಭಾರೀ ಹಗರಣ ಬೆಳಕಿಗೆ

ಬಿಡಿಎಯಲ್ಲಿ ಮತ್ತೊಂದು ಭಾರೀ ಹಗರಣ ಬೆಳಕಿಗೆ ಬಂದಿದೆ. ಪ್ರಾಧಿಕಾರ ಸ್ವಾಧೀನಪಡಿಸಿಕೊಂಡ ಜಾಗಕ್ಕೆ ಕಾನೂನು ಬಾಹಿರವಾಗಿ ಬದಲಿ ಜಾಗವನ್ನು ಪಡೆದು ಮಾರಾಟ ಮಾಡಿ ಪ್ರಾಧಿಕಾರಕ್ಕೆ ಬರೋಬ್ಬರಿ 100 ಕೋಟಿ ರೂಪಾಯಿಗಳ ನಷ್ಟ ಉಂಟು ಮಾಡಿರುವ ನಾಗರಾಜ್ ಎಂಬ ವ್ಯಕ್ತಿ ಮತ್ತು ಇದಕ್ಕೆ ಕಾರಣರಾದ ಬಿಡಿಎ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಬಿಎಂಟಿಎಫ್ ನಲ್ಲಿ ಶನಿವಾರ ಎಫ್ಐಆರ್ ದಾಖಲಾಗಿದೆ.

Written by - Sowmyashree Marnad | Edited by - Manjunath N | Last Updated : Jul 3, 2022, 12:15 AM IST
  • - 100 ಕೋಟಿ ರೂಪಾಯಿ ಹಗರಣದ ವಿರುದ್ಧ ಬಿಎಂಟಿಎಫ್ ನಲ್ಲಿ ಎಫ್ಐಆರ್ ದಾಖಲು
    - ಬಿಡಿಎ ಅಧ್ಯಕ್ಷ ವಿಶ್ವನಾಥ್ ಸೂಚನೆಯಂತೆ ದೂರು ದಾಖಲಿಸಿರುವ ಪ್ರಾಧಿಕಾರದ ಪೊಲೀಸರು
    - ಜಿಪಿಎದಾರ ಮತ್ತು ಹಿಂದಿನ ಬಿಡಿಎ ಅಧಿಕಾರಿಗಳು, ಸಿಬ್ಬಂದಿ ಶಾಮೀಲು ಶಂಕೆ

ಬಿಡಿಎದಲ್ಲಿ ಮತ್ತೊಂದು ಭಾರೀ ಹಗರಣ ಬೆಳಕಿಗೆ title=
ಸಾಂದರ್ಭಿಕ ಚಿತ್ರ

ಬೆಂಗಳೂರು: ಬಿಡಿಎಯಲ್ಲಿ ಮತ್ತೊಂದು ಭಾರೀ ಹಗರಣ ಬೆಳಕಿಗೆ ಬಂದಿದೆ. ಪ್ರಾಧಿಕಾರ ಸ್ವಾಧೀನಪಡಿಸಿಕೊಂಡ ಜಾಗಕ್ಕೆ ಕಾನೂನು ಬಾಹಿರವಾಗಿ ಬದಲಿ ಜಾಗವನ್ನು ಪಡೆದು ಮಾರಾಟ ಮಾಡಿ ಪ್ರಾಧಿಕಾರಕ್ಕೆ ಬರೋಬ್ಬರಿ 100 ಕೋಟಿ ರೂಪಾಯಿಗಳ ನಷ್ಟ ಉಂಟು ಮಾಡಿರುವ ನಾಗರಾಜ್ ಎಂಬ ವ್ಯಕ್ತಿ ಮತ್ತು ಇದಕ್ಕೆ ಕಾರಣರಾದ ಬಿಡಿಎ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಬಿಎಂಟಿಎಫ್ ನಲ್ಲಿ ಶನಿವಾರ ಎಫ್ಐಆರ್ ದಾಖಲಾಗಿದೆ.

