ಬೆಂಗಳೂರು : ಗ್ರಾಮವಾಸ್ತವ್ಯ ಸಾಂಕೇತಿಕ. ಅದು ಜನಪ್ರಿಯತೆಗಾಗಿ ಮಾಡಿದ ಕಾರ್ಯಕ್ರಮವಲ್ಲ. ಗ್ರಾಮವಾಸ್ತವ್ಯದ ನೈಜ ಉದ್ದೇಶ ಸರ್ಕಾರ ಮತ್ತು ಜನತೆ ನಡುವೆ ನಿಕಟ ಸಂಪರ್ಕ ಸಾಧಿಸುವುದು. ಸ್ಥಳೀಯ ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸಿಕೊಡುವುದು ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ತಿಳಿಸಿದರು.
21.06.2019 ರಂದು ಯಾದಗಿರಿ ಜಿಲ್ಲೆಯ ಗುರುಮಿಟ್‍ಕಲ್ ತಾಲೂಕಿನ ಚಂದರಕಿ ಗ್ರಾಮ, 22.06.2019ರಂದು ಅಫ್ಜಲ್‍ಪುರ ತಾಲ್ಲೂಕಿನ ಹೆರೂರು-ಬಿ ಗ್ರಾಮಗಳಲ್ಲಿ ಮತ್ತು 26.06.2019ರಂದು ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಕರಿಗುಡ್ಡ ಗ್ರಾಮ, 27.06.2019ರಂದು ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಉಜಳಂಬ ಗ್ರಾಮಗಳಲ್ಲಿ ಆಯೋಜಿಸಿರುವ ಗ್ರಾಮವಾಸ್ತವ್ಯ ಕಾರ್ಯಕ್ರಮಗಳ ಪೂರ್ವಬಾವಿ ತಯಾರಿಗಾಗಿ ನಡೆದ ಸಭೆಯಲ್ಲಿ ಭಾಗವಹಿಸಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾತನಾಡುತ್ತಿದ್ದರು.
ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಗ್ರಾಮ ವಾಸ್ತವ್ಯ ಕುರಿತು ಪೂರ್ವಭಾವಿ ಸಭೆ ನಡೆಸಿದರು.
ಸಚಿವರಾದ @PriyankKharge, ಬಂಡೆಪ್ಪ ಕಾಶೆಂಪುರ್, @sa_ramahesh , ಗಣಿ ಮತ್ತು ಭೂವಿಜ್ಞಾನ ಸಚಿವ ರಾಜಶೇಖರ ಪಾಟೀಲ್, ಶಾಸಕರು, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. pic.twitter.com/BM9HW8jLIT— CM of Karnataka (@CMofKarnataka) June 13, 2019
ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದು ನನ್ನಗುರಿ:
“ಗ್ರಾಮವಾಸ್ತವ್ಯದ ಸಂದರ್ಭದಲ್ಲಿ ನನ್ನ ವಾಸ್ತವ್ಯಕ್ಕೆ ಪ್ರಾಮುಖ್ಯತೆ ನೀಡಬೇಕಿಲ್ಲ. ಸರಳ ಸಿದ್ಧತೆಗಳಾದರೆ ಸಾಕು” ಎಂದ ಅವರು “ಗ್ರಾಮವಾಸ್ತವ್ಯದ ಸಂದರ್ಭದಲ್ಲಿ ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದು ನನ್ನಗುರಿ. ರಸ್ತೆ, ಕುಡಿಯುವ ನೀರು, ಶಾಲಾ ಕಾಲೇಜುಗಳ ಸುಧಾರಣೆಯ ಬಗೆಗೆ ನನ್ನ ಆದ್ಯತೆ. ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಿಕೊಡುವುದು ನನ್ನ ಧ್ಯೇಯ” ಎಂದು ನುಡಿದರು.
ಕಲಬುರಗಿ, ಬೀದರ್ ಮತ್ತು ಯಾದಗಿರಿ ಜಿಲ್ಲೆಗಳ ಉಸ್ತುವಾರಿ ಸಚಿವರುಗಳಾದ ಪ್ರಿಯಾಂಕ ಖರ್ಗೆ, ಬಂಡೆಪ್ಪ ಕಾಶೆಂಪೂರ, ರಾಜಶೇಖರ್ ಪಾಟೀಲ್ ಅವರುಗಳು ಭಾಗವಹಿಸಿದ್ದ ಸಭೆಯಲ್ಲಿ ಸಚಿವರುಗಳಾದ ಹೆಚ್.ಡಿ. ರೇವಣ್ಣ, ಸಾ.ರಾ ಮಹೇಶ್ ಅವರುಗಳು ಉಪಸ್ಥಿತರಿದ್ದರು.
ಗ್ರಾಮವಾಸ್ತವ್ಯದಿಂದ ಜಿಲ್ಲೆಗಳ ಅಭಿವೃದ್ಧಿಗೂ ಸಹಕಾರಿ:
ಮುಖ್ಯಮಂತ್ರಿಗಳ ಗ್ರಾಮವಾಸ್ತವ್ಯದಿಂದ ಸ್ಥಳೀಯ ಸಮಸ್ಯೆಗಳ ಪರಿಹಾರವಷ್ಟೇ ಅಲ್ಲದೆ ಆಯಾ ಜಿಲ್ಲೆಗಳ ಅಭಿವೃದ್ಧಿಗೂ ಸಹಕಾರಿಯಾಗಲಿದೆ. ಇದೊಂದು ಅತ್ಯುತ್ತಮ ಬೆಳವಣಿಗೆ ಎಂಬ ಅಭಿಪ್ರಾಯವನ್ನು ಸಚಿವರುಗಳು ವ್ಯಕ್ತಪಡಿಸಿದರು.
ಸಂಬಂಧಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಪ್ರಮುಖ ಇಲಾಖೆಗಳ ಕಾರ್ಯದರ್ಶಿಗಳು ಹಾಗೂ ಮುಖ್ಯಮಂತ್ರಿಯವರ ಅಪರ ಮುಖ್ಯಕಾರ್ಯದರ್ಶಿ ರಮಣರೆಡ್ಡಿ ಅವರು ಸಭೆಯಲ್ಲಿ ಉಪಸ್ಥಿತರಿದ್ದರು.