ಸುಪ್ರೀಂ ಕೋರ್ಟಿನಲ್ಲಿ ಇಂದು ಅನರ್ಹ ಶಾಸಕರ ಅರ್ಜಿ ವಿಚಾರಣೆ

ಮೊದಲಿಗೆ ಬಹಳ ಬೇಗ ತಮಗೆ ಸುಪ್ರೀಂ ಕೋರ್ಟಿನಲ್ಲಿ ನ್ಯಾಯಸಿಗುತ್ತೆ, ತಾವು ನೂತನ‌ ಸರ್ಕಾರದಲ್ಲಿ ಸಚಿವರಾಗಬಹುದು ಎಂದು ಕನಸು ಕಂಡಿದ್ದ ಅನರ್ಹ ಶಾಸಕರಿಗೆ 10 ದಿನವಾದರೂ ಶುಭ ಸುದ್ದಿ ಸಿಗಲಿಲ್ಲ. ಪ್ರಕರಣ ಇತ್ಯರ್ಥ ಆಗುವುದಿರಲಿ ಅರ್ಜಿ ವಿಚಾರಣೆಗೆ ಬರಲಿಲ್ಲ. 

Last Updated : Sep 17, 2019, 07:46 AM IST
ಸುಪ್ರೀಂ ಕೋರ್ಟಿನಲ್ಲಿ ಇಂದು ಅನರ್ಹ ಶಾಸಕರ ಅರ್ಜಿ ವಿಚಾರಣೆ title=

ನವದೆಹಲಿ: ತಮ್ಮ ವಿಧಾನಸಭಾ ಸದಸ್ಯತ್ವವನ್ನು ಅನರ್ಹಗೊಳಿಸಿದ ಸ್ಪೀಕರ್ (ಈಗ ಮಾಜಿ) ರಮೇಶ್ ಕುಮಾರ್ ಆದೇಶ ಪ್ರಶ್ನಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ 17 ಅನರ್ಹ ಶಾಸಕರು ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ಇಂದು ಸುಪ್ರೀಂ ಕೋರ್ಟಿನಲ್ಲಿ ನಡೆಯಲಿದೆ.

ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳಾದ ಎನ್.ವಿ. ರಮಣ, ಅಜಯ್ ರಸ್ತೋಗಿ ಮತ್ತು ಮೋಹನ್ ಶಾಂತನಗೌಡರ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಲಿದೆ‌. ಅನರ್ಹ ಶಾಸಕರ ಪರವಾಗಿ ಮಾಜಿ ಅಡ್ವೊಕೇಟ್ ಜನರಲ್ ಮುಕುಲ್ ರೋಹ್ಟಗಿ ವಾದ ಮಂಡನೆ ಮಾಡಲಿದ್ದಾರೆ.

ಸ್ಪೀಕರ್ ರಮೇಶ್ ಕುಮಾರ್ ಅವರು ಇದೇ ಜೂನ್ 25 ರಂದು ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಹಾಗೂ ಆರ್. ಶಂಕರ್ ಅವರನ್ನು ಮತ್ತು ಜುಲೈ 28 ರಂದು ಮತ್ತೆ 14 ಶಾಸಕರನ್ನು ಅನರ್ಹಗೊಳಿಸಿ ಆದೇಶಿಸಿದ್ದರು. ರಾಜೀನಾಮೆ ಸಲ್ಲಿಸಿದ್ದ ತಮ್ಮ ಶಾಸಕ ಸ್ಥಾನದ ಸದಸ್ಯತ್ವವನ್ನು ರದ್ದುಗೊಳಿಸಿ ಪಕ್ಷಾಂತರ ನಿಷೇಧ ಕಾಯ್ದೆಯಡಿ ನೀಡಿರುವ ಆದೇಶವನ್ನು ರದ್ದುಗೊಳಿಸಬೇಕೆಂದು ಈ ಅನರ್ಹಗೊಂಡ ಶಾಸಕರು ಆಗಸ್ಟ್ 1ರಂದು ಸುಪ್ರೀಂ ಮೆಟ್ಟಿಲೇರಿದ್ದರು.

ಮೊದಲಿಗೆ ಬಹಳ ಬೇಗ ತಮಗೆ ಸುಪ್ರೀಂ ಕೋರ್ಟಿನಲ್ಲಿ ನ್ಯಾಯಸಿಗುತ್ತೆ, ತಾವು ನೂತನ‌ ಸರ್ಕಾರದಲ್ಲಿ ಸಚಿವರಾಗಬಹುದು ಎಂದು ಕನಸು ಕಂಡಿದ್ದ ಅನರ್ಹ ಶಾಸಕರಿಗೆ 10 ದಿನವಾದರೂ ಶುಭ ಸುದ್ದಿ ಸಿಗಲಿಲ್ಲ. ಪ್ರಕರಣ ಇತ್ಯರ್ಥ ಆಗುವುದಿರಲಿ ಅರ್ಜಿ ವಿಚಾರಣೆಗೆ ಬರಲಿಲ್ಲ. ಇದರಿಂದ ಆತಂಕಗೊಂಡ ಅನರ್ಹ ಶಾಸಕರು ತಮ್ಮ ವಕೀಲರ ಮೂಲಕ ತಾವು ಸಲ್ಲಿಸಿರುವ ಅರ್ಜಿಯ ತುರ್ತು ವಿಚಾರಣೆ ನಡೆಸುವಂತೆ ಸುಪ್ರೀಂ ಕೋರ್ಟ್ ಮುಂದೆ ಮನವಿ ಮಾಡಿಕೊಂಡರು. ಆದರೆ ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ಎಂ.ಆರ್. ಷಾ ಮತ್ತು ಅಜಯ್ ರೋಸ್ತಗಿ ಅವರನ್ನೊಳಗೊಂಡ ಸುಪ್ರೀಂ ಕೋರ್ಟಿನ ತ್ರಿಸದಸ್ಯ ಪೀಠ ಅನರ್ಹಗೊಂಡ ತುರ್ತು ವಿಚಾರಣೆ ಬೇಡಿಕೆಯನ್ನು ನಿರಾಕರಿಸಿತು. 'ತುರ್ತು ವಿಚಾರಣೆ ಪಟ್ಟಿಗೆ ಅರ್ಜಿಯನ್ನು ಸೇರಿಸುವಂತೆ ರಿಜಿಸ್ಟ್ರಾರ್‌ ಅವರಿಗೆ ಮನವಿ ಸಲ್ಲಿಸಿಕೊಳ್ಳಿ, ರಿಜಿಸ್ಟ್ರಾರ್ ನಿಮ್ಮ‌ಅರ್ಜಿಯನ್ನು ತುರ್ತು ವಿಚಾರಣೆ ನಡೆಸಬೇಕೋ ಬೇಡವೋ ಎಂಬುದನ್ನು ಪರಿಶೀಲಿಸಲಿದೆ' ಎಂದು ಹೇಳಿತು.

