"ನೀರಾವರಿ ಬಗ್ಗೆ ತಿಳಿವಳಿಕೆ ಇಲ್ಲದವರು ಅಧಿಕಾರದಲ್ಲಿದ್ದರೆ ಏನಾಗುತ್ತದೆ ಎನ್ನುವುದಕ್ಕೆ ಕಾವೇರಿ ಬಿಕ್ಕಟ್ಟು ಸ್ಪಷ್ಟ ಉದಾಹರಣೆ"

 ನೀರಾವರಿ ಬಗ್ಗೆ ಕನಿಷ್ಠ ಜ್ಞಾನ, ತಿಳಿವಳಿಕೆ ಇಲ್ಲದವರು ಅಧಿಕಾರದಲ್ಲಿದ್ದರೆ ಏನಾಗುತ್ತದೆ ಎನ್ನುವುದಕ್ಕೆ ಕಾವೇರಿ ಬಿಕ್ಕಟ್ಟು ಸ್ಪಷ್ಟ ಉದಾಹರಣೆ. ಸುಪ್ರೀಂಕೋರ್ಟ್ ಆದೇಶ ನಿಜಕ್ಕೂ ದುರದೃಷ್ಟಕರ.ಆದರೆ, ಇಲ್ಲಿ ನ್ಯಾಯಾಲಯವನ್ನು ದೂರುವಂತಿಲ್ಲ ಎಂದು ಎಚ್.ಡಿ.ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.

Written by - Manjunath N | Last Updated : Sep 21, 2023, 04:01 PM IST
  • ಹೆಜ್ಜೆಹೆಜ್ಜೆಗೂ ತಪ್ಪು ಮಾಡಿದ್ದು ಕಾಂಗ್ರೆಸ್ ಸರಕಾರ.ಈ ಮಾತನ್ನು ನಾನು ಸರ್ವಪಕ್ಷ ಸಭೆಯಲ್ಲೇ ಒತ್ತಿ ಹೇಳಿದ್ದೆ.
  • ಕಾವೇರಿ ಜಲ ನಿಯಂತ್ರಣ ಸಮಿತಿ & ಪ್ರಾಧಿಕಾರದ ನಿರ್ದೇಶನ ಬರುವುದಕ್ಕೂ ಮೊದಲೂ ಹೇಳಿದ್ದೆ.
  • ಹೇಳಿದ ಮಾತನ್ನು ಕೇಳಿಸಿಕೊಳ್ಳುವ ಸೌಜನ್ಯ, ಜನಪರ ಕಾಳಜಿ ಸರಕಾರಕ್ಕೆ ಇರಲೇ ಇಲ್ಲ.
"ನೀರಾವರಿ ಬಗ್ಗೆ ತಿಳಿವಳಿಕೆ ಇಲ್ಲದವರು ಅಧಿಕಾರದಲ್ಲಿದ್ದರೆ ಏನಾಗುತ್ತದೆ ಎನ್ನುವುದಕ್ಕೆ ಕಾವೇರಿ ಬಿಕ್ಕಟ್ಟು ಸ್ಪಷ್ಟ ಉದಾಹರಣೆ" title=

ಬೆಂಗಳೂರು: ನೀರಾವರಿ ಬಗ್ಗೆ ಕನಿಷ್ಠ ಜ್ಞಾನ, ತಿಳಿವಳಿಕೆ ಇಲ್ಲದವರು ಅಧಿಕಾರದಲ್ಲಿದ್ದರೆ ಏನಾಗುತ್ತದೆ ಎನ್ನುವುದಕ್ಕೆ ಕಾವೇರಿ ಬಿಕ್ಕಟ್ಟು ಸ್ಪಷ್ಟ ಉದಾಹರಣೆ. ಸುಪ್ರೀಂಕೋರ್ಟ್ ಆದೇಶ ನಿಜಕ್ಕೂ ದುರದೃಷ್ಟಕರ.ಆದರೆ, ಇಲ್ಲಿ ನ್ಯಾಯಾಲಯವನ್ನು ದೂರುವಂತಿಲ್ಲ ಎಂದು ಎಚ್.ಡಿ.ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.

