ಅನರ್ಹರ ಪ್ರಕರಣದ ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್

ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳಾದ ಎನ್.ವಿ. ರಮಣ, ಸಂಜೀವ್ ಖನ್ನಾ ಮತ್ತು ಕೃಷ್ಣ ಮುರಾರಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಮೂರು ದಿನ ವಿಸ್ತೃತವಾಗಿ ವಿಚಾರಣೆ ನಡೆಸಿದ ಬಳಿಕ ತೀರ್ಪನ್ನು ಕಾಯ್ದಿರಿಸಿದೆ.

Last Updated : Oct 26, 2019, 08:33 AM IST
ಅನರ್ಹರ ಪ್ರಕರಣದ ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್ title=

ನವದೆಹಲಿ: ತಮ್ಮನ್ನು ವಿಧಾನಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿದ್ದ ಕರ್ನಾಟಕ ವಿಧಾನಸಭಾ ಅಧ್ಯಕ್ಷರ ಆದೇಶ ಪ್ರಶ್ನಿಸಿ 17 ಮಂದಿ ಕಾಂಗ್ರೆಸ್ ಮತ್ತು ಜೆಡಿಎಸ್ ಅನರ್ಹ ಶಾಸಕರ ಅರ್ಜಿಯನ್ನು ಸುದೀರ್ಘವಾಗಿ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿದೆ.

ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳಾದ ಎನ್.ವಿ. ರಮಣ, ಸಂಜೀವ್ ಖನ್ನಾ ಮತ್ತು ಕೃಷ್ಣ ಮುರಾರಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಮೂರು ದಿನ ವಿಸ್ತೃತವಾಗಿ ವಿಚಾರಣೆ ನಡೆಸಿದ ಬಳಿಕ ತೀರ್ಪನ್ನು ಕಾಯ್ದಿರಿಸಿದೆ. ಇದರಿಂದ ಸ್ಪೀಕರ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಅರ್ಜಿ ಸಲ್ಲಿಸಿದ್ದ ಅನರ್ಹ ಶಾಸಕರು ಆತಂಕದಲ್ಲಿ ದಿನಗಣನೆ ಮಾಡುವಂತಾಗಿದೆ.

ಸುಪ್ರೀಂ ಕೋರ್ಟಿಗೆ ನವೆಂಬರ್4ರವರೆಗೆ ರಜೆ ಇರುವುದರಿಂದ ಅನರ್ಹರ ಸ್ಥಿತಿ ದೀಪಾವಳಿ ಹಬ್ಬದ ಬಳಿಕ ನಿರ್ಧಾರವಾಗಲಿದೆ. ಶಾಸಕರನ್ನು ಅನರ್ಹಗೊಳಿಸಿದ್ದ 17 ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ಕೇಂದ್ರ ಚುನಾವಣಾ ಆಯೋಗ ಉಪ ಚುನಾವಣೆ ಘೋಷಣೆ ಮಾಡಿದೆ. ಆ ಕ್ಷೇತ್ರಗಳಿಗೆ ನವೆಂಬರ್ 11ರಂದು ನಾಮಪತ್ರ ಸಲ್ಲಿಕೆ ಆರಂಭವಾಗಿ ನವೆಂಬರ್ 18ಕ್ಕೆ ನಾಮಪತ್ರ ಸಲ್ಲಿಕೆಗೆ ಕಡೆದಿನವಾಗಿರುತ್ತದೆ. ಅಷ್ಟರೊಳಗಾಗಿ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಬೇಕು ಮತ್ತು ಅನರ್ಹ ಶಾಸಕರು ಚುನಾವಣೆಗೆ ಅಣಿಯಾಗಬೇಕು. ಈ ಹಿನ್ನೆಲೆಯಲ್ಲಿ ಈಗ ಅನರ್ಹ ಶಾಸಕರು ಹೆಚ್ಚು ಚಿಂತಾಕ್ರಾಂತರಾಗುವಂತಾಗಿದೆ.

