ರಾಮನಗರ: ಮುಂದಿನ 4 ತಿಂಗಳಲ್ಲಿ ಚನ್ನಪಟ್ಟಣ ಕ್ಷೇತ್ರದ ಚಿತ್ರಣವೇ ಬದಲಾಗಿ ಪ್ರಗತಿಯ ದರ್ಶನವಾಗಲಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.
ಸೋಮವಾರ ಚನ್ನಪಟ್ಟಣ ಕ್ಷೇತ್ರದ ಅಕ್ಕೂರು, ಕೋಡಂಬಹಳ್ಳಿ, ಹೊಂಗನೂರು ಜಿಲ್ಲಾ ಪಂಚಾಯತ್ ಕ್ಷೇತ್ರಗಳಲ್ಲಿ ಸುಮಾರು 200 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚದ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೇರವೇರಿಸಿ, ಪೂರ್ಣಗೊಂಡ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿ, ರೈತರ ಸಾಲ ಮನ್ನಾ ಋಣ ಮುಕ್ತ ಪತ್ರ ವಿತರಿಸಿ, ಜನತಾ ದರ್ಶನ ನಡೆಸಿ ಅವರು ಮಾತನಾಡಿದರು.
ತಾಲೂಕಿನಲ್ಲಿ ಎರಡು ದಿನ ಇರುತ್ತೇನೆ. ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಈ ಜನತಾ ದರ್ಶನ ನಡೆಸಲಾಗುತ್ತಿದೆ. ನಾನು ಪ್ರಚಾರ ನಡೆಸದೆ ಇದ್ದರೂ, ನನಗೆ ಕ್ಷೇತ್ರದ ಮತದಾರರು ಆಶೀರ್ವಾದ ಮಾಡಿದ್ದಾರೆ. ಹೀಗಾಗಿ ಜನತಾ ದರ್ಶನಕ್ಕೆ ಬೆಂಗಳೂರಿನಿಂದ ಅಧಿಕಾರಿಗಳು ಬಂದಿದ್ದಾರೆ ಎಂದರು.
ತಹಸೀಲ್ದಾರ್ ಗಳು ಕೆಲಸ ಮಾಡಿ. ಇಲ್ಲವೆ ಅಮಾನತಿಗೆ ಸಿದ್ದವಾಗಿರಿ:
ಮೂರು ಜಿಲ್ಲಾ ಪಂಚಾಯತ್ ಕ್ಷೆತ್ರಗಳ ವ್ಯಾಪ್ತಿಯಲ್ಲಿ 2 ಸಾವಿರಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾಗಿವೆ. ಅರ್ಜಿಗಳನ್ನು ನನ್ನ ಕೈಗೆ ಮಾತ್ರವಲ್ಲ. ನಮ್ಮ ಅಧಿಕಾರಿಗಳ ಕೈಗೆ ಕೊಡಿ ಸಾಕು. ಎಲ್ಲ ಕೆಲಸಗಳನ್ನು ಮಾಡುತ್ತೇನೆ. ಯಾವುದೇ ಆತಂಕ ಬೇಡ. ಒಂದು ತಿಂಗಳೊಳಗೆ ಎಲ್ಲ ಸಮಸ್ಯೆ ಬಗೆ ಹರಿಯಲಿದೆ. ಕಂದಾಯ ಇಲಾಖೆ ಮೇಲೆ ಸಾಕಷ್ಟು ದೂರು ಬಂದಿದೆ. ಖಾತೆ, ಪೋಡಿ ಮಾಡಲು ಸಹ ಸಾರ್ವಜನಿಕರನ್ನು ಅಲೆಸಲಾಗುತ್ತಿದೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಇಂದೇ ಇಬ್ಬರನ್ನು ಅಮಾನತು ಮಾಡಬೇಕು ಎಂದುಕೊಂಡಿದ್ದೆ. ಆದರೂ, ಕಡೆಯ ಎಚ್ಚರಿಕೆ ನೀಡಲಾಗಿದೆ. ಮುಂದಿನ ಬೆಳವಣಿಗೆಗೆ ನಾನು ಜವಬ್ದಾರಿ ಅಲ್ಲ. ತಹಸೀಲ್ದಾರ್ ಗಳು ಕೆಲಸ ಮಾಡಿ. ಇಲ್ಲವೆ ಅಮಾನತಿಗೆ ಸಿದ್ದವಾಗಿರಿ. ಜನ ಸಮಾನ್ಯರಿಗೆ ಅನಾನುಕೂಲವಾಗದಂತೆ ಕೆಲಸ ಮಾಡಿ ಎಂದು ಎಚ್ಚರಿಕೆ ನೀಡಿದರು.