ಹೆಜ್ಜೆಹೆಜ್ಜೆಗೂ ತಪ್ಪು ಮಾಡಿದ್ದು ಕಾಂಗ್ರೆಸ್ ಸರಕಾರ.ಈ ಮಾತನ್ನು ನಾನು ಸರ್ವಪಕ್ಷ ಸಭೆಯಲ್ಲೇ ಒತ್ತಿ ಹೇಳಿದ್ದೆ.ಕಾವೇರಿ ಜಲ ನಿಯಂತ್ರಣ ಸಮಿತಿ & ಪ್ರಾಧಿಕಾರದ ನಿರ್ದೇಶನ ಬರುವುದಕ್ಕೂ ಮೊದಲೂ ಹೇಳಿದ್ದೆ. ಹೇಳಿದ ಮಾತನ್ನು ಕೇಳಿಸಿಕೊಳ್ಳುವ ಸೌಜನ್ಯ, ಜನಪರ ಕಾಳಜಿ ಸರಕಾರಕ್ಕೆ ಇರಲೇ ಇಲ್ಲ.ರಾಜ್ಯ ಸರಕಾರಕ್ಕೆ ಜನಹಿತಕ್ಕಿಂತ ರಾಜಕೀಯ ಹಿತವೇ ಮುಖ್ಯವಾಗಿದೆ.ತಮಿಳುನಾಡಿನ ಜತೆ ಆ ಪಕ್ಷದ ರಾಜಕೀಯ ಹಿತಾಸಕ್ತಿ ತಳುಕು ಹಾಕಿಕೊಂಡ ಕಾರಣಕ್ಕೆ ಕಾವೇರಿ ಹಿತವನ್ನು ವ್ಯವಸ್ಥಿತವಾಗಿ ಬಲಿ ಕೊಡಲಾಗಿದೆ ಎಂದು ಹೇಳಿದರು.

ಆ.10ರಂದು ಕಾವೇರಿ ಜಲ ನಿಯಂತ್ರಣ ಸಮಿತಿ ಸಭೆ ನಡೆಯಿತು. ಮರುದಿನ ಕಾವೇರಿ ಜಲನಿರ್ವಹಣಾ ಪ್ರಾಧಿಕಾರ ಸಭೆ ಆಯಿತು. ಮುಂದಿನ 15 ದಿನ ತಮಿಳುನಾಡಿಗೆ 5000 ಕ್ಯೂಸೆಕ್ ನೀರು ಬಿಡಿ ಎಂದು ಪ್ರಾಧಿಕಾರ ರಾಜ್ಯಕ್ಕೆ ಸೂಚನೆ ನೀಡಿತು.ತಕ್ಷಣವೇ ಸುಪ್ರೀಂಕೋರ್ಟಿಗೆ ತುರ್ತು ಅರ್ಜಿ ಸಲ್ಲಿಸಿ, ನ್ಯಾಯಾಲಯಕ್ಕೆ ವಾಸ್ತವ ಸ್ಥಿತಿ ಮನವರಿಕೆ ಮಾಡಿಕೊಡಬೇಕಿತ್ತು.ಸರಕಾರ ಹಾಗೆ ಮಾಡಲೇ ಇಲ್ಲ. ಸುಪ್ರೀಂಕೋರ್ಟ್ ಕಡೆ ಮುಖ ಮಾಡದೆ I.N.D.I.A ಮೈತ್ರಿಕೂಟಕ್ಕೆ ಶಕ್ತಿ ತುಂಬಲು ಪ್ರಾಧಿಕಾರದ ಆದೇಶವನ್ನೇ ನೆಪ ಮಾಡಿಕೊಂಡು ತಮಿಳುನಾಡಿಗೆ ನೀರು ಹರಿಸಲು ಆದೇಶಿಸಿತು.ತನ್ನ ತಲೆ ಮೇಲೆ ತಾನೇ ಚಪ್ಪಡಿ ಎಳೆದುಕೊಂಡು, ಅದೇ ಚಪ್ಪಡಿಯನ್ನು ಕನ್ನಡಿಗರ ಮೇಲೆಯೂ ಎಳೆದುಬಿಟ್ಟಿತು ಎಂದರು.

ಇದನ್ನೂ ಓದಿ: ಚಿನ್ನ ಖರೀದಿಗೆ ಇದುವೇ ಬೆಸ್ಟ್ ಟೈಂ… 10 ಗ್ರಾಂ ಬಂಗಾರದ ದರ ಹೇಗಿದೆ ಗೊತ್ತಾ?

