ಬೆಂಗಳೂರು: ಕರ್ನಾಟಕ ಮುಕ್ತ ವಿಶ್ವ ವಿದ್ಯಾನಿಲಯದ(ಕೆಎಸ್ಒಯು) 2017-18ನೇ ಸಾಲಿನ ತಾಂತ್ರಿಕೇತರ ಕೋರ್ಸ್ಗಳಿಗೆ 2 ವಾರಗಳಲ್ಲಿ ಮಾನ್ಯತೆ ನೀಡುವಂತೆ ಹೈಕೋರ್ಟ್ ವಿಶ್ವವಿದ್ಯಾಲಯ ಅನುದಾನ ಆಯೋಗಕ್ಕೆ (ಯುಜಿಸಿ)ಗೆ ಆದೇಶಿಸಿದೆ.
KSOUನ ವಿವಿಧ ಕೋರ್ಸ್ಗಳಿಗೆ ಮಾನ್ಯತೆ ನೀಡಲು ಯುಜಿಸಿಗೆ ನಿರ್ದೇಶಿಸಲು ಕೋರಿದ ತಕರಾರು ಅರ್ಜಿ - ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಏಕಸದಸ್ಯ ಪೀಠವು ವಿಶ್ವವಿದ್ಯಾನಿಲಯದಲ್ಲಿ ದಾಖಲಾಗಿರುವ ತಾಂತ್ರಿಕೇತರ ಕೋರ್ಸ್ಗಳ ವಿದ್ಯಾರ್ಥಿಗಳಿಗೆ 2017-18ನೇ ಸಾಲಿಗೆ ಮಾನ್ಯತೆ ನೀಡುವಂತೆ ಯುಜಿಸಿಗೆ ನಿರ್ದೇಶಿಸಿದೆ.
2017-18ನೇ ಸಾಲಿಗೆ ಮಾನ್ಯತೆ ನೀಡುವಂತೆ ಕೋರಿದ್ದ ಮನವಿಯನ್ನು ಯುಜಿಸಿ ತಿರಸ್ಕರಿಸಿದೆ. ಆದರೆ ದೇಶದ ನೂರಾರು ವಿವಿಗಳಿಗೆ ಅವಧಿ ಮುಗಿದ ನಂತರವೂ ಯುಜಿಸಿ ಮಾನ್ಯತೆ ನೀಡಿದೆ. ನಮ್ಮ ಮನವಿಯನ್ನು ಮಾತ್ರ ತಿರಸ್ಕರಿಸಿದೆ ಎಂದು ಕೆಎಸ್ಯು ಪರ ವಕೀಲರು ತಮ್ಮ ವಾದದಲ್ಲಿ ದೂರಿದರು.
ಇತರ ವಿವಿಗಳಿಗೆ ಅವಧಿ ಮೀರಿದ ಬಳಿಕವೂ ಮಾನ್ಯತೆ ನೀಡಬಹುದಾದರೆ ಕೆಎಸ್ಯುಗೆ ಏಕೆ ಮಾನ್ಯತೆ ನೀಡಲು ಸಾಧ್ಯವಿಲ್ಲ ಎಂದು ಯುಜಿಸಿಗೆ ಪ್ರಶ್ನೆ ಮಾಡಿರುವ ಹೈಕೋರ್ಟ್, ಕೆಎಸ್ಒಯು ಮನವಿ ತಿರಸ್ಕರಿಸಲು ಯುಜಿಸಿ ಅಧಿಕಾರಿಗಳು ನೀಡಿರುವ ಕಾರಣ ಸಮರ್ಪಕವಾಗಿಲ್ಲ. ಆದ್ದರಿಂದ 2 ವಾರಗಳಲ್ಲಿ ಕೆಎಸ್ಒಯುನ 2017-18ನೇ ಸಾಲಿನ ತಾಂತ್ರಿಕೇತರ ಕೋರ್ಸ್ಗಳಿಗೆ ಮಾನ್ಯತೆ ನೀಡಬೇಕು ಎಂದು ಯುಜಿಸಿಗೆ ಹೈಕೋರ್ಟ್ ತಾಕೀತು ಮಾಡಿದೆ.