ಈಸ್ಟ್ ಆಫ್ ಎನ್ ಜಿಇಎಫ್ ಬಡಾವಣೆ ನಿರ್ಮಾಣಕ್ಕಾಗಿ ಬಿಡಿಎ ಈರಣ್ಣ ಎಂಬುವರಿಗೆ ಸೇರಿದ ಬೆಂಗಳೂರು ಪೂರ್ವ ತಾಲೂಕಿನ ಕೆ.ಆರ್.ಪುರ ಹೋಬಳಿಯ ಬಾಣಸವಾಡಿ ಗ್ರಾಮದ ಸರ್ವೆ ಸಂಖ್ಯೆ 73 ರಲ್ಲಿದ್ದ 4 ಎಕರೆ 13 ಗುಂಟೆ ಜಮೀನನ್ನು 1986 ರಲ್ಲಿ ಸ್ವಾಧೀನಪಡಿಸಿಕೊಂಡಿದ್ದ ಬಿಡಿಎ ಇದಕ್ಕೆ ಪರಿಹಾರದ ಹಣವನ್ನು ಸಿವಿಲ್ ನ್ಯಾಯಾಲಯದಲ್ಲಿ ಠೇವಣಿ ಇಟ್ಟಿತ್ತು.

ಇದನ್ನೂ ಓದಿ: ಗೊಂಬೆಯಂತಿದ್ದ ನಟಿ ಪಾಲಿಗೆ ವಿಲನ್ ಆದ ವೈದ್ಯರು! ದಂತ ಚಿಕಿತ್ಸೆ ಪಡೆದ ಯುವನಟಿಗೆ ಇಂದೆಂಥ ಸ್ಥಿತಿ?

ಆದರೆ, ಈರಣ್ಣ ಬಳಿ ನಾಗರಾಜ್ ಎಂಬ ವ್ಯಕ್ತಿ ಜಿಪಿಎ ಬರೆಯಿಸಿಕೊಂಡು ಜಮೀನು ತನ್ನದು ಎಂದು ಪ್ರತಿಪಾದಿಸಿ, ನಿವೇಶನಗಳನ್ನು ನಿರ್ಮಾಣ ಮಾಡಿ ಮಾರಾಟ ಮಾಡಿದ್ದರು. ಈ ಮಧ್ಯೆ, ರೆವಿನ್ಯೂ ನಿವೇಶನದಾರರ ಮೂಲಕ ಬಿಡಿಎ ತಮ್ಮ ನಿವೇಶನಗಳನ್ನು ಸ್ವಾಧೀನಪಡಿಸಿಕೊಂಡಿದ್ದು, ಇದಕ್ಕೆ ಬದಲಿ ನಿವೇಶನಗಳನ್ನು ನೀಡುವಂತೆ ಸೂಚನೆ ನೀಡಬೇಕೆಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗಳ ವಿಚಾರಣೆ ನಡೆಸಿದ್ದ ಹೈಕೋರ್ಟ್, ಬಿಡಿಎ ನಿಯಮಾನುಸಾರ ನಿರ್ಧಾರ ಕೈಗೊಳ್ಳಬೇಕೆಂದು ಸೂಚಿಸಿ ಅರ್ಜಿ ವಿಲೇವಾರಿ ಮಾಡಿತ್ತು.