ಸರಕಾರ ಎಸಗಿದ ತಪ್ಪು ಇಷ್ಟೇ ಅಲ್ಲ, ನಿಯಂತ್ರಣ ಸಮಿತಿ & ಪ್ರಾಧಿಕಾರದ ಸಭೆಗಳನ್ನು ಬಹಳ ಲಘುವಾಗಿ ಪರಿಗಣಿಸಿತು.ಸರ್ವಪಕ್ಷ ಸಭೆಯಲ್ಲಿ ವಿರೋಧ ಪಕ್ಷಗಳ ನಾಯಕರು ಕೊಟ್ಟ ಸಲಹೆಗಳನ್ನೂ ಗಾಳಿಗೆ ತೂರಿತು.ನಮ್ಮ ಸಲಹೆಗೆ ಕವಡೆಕಾಸಿನ ಕಿಮ್ಮತ್ತೂ ಕೊಡದೆ ಕನ್ನಡಿಗರ ಹಿತವನ್ನು ತನ್ನ ರಾಜಕೀಯ ಸ್ವಾರ್ಥಕ್ಕೆ ಬಲಿ ಮಾಡಿತು.ಕಾವೇರಿ ವಿಷಯ ಕೋರ್ಟಿನಲ್ಲಿ ಬಗೆಹರಿಯುವುದಿಲ್ಲ ಎಂದು ನಾನು ಹೇಳಿದ್ದೆ.ಈಗ ತಮಿಳುನಾಡಿಗೆ ಅನುಕೂಲವಾಗಿದೆ.ನಮಗೆ ಅನ್ಯಾಯವಾಗಿದೆ.ಈ ತಿಕ್ಕಾಟ ಸಾಗುತ್ತಿರುವ ದಿಕ್ಕು ನೋಡಿದರೆ ಒಕ್ಕೂಟ ವ್ಯವಸ್ಥೆಗೆ ಗೌರವ ಸಿಗುವಂತಿಲ್ಲ.ಬಹಳ ನೋವಿನಿಂದ ಈ ಮಾತು ಹೇಳುತ್ತಿದ್ದೇನೆ ಎಂದು  ಹೇಳಿದ್ದಾರೆ.

ರಾಜ್ಯಸಭೆಯಲ್ಲಿ ಶ್ರೀ ಎಚ್.ಡಿ.ದೇವೇಗೌಡ ಅವರು ತಮ್ಮ ಇಳಿ ವಯಸ್ಸಿನಲ್ಲಿಯೂ ಕಾವೇರಿ ಬಗ್ಗೆ ದನಿ ಎತ್ತಿದರು.ಮಾನ್ಯ ಸಭಾಪತಿಗಳು ಕುಳಿತೇ ಮಾತನಾಡಿ ಎಂದರೂ ಅವರು ಎದ್ದುನಿಂತು ರಾಜ್ಯದ ಪರ ಹಕ್ಕು ಮಂಡಿಸಿದರು. ಆದರೆ, ರಾಜ್ಯದ ಇತರೆ ಸದಸ್ಯರು, ಅದರಲ್ಲಿಯೂ ಶ್ರೀ ಖರ್ಗೆ ಅವರು ಮೌನವಾಗಿದ್ದರು! ಈ ಮೌನ ನನಗೆ ಅಚ್ಚರಿ ಉಂಟು ಮಾಡಿದೆ.ಅವರು ಕಾಂಗ್ರೆಸ್ ಅಧ್ಯಕ್ಷರು ಹೌದು,ಆದರೆ,ಕರ್ನಾಟಕದ ಹಿತದ ಬಗ್ಗೆ ಅವರ ನಿಲುವೇನು? ಸೆ. 13ರಿಂದ ನಿತ್ಯವೂ 5,000 ಕ್ಯೂಸೆಕ್ ನೀರು ಬಿಡಬೇಕು ಎಂದು ಪ್ರಾಧಿಕಾರ ಆದೇಶ ನೀಡಿದೆ. ಅದನ್ನೇ ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಆದರೆ, ಕೋರ್ಟ್ ಆದೇಶಕ್ಕೂ ಮೊದಲು ಪ್ರಾಧಿಕಾರ ಹೇಳಿತು ಎಂದು ವಿದ್ಯುತ್ ವೇಗದಲ್ಲಿ ನೀರು ಬಿಟ್ಟ ಸರಕಾರವು; ಈಗ ಸುಪ್ರೀಂಕೋರ್ಟ್ ಹೇಳಿದೆ, ಇನ್ನೇನು ಮಾಡುವುದು ಎಂದು ಕೈ ಚೆಲ್ಲಿದೆ.ಮರು ಪರಿಶೀಲನಾ ಅರ್ಜಿಯನ್ನು ಕೋರ್ಟಿಗೆ ತುರ್ತಾಗಿ ಸಲ್ಲಿಸಬೇಕು ಎಂದು ಹೇಳಿದರು.