ನೀವು ಬೆಂಗಳೂರಿನ ಮುಖ್ಯಮಂತ್ರಿಗಳ ಕೃಷ್ಣ ಗೃಹ ಕಚೇರಿಗೆ ಬಂದು ನಿಮ್ಮ ಅರ್ಜಿ ಬಗ್ಗೆ ವಿಚಾರಿಸಬಹುದು. ಈ ಬಗ್ಗೆ ನಮ್ಮ ಅಧಿಕಾರಿಗಳು ನಿಮಗೆ ಸಹಾಯ ಮಾಡುತ್ತಾರೆ ಎಂದು ಹೇಳಿದರು.
ಕೆರೆಗಳನ್ನು ತುಂಬಿಸುವುದೇ ಅನೇಕ ವರ್ಷಗಳಿಂದ ದೊಡ್ಡ ಡ್ರಾಮ ನಡೆದಿದೆ. ಇಗ್ಗಲ್ಲೂರು ಡ್ಯಾಂ ಕಟ್ಟಿದ್ದು ಯಾರು ಎಂಬುದು ಎಲ್ಲರಿಗೂ ಗೊತ್ತು. ಒಂದು ವರ್ಷದಲ್ಲಿ 25 ಕೆರೆಗಳಿಗೆ ಮಾತ್ರವೇ ನೀರು ಬಿಟ್ಟಿದ್ದಾರೆ. ಆದರೆ, ಅದನ್ನು ಕುಮಾರಣ್ಣನ ಮೇಲೆ ಆರೋಪ ಮಾಡಲಾಗುತ್ತಿದೆ. ಅಕ್ಕೂರಿಗೆ ನೀರು ಬಿಟ್ಟಿಲ್ಲ ಎಂಬ ಬಗ್ಗೆ ನನಗೆ ಎಷ್ಟು ಪೋನ್ ಕರೆಗಳು ಬಂದಿವೆ ಎಂಬುದು ನನಗೆ ಗೊತ್ತಿದೆ ಎಂದರು.
ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಪರಿಸ್ಥಿತಿಯೇ ಬೇರೆ. ಇಂದಿನ ಪರಿಸ್ಥಿತಿಯೇ ಬೇರೆ. ನನ್ನ ನೋವುಗಳು ನನ್ನ ಬಳಯೇ ಇರಲಿ. ಜನರಿಗೆ ಮಾತ್ರವಲ್ಲ ಅಧಿಕಾರಿಗಳಿಗೆ ವಿಶ್ವಾಸ ಮೂಡಿಸಬೇಕಿದೆ. ಹೀಗಾಗಿ ಜನರು ನನ್ನ ಮೇಲೆ ನಂಬಿಕೆ ಕಳೆದಿಕೊಳ್ಳುವ ಕೆಲಸವನ್ನು ನಾನೇ ಮಾಡಿದ್ದೇನೆ ಎಂಬ ಕೊರಗು ಇದೆ. ಹೀಗಾಗಿ ಗ್ರಾಮ ವಾಸ್ತವ್ಯ ಅರಂಭಿಸಲಾಗುತ್ತಿದ್ದು, ರಾಮನಗರ ಜಿಲ್ಲೆಯಲ್ಲಿಯು ಗ್ರಾಮ ವಾಸ್ತವ್ಯ ನಡೆಸಲಾಗುವುದು ಎಂದರು.