ನಾಗರಾಜ್ ಕಿಂಗ್ ಪಿನ್

ಈ ಮಧ್ಯೆ, ನಾಗರಾಜ್ ಎಲ್ಲಾ ರೆವಿನ್ಯೂ ನಿವೇಶನದಾರರಿಂದ ಸದರಿ ನಿವೇಶನಗಳನ್ನು ತನ್ನ ಹೆಸರಿಗೆ ಬರೆಯಿಸಿಕೊಂಡು, ತನಗೆ ಬದಲಿ ನಿವೇಶನಗಳನ್ನು ಮಂಜೂರು ಮಾಡುವಂತೆ ಬಿಡಿಎಗೆ ಅರ್ಜಿ ಸಲ್ಲಿಸುತ್ತಾನೆ. ಈ ಬಗ್ಗೆ ಎರಡು ಬಾರಿ ಚರ್ಚಿಸಿದ್ದ ಬಿಡಿಎ ಪ್ರಾಧಿಕಾರ ಸಭೆಯು ನಿಯಮಾವಳಿಗಳ ಪ್ರಕಾರ ಬದಲಿ ನಿವೇಶನ ನೀಡಲು ಸಾಧ್ಯವಿಲ್ಲ ಎಂದು ನಾಗರಾಜ್ ಮನವಿಯನ್ನು ತಿರಸ್ಕರಿಸಿತ್ತು.

2012 ರಲ್ಲಿ ನಡೆದ ಪ್ರಾಧಿಕಾರದ ಸಭೆಯಲ್ಲಿ ನಾಗರಾಜ್ ಗೆ ಅರ್ಕಾವತಿ ಬಡಾವಣೆಯ ವಿವಿಧ ಸರ್ವೇ ನಂಬರ್ ಗಳಲ್ಲಿ ಒಟ್ಟು 4 ಎಕರೆ 13 ಗುಂಟೆ ಜಮೀನನ್ನು ಬದಲಿಯಾಗಿ ನೀಡಲು ನಿರ್ಧಾರವಾಗಿ ಅದರಂತೆ ಮಂಜೂರು ಮಾಡಲಾಗುತ್ತದೆ. ಹೀಗೆ ಮಂಜೂರು ಮಾಡಲಾದ ಕೆಲವು ಜಾಗಗಳು ಬಫರ್ ಝೋನ್ ಸೇರಿದಂತೆ ಇನ್ನಿತರೆ ಕಾರಣಗಳಿಂದ ಮನೆ ನಿರ್ಮಾಣಕ್ಕೆ ಅಸಾಧ್ಯ ಎಂಬ ನೆಪ ಹೇಳಿ ನಾಗರಾಜ್ ನನಗೆ ಬೇರೆ ಕಡೆ ಭೂಮಿ ನೀಡಬೇಕೆಂದು ಮತ್ತೊಮ್ಮೆ ಪ್ರಾಧಿಕಾರದ ಅಧಿಕಾರಿಗಳಿಗೆ ಮನವಿ ಮಾಡುತ್ತಾನೆ. 

ಈ ಮನವಿಯನ್ನು ಪುರಸ್ಕರಿಸಿದ್ದ ಬಿಡಿಎ ಅಧಿಕಾರಿಗಳು 2014 ರಲ್ಲಿ ಥಣಿಸಂದ್ರ ಸೇರಿದಂತೆ ವಿವಿಧ ಕಡೆಗಳ ಪ್ರೈಂ ಸ್ಥಳಗಳಲ್ಲಿ ಜಿಪಿಎ ದಾರನಾಗಿದ್ದ ನಾಗರಾಜ್ ಹೆಸರಿಗೆ ಮಂಜೂರು ಮಾಡಿ, ನೋಂದಣಿಯನ್ನೂ ಮಾಡಿಸಿ ಸ್ವಾಧೀನಪತ್ರಗಳನ್ನೂ ನೀಡಿರುತ್ತಾರೆ.

ಇದನ್ನೂ ಓದಿ: ಗೊಂಬೆಯಂತಿದ್ದ ನಟಿ ಪಾಲಿಗೆ ವಿಲನ್ ಆದ ವೈದ್ಯರು! ದಂತ ಚಿಕಿತ್ಸೆ ಪಡೆದ ಯುವನಟಿಗೆ ಇಂದೆಂಥ ಸ್ಥಿತಿ?