ಪ್ರಾಧಿಕಾರ ಆದೇಶ ಕೊಟ್ಟಷ್ಟು ನೀರನ್ನು ಬಿಡುವಂತೆ ಕಾನೂನು ತಜ್ಞರು ಸಲಹೆ ಮಾಡಿದ್ದರು. ಅಲ್ಲಿಗೆ ಸುಪ್ರೀಂನಲ್ಲಿ ನ್ಯಾಯ ಸಿಗಲಾರದು ಎಂದು ಅವರು ಮೊದಲೇ ಕೈ ಚಲ್ಲಿದಂತೆ ಕಾಣುತ್ತದೆ. ಕೋರ್ಟ್ ಆದೇಶ ಬರುವ ತನಕ ನೀರು ಬಿಡಲು ಸಾಧ್ಯ ಇಲ್ಲ ಎಂದು ಸರಕಾರವು ನಿಯಂತ್ರಣ ಸಮಿತಿ ಮತ್ತು ಪ್ರಾಧಿಕಾರಕ್ಕೆ ನೇರವಾಗಿ ಹೇಳಬೇಕಿತ್ತು. ಹಾಗೆ ಹೇಳಲಿಲ್ಲ. ಪರಿಣಾಮ; ಈವರೆಗೆ ನಾವು ಸಾಕಷ್ಟು ನೀರು ಹರಿಸಬೇಕಾಯಿತು. ಮುಂದೆಯೂ ಹರಿಸಬೇಕಾದ ಅನಿವಾರ್ಯತೆ ಸೃಷ್ಟಿ ಆಗಿದೆ ಎಂದರು.

ಸರಕಾರ ವಕೀಲರು ಹೇಳಿದರಂತೆ ಕೇಳಿ ಜನರ ಹಿತ ಕಡೆಗಣಿಸಿದೆ. ಯಾವ ಕಾರಣಕ್ಕೂ ನೀರು ಬಿಡಬಾರದಿತ್ತು. ಕೋರ್ಟ್ ಆದೇಶಕ್ಕೆ ಕಾದು ಕ್ರಮ ಜರುಗಿಸಬೇಕಿತ್ತು. ಊರು ಕೊಳ್ಳೆ ಹೋದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎನ್ನುವಂತೆ ವರ್ತಿಸಿದೆ ಸರಕಾರ.ವಕೀಲರ ಮಾತುಗಳನ್ನು ಕೇಳಿಕೊಂಡು ನೀರು ಬಿಡುತ್ತಾ ಹೋದರೆ ಅದಕ್ಕೆ ಕೊನೆ ಮೊದಲು ಇರುವುದಿಲ್ಲ. ಹಾಗಾದರೆ ಸರಕಾರ ಅನ್ನೊದು ಯಾಕೆ? ವಿಷಯ ಎಲ್ಲಿ ಶುರುವಾಯಿತೋ ಮತ್ತೆ ಅಲ್ಲಿಗೆ ಬಂದು ನಿಂತಿರುವುದಕ್ಕೆ ಯಾರು ಹೊಣೆ?ಸರಕಾರ ಅನುಸರಿಸಿದ ವಿಳಂಬ ರಾಜಕಾರಣ ರಾಜ್ಯದ ಹಿತಕ್ಕೆ ಪೆಟ್ಟು ನೀಡಿದೆ.ತಮಿಳುನಾಡು ಸುಪ್ರೀಂ ಕೋರ್ಟ್ ಗೆ ಹೋದ ಕೂಡಲೇ ರಾಜ್ಯವೂ ಮೊರೆ ಹೋಗಬೇಕಿತ್ತು.ಮೀನಾಮೇಷ ಎಣಿಸುತ್ತಾ ತಡ ಮಾಡಿತು.ತಡ ಮಾಡಿದ್ದಕ್ಕೆ ತಕ್ಕ ಶಾಸ್ತಿ ಆಗಿದೆ.ವಿನಾಕಾರಣ ಕನ್ನಡಿಗರಿಗೆ ಶಿಕ್ಷೆ ಆಗಿದೆ ಎಂದರು.