ತಮ್ಮ ಕಕ್ಷಿದಾರರು ಸಲ್ಲಿಸಿರುವ ರಾಜೀನಾಮೆಯು ಸ್ವಯಂಪ್ರೇರಿತವಾಗಿದೆ ಮತ್ತು ಸರಿಯಾಗಿದೆ. ಆದರೆ ಸ್ಪೀಕರ್‌ ರಮೇಶ್‌ ಕುಮಾರ್‌ ಅವರು ನೀಡಿದ್ದ ನಿರ್ಧಾರವು ಸಂಪೂರ್ಣವಾಗಿ ಅಕ್ರಮ, ನಿರಂಕುಶ ಮತ್ತು ದುರದ್ದೇಶಪೂರಿತವಾಗಿದೆ. ಸಂವಿಧಾನದ 190ನೇ ವಿಧಿ ಮತ್ತು ಕರ್ನಾಟಕ ವಿಧಾನಸಭೆಯ ವಿಧಿ 202ರ ನೀತಿಯನ್ವಯ ಶಾಸಕರು ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಈ ಪ್ರಕಾರ ಯಾವುದೇ ಶಾಸಕನು ತಾನೇ ಸಹಿ ಮಾಡಿದ ರಾಜೀನಾಮೆ ಸಲ್ಲಿಸಬಹುದು ಮತ್ತು ಸ್ಪೀಕರ್ ರಾಜೀನಾಮೆಯ ಪ್ರಾಮಾಣಿಕತೆ ಮತ್ತು ಸ್ವಯಂಪ್ರೇರಿತತೆ ಬಗ್ಗೆಯಷ್ಟೇ ಪರಿಶೀಲಿಸಬೇಕಾಗುತ್ತದೆ ಎಂದು ಅರ್ಜಿಯಲ್ಲಿ ಅನರ್ಹ ಶಾಸಕರ ಪರ ನ್ಯಾಯವಾದಿಗಳು  ತಿಳಿಸಿದ್ದರು.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ವಿರುದ್ಧ ಅಸಮಾಧಾನ ಹೊಂದಿದ್ದ 18 ಶಾಸಕರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸತತ ಒಂದು ತಿಂಗಳ ಕಾಲ ಮುಂಬೈನಲ್ಲಿ ವಾಸ್ತವ್ಯ ಹೂಡುವ ಮೂಲಕ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಪತನವಾಗಲು ಕಾರಣರಾಗಿದ್ದರು. ಹೀಗಾಗಿ ಪಕ್ಷದ ವಿಪ್ ಉಲ್ಲಂಘಿಸಿದ ಇವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಜೆಡಿಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ (ಆಗ ಅವರು ಮುಖ್ಯಮಂತ್ರಿ) ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ದೂರು ನೀಡಿದ್ದರು. ಈ ದೂರುಗಳ ಆಧಾರದ ಮೇಲೆಯೇ ಶಾಸಕರನ್ನು ಅನರ್ಹಗೊಳಿಸಲಾಗಿತ್ತು.

ಇದಾದ ಬಳಿಕ ಮತ್ತೆ ಮೂರು ಬಾರಿ ಅನರ್ಹ ಶಾಸಕರು ತಮ್ಮ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸಬೇಕೆಂದು ಮನವಿ ಮಾಡಿಕೊಂಡಿದ್ದರು. ಮೂರು ಬಾರಿಯೂ ಸುಪ್ರೀಂ ಕೋರ್ಟ್ ನಿರಾಕರಿಸಿತ್ತು. ಇನ್ನೊಂದೆಡೆ ಅನರ್ಹ ಶಾಸಕರು ತಮ್ಮ ಕಾನೂನು ಹೋರಾಟಕ್ಕೆ ಬೆಂಬಲ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಕೇಂದ್ರ ಬಿಜೆಪಿ ನಾಯಕರ ಮೇಲೂ ಒತ್ತಡ ತಂದಿದ್ದರು. ಈಗ ವಿಚಾರಣೆಗೆ ಸುಪ್ರೀಂ ಕೋರ್ಟ್ ಕೈಗೆತ್ತಿಕೊಳ್ಳುತ್ತಿರುವುದರಿಂದ ಅನರ್ಹ ಶಾಸಕರು ಸ್ವಲ್ಪ ನಿರಾಳರಾಗಿದ್ದಾರೆ.

Trending News