ಬೆಂಗಳೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡುರಾವ್ ವಿರುದ್ಧ ಟೀಕಿಸುವ ವೇಳೆ ಸಂಸದ ಪ್ರತಾಪ್ ಸಿಂಹ ದಿನೇಶ್ ಗುಂಡುರಾವ್ ಪತ್ನಿ ಟಬು ರಾವ್ ಅವರನ್ನು ಅಪಹಾಸ್ಯ ಮಾಡಿರುವ ಬಗ್ಗೆ ಟಬು ರಾವ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಟಬು ರಾವ್, ಸಾಮಾಜಿಕ ಮಾಧ್ಯಮ ಮತ್ತು ಪ್ರಾದೇಶಿಕ ಟೆಲಿವಿಷನ್ ನೆಟ್ವರ್ಕ್ಗಳಲ್ಲಿ ಪ್ರಸಾರವಾದ ವೀಡಿಯೋ ಕ್ಲಿಪ್ನಲ್ಲಿ ಮೈಸೂರಿನ ಗೌರವಾನ್ವಿತ ಸಂಸದರಾದ ಶ್ರೀ ಪ್ರತಾಪ್ ಸಿಂಹ ಅವರು ನನಗೆ ಅಪಹಾಸ್ಯ ಮತ್ತು ಆಕ್ಷೇಪಾರ್ಹ ಉಲ್ಲೇಖದಿಂದ ತೀವ್ರವಾಗಿ ನೋವುಂಟು ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ನನ್ನ ಪತಿ ಶ್ರೀ ದಿನೇಶ್ ಗುಂಡು ರಾವ್ ಮಾಡಿದ ಹೇಳಿಕೆಗಳಿಂದ ಶ್ರೀ ಸಿಂಹ ದುಃಖಿತರಾಗಿದ್ದರೆ, ಅವರು ದಿನೇಶ್ ಜೊತೆ ಮುಕ್ತ ಮಾತುಕತೆ ನಡೆಸಲಿ. ಆದರೆ, ರಾಜಕೀಯ ಟೀಕೆ ವೇಳೆ ಹೆಂಗಸರನ್ನು ಕರೆತಂದಿರುವುದು ಸರಿಯಲ್ಲ.
ನನ್ನನ್ನು 'ಬೇಗಂ ಟಬು' ಎಂಬ ಸಂಸದರ ಉಲ್ಲೇಖವು ಅವರ ಕೋಮುವಾದಿ ಮತ್ತು ಸಂಕುಚಿತ ಮನೋಭಾವವನ್ನು ಬಿಂಬಿಸುತ್ತದೆ. ನಾನು ಮುಸ್ಲಿಂ ಮತ್ತು ನಾನು ಬ್ರಾಹ್ಮಣನನ್ನು ವಿವಾಹವಾಗಿದ್ದೇನೆ ಎಂಬುದು ರಹಸ್ಯವಲ್ಲ. ವಿವಿಧತೆಯಲ್ಲಿ ಏಕತೆಯನ್ನು ಸಾರುವ ಭಾರತದಲ್ಲಿ ನಾವು ಎರಡು ದಶಕಗಳ ಕಾಲ ಉತ್ತಮ ದಾಂಪತ್ಯ ಜೀವನ ನಡೆಸಿದ್ದೇವೆ.
ಗೌರವಾನ್ವಿತ ಸಂಸದರು ಮೈಸೂರಿನವರಾಗಿದ್ದು, ಸಮಾಜದಲ್ಲಿ ಅನಾರೋಗ್ಯದ ಬೀಜಗಳನ್ನು ಬಿತ್ತನೆ ಮಾಡುವ ಬದಲು ಕವಿ ಕುವೆಂಪು ಅವರ ವಿಶ್ವ ಮಾನವ ತತ್ತ್ವವನ್ನು ಅನುಸರಿಸಲು ನಾನು ಅವರನ್ನು ಒತ್ತಾಯಿಸುತ್ತಿದ್ದೇನೆ ಎಂದು ಟಬು ರಾವ್ ತಮ್ಮ ಫೇಸ್ ಬುಕ್ ಮೂಲಕ ತಿಳಿಸಿದ್ದಾರೆ.
ಘಟನೆಯ ಹಿನ್ನೆಲೆ
ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡುರಾವ್ ನೀಡಿದ್ದ ಅವಹೇಳನಕಾರಿ ಹೇಳಿಕೆಗೆ ಬಿಜೆಪಿ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯೆ ವೇಳೆ, ಯೋಗಿ ಆದಿತ್ಯನಾಥರಿಗೆ ಚಪ್ಪಲಿಯಲ್ಲಿ ಹೊಡಿಬೇಕು ಅಂದಿದ್ದೀರಲ್ಲ ದಿನೇಶ್ ಗುಂಡೂರಾವ್, ಇದೇ ಮಾತನ್ನು ಯೋಗಿ ಬದಲು ಒಬ್ಬ ಮುಲ್ಲಾನೋ, ಮೌಲ್ವಿ ಬಗ್ಗೆನೋ ಆಡಿದ್ರೆ, ನಿಮ್ಮ ಹೆಂಡತಿ ಬೇಗಂ ತಬ್ಬು ಅವರೇ ಆ ಕೆಲಸ ನಿಮಗೆ ಮಾಡಿರುತ್ತಿದ್ದರು, ನಾಲಗೆ ಮೇಲೆ ನಿಗಾ ಇರಲಿ ಎಂದು ತಮ್ಮ ಟ್ವಿಟ್ಟರ್ ಮೂಲಕ ಪ್ರತಿಕ್ರಿಯಿಸಿದ್ದರು.
ಯೋಗಿ ಆದಿತ್ಯನಾಥರಿಗೆ ಚಪ್ಪಲಿಯಲ್ಲಿ ಹೊಡಿಬೇಕು ಅಂದಿದ್ದೀರಲ್ಲ ದಿನೇಶ್ ಗುಂಡೂರಾವ್, ಇದೇ ಮಾತನ್ನು ಯೋಗಿ ಬದಲು ಒಬ್ಬ ಮುಲ್ಲಾನೋ, ಮೌಲ್ವಿ ಬಗ್ಗೆನೋ ಆಡಿದ್ರೆ, ನಿಮ್ಮ ಹೆಂಡತಿ ಬೇಗಂ ತಬ್ಬು ಅವರೇ ಆ ಕೆಲಸ ನಿಮಗೆ ಮಾಡಿರುತ್ತಿದ್ದರು, ನಾಲಗೆ ಮೇಲೆ ನಿಗಾ ಇರಲಿ. pic.twitter.com/IQPaRZnbMQ
— Pratap Simha (@mepratap) April 15, 2018