ಇದನ್ನೂ ಓದಿ: ವಿಶ್ವಕಪ್’ಗೂ ಮುನ್ನ ಕೋಚ್ ಬದಲಾವಣೆ: ಹೊಸ ಕೋಚ್ ಆಗಿ ಈ ಅನುಭವಿ ಆಟಗಾರನ ನೇಮಕ

ಪ್ರಾಧಿಕಾರದ ಆದೇಶ ಬಂದೊಡನೆ ಮಧ್ಯರಾತ್ರಿಯೇ ಸುಪ್ರೀಂ ಕೋರ್ಟ್ ಗೆ ಹೋಗಿ, ನಮ್ಮ ಸ್ಥಿತಿ ಮನವರಿಕೆ ಮಾಡಿಕೊಡಬೇಕಿತ್ತು.ರಾತ್ರೋರಾತ್ರಿ ಪಿಟಿಷನ್ ಹಾಕಬೇಕಿತ್ತು.ಅದನ್ನು ಮಾಡದೇ ನೀರು ಬಿಡುತ್ತಾ ಕೂತಿತು ಸರಕಾರ.ನೀರು ಇಲ್ಲ ಎನ್ನುತ್ತಿದ್ದವರೂ ಈವರೆಗೆ ಹೇಗೆ ಬಿಟ್ಟಿರಿ ಎಂದು ಕೋರ್ಟ್ ಪ್ರಶ್ನೆ ಮಾಡುತ್ತದೆ ಎನ್ನುವ ಸಾಮಾನ್ಯ ಜ್ಞಾನವೂ ಸರಕಾರಕ್ಕೆ ಇರಲಿಲ್ಲ.ಕೆಆರ್ ಎಸ್ ನಲ್ಲಿ ಈಗ ಇರುವುದೇ 20 ಟಿಎಂಸಿಗೂ ಕಡಿಮೆ ನೀರು.3 ದಿನಕ್ಕೆ ಒಂದು ಟಿಎಂಸಿ ಹರಿದು ಹೋಗುತ್ತದೆ. ದಿನಕ್ಕೆ 5,000 ಕ್ಯೂಸೆಕ್ ಹರಿದರೆ 15 ದಿನಕ್ಕೆ 7 ಟಿಎಂಸಿ ಖಾಲಿ! ಆಗ ಉಳಿಯುವುದು 13 ಟಿಎಂಸಿ!! ಇದರಲ್ಲಿ ಡೆಡ್ ಸ್ಟೋರೇಜ್ 7 ಟಿಎಂಸಿ ಇರಬೇಕು. ಇನ್ನು ಉಳಿಯೋದು ಎಷ್ಟು? ಎಂದು ಪ್ರಶ್ನಿಸಿದ್ದಾರೆ.

ಬೆಂಗಳೂರಿಗೆ ಇನ್ನೂ 9 ತಿಂಗಳಿಗೆ ಕುಡಿಯಲಿಕ್ಕೆ ಕನಿಷ್ಠ 13 ಟಿಎಂಸಿ ಬೇಕು.ಎಲ್ಲಿಂದ ಬರುತ್ತೆ ಆ ನೀರು? ಆದೇಶ ಪಾಲಿಸಲು ಕರ್ನಾಟಕ, ಅನುಭವಿಸಲು ತಮಿಳುನಾಡು ಎನ್ನುವ ಮಾತು ಮತ್ತೊಮ್ಮೆ ಸಾಬೀತಾಗಿದೆ.ಇದಕ್ಕೆಲ್ಲ ಕಾಂಗ್ರೆಸ್ ಸರಕಾರವೇ ನೇರ ಕಾರಣ ಎಂದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
 

Trending News