ಕಾಂಗ್ರೆಸ್ ಪರ ವಕೀಲ ಕಪಿಲ್ ಸಿಬಲ್, ನಾವು ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಕ್ಷಮೆ ಕೇಳಿದಾಗ ನಾವು ಕೇಳುವ ಕ್ಷಮೆಯು ನೈಜವೇ ಎಂಬುದನ್ನು ನ್ಯಾಯಾಲಯ ಪರಿಶೀಲಿಸುವುದಿಲ್ಲವೇ? ಅದೇ ರೀತಿ ರಾಜೀನಾಮೆ ಕೂಡ ನೈಜವೇ ಎಂಬುದನ್ನು ಸ್ಪೀಕರ್ ಪರಿಗಣಿಸಬೇಕಾಗುತ್ತದೆ. ನೈಜತೆಯ ಬಗ್ಗೆ ಸ್ಪೀಕರ್ ಗೆ ತೃಪ್ತಿ ಆಗಬೇಕು. ರಾಜೀನಾಮೆ ಸ್ವೀಕಾರ ಮಾಡುವ ಮೊದಲು ಅದರ ಹಿಂದಿನ ಉದ್ದೇಶವನ್ನೂ ನೋಡಬೇಕು, ರಾಜೀನಾಮೆ ಕೊಟ್ಟಿರುವ ಹಿಂದಿನ ಒತ್ತಡವನ್ನು ಗಮನಿಸಬೇಕು‌. ಈ ಪ್ರಕರಣವನ್ನು ಸುಪ್ರೀಂಕೋರ್ಟ್ ವಿಚಾರಣೆ ಮಾಡಬಾರದು‌. ಕರ್ನಾಟಕ ಹೈಕೋರ್ಟಿಗೆ ವರ್ಗಾವಣೆ ಮಾಡಬೇಕು. ಆರ್ಟಿಕಲ್‌226 ಅಡಿ ಹೈಕೋರ್ಟಿಗೆ ಹೆಚ್ಚಿನ ವ್ಯಾಪ್ತಿಯಿದೆ. ಹೈಕೋರ್ಟ್ ವಿಚಾರಣೆ ನಡೆಸುವುದೇ ಹೆಚ್ಚು ಸೂಕ್ತ. ಇದು ಸುಪ್ರೀಂಕೋರ್ಟ್ ನಲ್ಲಿ ರಿಟ್ ಅರ್ಜಿ ಹಾಕಲು ಯೋಗ್ಯವಾದ ಪ್ರಕರಣವಲ್ಲ ಎಂದರು.

ಈ ವೇಳೆ ಮಧ್ಯಪ್ರವೇಶ ಮಾಡಿದ ನ್ಯಾಯಮೂರ್ತಿ ಎನ್ ವಿ ರಮಣ, 'ನಾವು ಪ್ರಕರಣದಲ್ಲಿ ಸ್ಪೀಕರ್ ಅನರ್ಹತೆಯ ಅವಧಿ ನಿಗದಿ ಪಡಿಸುವ ಅಧಿಕಾರ ಹೊಂದಿದ್ದಾರೆಯೇ ಎಂಬುದರ ಬಗ್ಗೆ ಪ್ರತ್ಯೇಕವಾಗಿ ಗಮನ ಹರಿಸುತ್ತಿದ್ದೇವೆ. ಅನರ್ಹತೆ ಅವಧಿ ನಿಗಧಿ ಮಾಡುವ ಅಧಿಕಾರ ಸೆಡ್ಯೂಲ್ 10ರಲ್ಲಿ‌ ನೀಡಲ್ಲ. ಅಲ್ಲವೇ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಕಪಿಲ್ ಸಿಬಲ್, ರಾಜೀನಾಮೆ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಸ್ಪೀಕರ್‌ ಅವರಿಗಿದೆ. ಸದನದ ಒಳಗಿನ ತಪ್ಪುಗಳನ್ನು ಸರಿಪಡಿಸುವ ಮತ್ತು ಶಿಕ್ಷಿಸುವ ಅಧಿಕಾರ ಕೂಡ ಅವರಿಗೆ ಇದೆ. ಈ ಬಗ್ಗೆ ಹೆಚ್ಚಿನ ವಿಚಾರಣೆ ಆಗಲಿ. ಪ್ರಕರಣವನ್ನು ಸಂವಿಧಾನಿಕ ಪೀಠಕ್ಕೆ ವರ್ಗಾಯಿಸಿ ಎಂದು ಹೇಳಿದರು.

