"ಸಚಿವ ಅಶ್ವತ್ಥ್‌ ನಾರಾಯಣ್‌ ಹಾಕಿರುವ ಮಾನನಷ್ಟ ಮೊಕದ್ದಮೆಗೆ ಹೆದರುವ ಪ್ರಶ್ನೆಯೇ ಇಲ್ಲ"

 ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಪಕ್ಷದ ಹೋರಾಟ ನಿರ್ಭೀತಿಯಿಂದ ಮುಂದುವರಿಯಲಿದೆ ಎಂದು ಎಎಪಿಯ ಬೆಂಗಳೂರು ನಗರ ಅಧ್ಯಕ್ಷ ಮೋಹನ್‌ ದಾಸರಿ ಹೇಳಿದರು.

Written by - Sowmyashree Marnad | Edited by - Manjunath Naragund | Last Updated : Aug 4, 2022, 07:52 PM IST
  • ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ ಸರ್ಕಾರವು ಅನ್ಯಾಯ ಮಾಡಿದೆ
"ಸಚಿವ ಅಶ್ವತ್ಥ್‌ ನಾರಾಯಣ್‌ ಹಾಕಿರುವ ಮಾನನಷ್ಟ ಮೊಕದ್ದಮೆಗೆ ಹೆದರುವ ಪ್ರಶ್ನೆಯೇ ಇಲ್ಲ" title=
screengrab

ಬೆಂಗಳೂರು: ಕೈಗಾರಿಕಾ ತರಬೇತಿ ಕೇಂದ್ರದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ ಟೂಲ್‌ ಕಿಟ್‌ ವಿತರಣೆ ಹಗರಣ ಆರೋಪಕ್ಕೆ ಸಂಬಂಧಿಸಿ ಸಚಿವ ಅಶ್ವತ್ಥ್‌ ನಾರಾಯಣ್‌ರವರು ಕಳುಹಿಸಿರುವ ಲೀಗಲ್ ನೋಟಿಸ್‌ಗೆ ಹೆದರುವುದಿಲ್ಲ. ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಪಕ್ಷದ ಹೋರಾಟ ನಿರ್ಭೀತಿಯಿಂದ ಮುಂದುವರಿಯಲಿದೆ ಎಂದು ಎಎಪಿಯ ಬೆಂಗಳೂರು ನಗರ ಅಧ್ಯಕ್ಷ ಮೋಹನ್‌ ದಾಸರಿ ಹೇಳಿದರು.

ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಮೋಹನ್‌ ದಾಸರಿ, “13 ಸಾವಿರ ವಿದ್ಯಾರ್ಥಿಗಳಿಗೆ 22 ಕೋಟಿ ರೂಪಾಯಿ ವೆಚ್ಚದಲ್ಲಿ ಅಗತ್ಯ ಸಲಕರಣೆಗಳನ್ನು ಒಳಗೊಂಡ ಟೂಲ್ ಕಿಟ್‌ಗಳನ್ನು ಖರೀದಿಸುವ ಗುತ್ತಿಗೆಯಲ್ಲಿ ಭಾರೀ ಅಕ್ರಮ ನಡೆದಿರುವ ಕುರಿತು ದಾಖಲೆ ಸಹಿತ ಆರೋಪ ಮಾಡಿದ್ದೆವು. ಈ ಕುರಿತು ನ್ಯಾಯಾಂಗ ತನಿಖೆ ಆಗಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದೆವು. ಆದರೆ ಸರ್ಕಾರವು ತನಿಖೆಗೆ ವಹಿಸದ ಕಾರಣ ಈ ಕುರಿತು ಲೋಕಾಯುಕ್ತರಿಗೆ ದೂರು ನೀಡಿದ್ದೆವು. ಸಚಿವ ಅಶ್ವತ್ಥ್‌ ನಾರಾಯಣ್‌ರವರು ನಮ್ಮ ಆರೋಪಗಳಿಗೆ ಸ್ಪಷ್ಟೀಕರಣ ನೀಡುವ ಬದಲು ಪಕ್ಷದ ಮುಖಂಡರಾದ ಮೋಹನ್‌ ದಾಸರಿ, ಡಾ. ವೆಂಕಟೇಶ್‌ ಹಾಗೂ ಚನ್ನಪ್ಪಗೌಡ ನೆಲ್ಲೂರು ವಿರುದ್ಧ ವಕೀಲರಿಂದ ಲೀಗಲ್‌ ನೋಟಿಸ್‌ ಕಳುಹಿಸಿ ನಮ್ಮ ಬಾಯಿ ಮುಚ್ಚಿಸಲು ಯತ್ನಿಸಿದ್ದಾರೆ” ಎಂದು ಹೇಳಿದರು.