ನೀರಿನ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಿ. ನೀರನ್ನು ನೀಡಿದರೆ, ಎಲ್ಲೆಡೆ ಕಬ್ಬು ಬೆಳೆಯಲಾಗಿದೆ. ಇದನ್ನು ದೆಹಲಿಯಿಂದ ಬರುವವರು ನೋಡಿದರೆ, ನನಗೆ ಸಮಸ್ಯೆ. ಎಲ್ಲ ಕೆರೆಗಳನ್ನು ತುಂಬಿಸಲಾಗುವುದು. ಆದರೆ, ನೀರನ್ನು ದುರ್ಬಳಕೆ ಮಾಡಿಕೊಳ್ಲಬೇಡಿ ಎಂದರು.
ಮುಂದಿನ ತಿಂಗಳಿನಿಂದ ವೃದ್ಧಾಪ್ಯ ವೇತನ 2 ಸಾವಿರಕ್ಕೆ ಏರಿಕೆ:
ಯಾರು 60 ವರ್ಷಗಳ ಮೇಲ್ಪಟ್ಟಿದ್ದಾರೆ ಅವರಿಗೆ ಮುಂದಿನ ತಿಂಗಳು 1 ಸಾವಿರ ಬರುವಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜತೆಗೆ ಮುಂದಿನ ವರ್ಷಗಳಿಂದ ವೃದ್ಧಾಪ್ಯ ವೇತನವನ್ನು 2 ಸಾವಿರಕ್ಕೆ ಏರಿಕೆ ಮಾಡಲಾಗುವುದು ಎಂದು ಅವರು ಘೋಷಣೆ ಮಾಡಿದರು.
ಒಂದೇ ವರ್ಷದಲ್ಲೆ 25 ಸಾವಿರ ಕೋಟಿ ಹಣವನ್ನು ಸಾಲ ಮನ್ನಾಗೆ ನೀಡಿದ್ದೇನೆ. ಈ ಬಗ್ಗೆ ಆಂಧ್ರದ ಸಿಎಂ ಜಗನ್ ಮೋಹನ್ ರೆಡ್ಡಿ ಜತೆ ಮೊನ್ನೆ ಊಟಕ್ಕೆ ಹೋಗಿದ್ದಾಗ ಮೆಚ್ಚುಗೆ ವ್ಯಕ್ತ ಪಡಿಸಿದ್ದರು. ಈ ಹಿಂದೆ ಆಂದ್ರದಲ್ಲಿ ಸಿಎಂ ಆಗಿದ್ದ ಚಂದ್ರಬಾಬು ನಾಯ್ಡು 5 ಸಾವಿರ ಕೋಟಿ ಸಾಲ ಮನ್ನ ಮಾಡಲು ಸಾಧ್ಯವಾಗಿರಲಿಲ್ಲವಂತೆ ಎಂದರು.
ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿಲ್ಲಾ ಪಂಚಾಉತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಪಿ.ಮುಲೈಮುಹಿಲನ್, ಮುಖ್ಯಮಂತ್ರಿಯವರ ಅಪ್ತ ಕಾರ್ಯದರ್ಶಿ ಜಿ.ಪ್ರಭು, ವಿಶೇಷ ಕರ್ತವ್ಯಾಧಿಕಾರಿಗಳಾದ ಶಿವಲಿಂಗಯ್ಯ, ನಾಗರಾಜ್, ಮಾರುತಿ ಪ್ರಸನ್ನ ಹಾಗು ಸ್ಥಳೀಯ ಮುಖಂಡರು, ಜಿಲ್ಲಾ ತಾಲ್ಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.