ತನಿಖೆಗೆ ಎಸ್.ಆರ್.ವಿಶ್ವನಾಥ್ ಆದೇಶ

ಇದೊಂದು ದೊಡ್ಡ ಮಟ್ಟದ ಅಕ್ರಮವಾಗಿದೆ ಎಂಬುದನ್ನು ಗಮನಿಸಿದ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಅವರು, ಭೂಮಂಜೂರಾತಿಯ ಇಡೀ ಕಡತವನ್ನು ಜಾಲಾಡಿ ಈ ಬಗ್ಗೆ ಸೂಕ್ತ ತನಿಖೆ ನಡೆಸಿ ವರದಿ ನೀಡುವಂತೆ ಬಿಡಿಎ ಕಾರ್ಯಪಡೆಯ ಡಿವೈಎಸ್ ಪಿ ರವಿಕುಮಾರ್ ತಂಡಕ್ಕೆ ಆದೇಶ ನೀಡಿದ್ದರು.

ಈ ಬಗ್ಗೆ ವಿಚಾರಣೆ ನಡೆಸಿದ ರವಿಕುಮಾರ್, ಇನ್ಸ್ ಪೆಕ್ಟರ್ ಶ್ರೀನಿವಾಸ್ ಅವರು ಈ ಪ್ರಕರಣದಲ್ಲಿ ಭಾರೀ ಪ್ರಮಾಣದ ಅಕ್ರಮ ನಡೆದಿದೆ ಎಂದು ಆಯುಕ್ತರು ಮತ್ತು ಅಧ್ಯಕ್ಷರಿಗೆ ವರದಿ ನೀಡಿದ್ದರು.

ಬಿಎಂಟಿಎಫ್ ಗೆ ಇನ್ಸ್ ಪೆಕ್ಟರ್ ದೂರು

ಬಿಡಿಎ ಅಧ್ಯಕ್ಷ ವಿಶ್ವನಾಥ್ ಮತ್ತು ಆಯುಕ್ತ ರಾಜೇಶ್ ಗೌಡ ಅವರ ಸೂಚನೆಯಂತೆ ಇನ್ಸ್ ಪೆಕ್ಟರ್ ಶ್ರೀನಿವಾಸ್ ಅವರು ದೂರು ನೀಡಿದ್ದಾರೆ.

ಈ ಭೂಮಂಜೂರಾತಿ ನಡೆಸಿ ಸುಮಾರು 100 ಕೋಟಿ ರೂಪಾಯಿಯಷ್ಟು ಪ್ರಾಧಿಕಾರಕ್ಕೆ ನಷ್ಟ ಉಂಟು ಮಾಡಲಾಗಿದೆ. ಈ ಬಗ್ಗೆ ನಾಗರಾಜ್ ಮತ್ತು ಇದಕ್ಕೆ ಕಾರಣರಾಗಿರುವ ಬಿಡಿಎ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಬಿಎಂಟಿಎಫ್ ಗೆ ದೂರು ನೀಡಿದ್ದರು. ಈ ದೂರಿನನ್ವಯ ಬಿಎಂಟಿಸಿ ಇನ್ಸ್ ಪೆಕ್ಟರ್ ಬೇಬಿ ವಾಲಿಕರ್ ಅವರು ಎಫ್ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

'ಇಂತಹ ಕಾನೂನುಬಾಹಿರ ಪ್ರಕರಣಗಳ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವ ಅಧಿಕಾರವನ್ನು ಪ್ರಾಧಿಕಾರದ ಅಧ್ಯಕ್ಷರು ಮತ್ತು ಆಯುಕ್ತರಿಗೆ ಸರ್ಕಾರ ಬಿಡಿಎಗೆ ನೀಡಿದೆ. ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಇಂತಹ ಪ್ರಕರಣಗಳನ್ನು ಪತ್ತೆ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ಮಾಡಲಾಗುತ್ತದೆ.
-    ಎಸ್.ಆರ್.ವಿಶ್ವನಾಥ್, ಬಿಡಿಎ ಅಧ್ಯಕ್ಷರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News