ಇದನ್ನೂ ಓದಿ: ಕರ್ನಾಟಕ ರತ್ನ ‘ಅಪ್ಪು’ ಅಭಿಮಾನಿಗಳಿಗೆ ಕಿಚ್ಚ ಸುದೀಪ್‌ ಸ್ಪೆಷಲ್‌ ಥ್ಯಾಂಕ್ಸ್..!‌

ಎಎಪಿ ಮುಖಂಡ ಹಾಗೂ ಮಾಜಿ ಸಂಸದ ಡಾ. ವೆಂಕಟೇಶ್‌ ಮಾತನಾಡಿ, “ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ ಸರ್ಕಾರವು ಅನ್ಯಾಯ ಮಾಡಿದೆ. ಟೆಂಡರ್‌ನಲ್ಲಾದ ಅಕ್ರಮದಿಂದಾಗಿ ಅನುದಾನದ ದೊಡ್ಡ ಪಾಲು ಭ್ರಷ್ಟ ಸಚಿವರು ಹಾಗೂ ಗುತ್ತಿಗೆದಾರರ ಜೇಬು ಸೇರಿ, ವಿದ್ಯಾರ್ಥಿಗಳಿಗೆ ಕಳಪೆ ಗುಣಮಟ್ಟದ ಉಪಕರಣಗಳು ಪೂರೈಕೆಯಾಗಲಿದೆ. ಭ್ರಷ್ಟಾಚಾರವನ್ನು ಪ್ರಶ್ನಿಸಿದ್ದಕ್ಕೆ 5 ಕೋಟಿ ರೂಪಾಯಿ ಪರಿಹಾರ ಕೇಳಿ ಸಚಿವ ಅಶ್ವತ್ಥ್‌ ನಾರಾಯಣ್‌ ನೋಟಿಸ್‌ ಕಳುಹಿಸಿರುವುದು ಹಾಗೂ ಅದನ್ನು ಕಟ್ಟದಿದ್ದರೆ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಬೆದರಿಕೆ ಹಾಕಿರುವುದು ಖಂಡನೀಯ” ಎಂದು ಹೇಳಿದರು.

ಇದನ್ನೂ ಓದಿ: ಕಿಚ್ಚ ಸುದೀಪ್‌ 'ವಿಕ್ರಾಂತ್‌ ರೋಣ'..! ಮೊದಲ ದಿನವೇ ಹಲವು ದಾಖಲೆ ಉಡೀಸ್..!‌

ಎಎಪಿಯ ರಾಜಕೀಯ ಚಟುವಟಿಕೆ ವಿಭಾಗದ ಅಧ್ಯಕ್ಷ ಚನ್ನಪ್ಪಗೌಡ ನೆಲ್ಲೂರು ಮಾತನಾಡಿ, “ಟೆಂಡರ್‌ನಲ್ಲಿ ಭಾಗವಹಿಸಿದ್ದ ಇಂಟಲೆಕ್ ಸಿಸ್ಟಮ್ಸ್ ಸಂಸ್ಥೆಯು ಇಲಾಖೆಗೆ ನಕಲಿ ದಾಖಲೆಗಳನ್ನು ನೀಡಿ ಅನುಮೋದನೆ ಪಡೆದುಕೊಂಡಿದೆ. ಮೊದಲ ಬಾರಿ ಟೆಂಡರ್ ಕರೆದಾಗ ಇದೇ ಕಂಪನಿಗೆ ತಾಂತ್ರಿಕ ಅರ್ಹತೆ ಇರಲಿಲ್ಲ. ಅದಕ್ಕಾಗಿ ಟೆಂಡರ್ ಪ್ರಕ್ರಿಯೆಯನ್ನೇ ರದ್ದುಗೊಳಿಸಿ, ಮರು ಟೆಂಡರ್‌ ಕರೆದು ಇದೇ ಕಂಪನಿಗೆ ಅನುವು ಮಾಡಿಕೊಡಲಾಗಿದೆ. ಇದೇ ಕಂಪನಿಯು ಈ ಹಿಂದೆ ಬೇರೆಯವರಿಗೆ 22 ಕೋಟಿ ರೂಪಾಯಿ ಹಾಗೂ 11 ಕೋಟಿ ರೂಪಾಯಿ ಮೊತ್ತದ ಸಾಮಗ್ರಿಗಳನ್ನು ಪೂರೈಸಿರುವ ಹಾಗೆ ಸೃಷ್ಟಿಸಿರುವ ಜಿಎಸ್‌ಟಿ ಬಿಲ್‌ಗಳು ಸಂಪೂರ್ಣ ನಕಲಿಯಾಗಿವೆ. ಜಿಎಸ್‌ಟಿ ಮಂಡಳಿ ಕೂಡ ಇವು ನಕಲಿ ಬಿಲ್ ಎಂದು ರುಜುವಾತು ಪಡಿಸಿದೆ. ಅಶ್ವತ್ಥ್‌ ನಾರಾಯಣ್‌ರವರು ಈ ಕುರಿತು ಪ್ರತಿಕ್ರಿಯಿಸುತ್ತಿಲ್ಲವೇಕೆ?” ಎಂದು ಪ್ರಶ್ನಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News