ಬಳಿಕ ಕಾಂಗ್ರೆಸ್ ಪರ ವಾದ ಮುಂದುವರಿಸಿದ ದೇವ ದತ್ ಕಾಮತ್, ಶ್ರೀಮಂತ ಪಾಟೀಲ್, ಏಕಾಏಕಿ ಮುಂಬೈ ತೆರಳಿದ್ದಾರೆ. ಸರಿಯಾಗಿ ಪತ್ರ ಬರೆದಿಲ್ಲ, ವಿಪ್ ಉಲ್ಲಂಘನೆ ಮಾಡಿದ್ದಾರೆ. ಎದೆ ನೋವು ಎಂಬ ಕಾರಣ ನೀಡಿದ್ದಾರೆ. ಆದರೆ ಬೆಂಗಳೂರು, ಚೆನ್ನೈ ಮಾರ್ಗವಾಗಿ ಮುಂಬೈಗೆ ಹೋಗಿದ್ದಾರೆ. ಅವರನ್ನ ಬಿಜೆಪಿ ನಾಯಕರೇ ಕರೆಯ್ದೊದಿದ್ದಾರೆ. ಪಕ್ಷದ ವಿಪ್‌ ಉಲ್ಲಂಘನೆ ಹಿನ್ನೆಲೆಯಲ್ಲಿ ಅನರ್ಹ ಮಾಡಲಾಗಿದೆ ಎಂದು ಹೇಳಿದರು. ಡಾ. ಸುಧಾಕರ್ ವಾದಕ್ಕೆ ಪ್ರತಿ ವಾದ ಮಂಡಿಸಿದ ಕಾಮತ್, ಲೋಕಸಭೆ ಚುನಾವಣೆಯಲ್ಲಿ ಸುಧಾಕರ್ ಪಕ್ಷದ ವಿರುದ್ಧ ಹೇಳಿಕೆ‌ ನೀಡಿದ್ದಾರೆ. ವಿಪ್ ಉಲ್ಲಂಘನೆ ಆಗಿದೆ. ಇವರು ಅನರ್ಹ ಶಾಸಕರ ಗುಂಪು ನಲ್ಲಿದ್ದಾರೆ. ವಿಧಾನಸಭೆಗೆ ಬಂದಿಲ್ಲ. ವೀರಪ್ಪ ಮೊಯ್ಲಿ ಅವರಿಗೆ ಟಿಕೇಟ್ ನೀಡಬಾರದು ಎಂದು ಹೇಳಿಕೆ ನೀಡಿದ್ದರು ಎಂದು ಹೇಳಿದರು.

ಕೆಪಿಜೆಪಿಯಿಂದ ಆಯ್ಕೆಯಾಗಿದ್ದ ಆರ್. ಶಂಕರ್ ವಾದಕ್ಕೆ ಕಾಂಗ್ರೆಸ್ ಪರವಾಗಿ ವಕೀಲ‌ ಶಶಿಕಿರಣ್ ಶೆಟ್ಟಿ ಪ್ರತಿವಾದ ಮಂಡಿಸಿದರು. ಮಾಧ್ಯಮಗಳಿಗೆ ಕಾಂಗ್ರೆಸ್ ವಿಲೀನದ ಬಗ್ಗೆ ಶಂಕರ್ ಹೇಳಿದ್ದಾರೆ. ಆದರೆ ಸ್ಪೀಕರ್ ಕಚೇರಿಯಿಂದ ಯಾವುದೇ ಬುಲೆಟಿನ್ ಪ್ರಕಟಗೊಂಡಿಲ್ಲ. ಕಾಂಗ್ರೆಸ್ ಸೇರಿದ ಮೇಲೆ ಕೆಪಿಜೆಪಿ ಅಸ್ತಿತ್ವದಲ್ಲಿ ಇರಲ್ಲ. ಅದು ಕಾಂಗ್ರೆಸ್ ಜೊತೆ ಸೇರಿಕೊಂಡಿದೆ. ಯಾವುದೇ ಕಮ್ಯುನಿಕೇಟ್ ಮಾಡುವ ಅವಶ್ಯಕತೆ ಇಲ್ಲ. ನೂರಕ್ಕೆ ನೂರು ಕಾಂಗ್ರೆಸ್ ಜೊತೆಗೆ ಕೆಪಿಜೆಪಿ ವಿಲೀನವಾಗಿದೆ ಎಂದರು. ಪ್ರತಿವಾದ ಮಾಡಿದ ಶಂಕರ್ ಪರ ವಕೀಲ ವಿ ಗಿರಿ, ಹೌದು, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಿಗೆ ಪತ್ರ ಬರೆಯಲಾಗಿತ್ತು. ಕಾಂಗ್ರೆಸ್ ವಿಲೀನಕ್ಕೆ ಮನವಿ ಮಾಡಿದೆ. ವಿಧಾನಸಭೆಯಲ್ಲಿ ಸೀಟ್ ಅನ್ನು ಕೇಳಿತ್ತು. ಆದರೆ ಕಾಂಗ್ರೆಸ್ ಜೊತೆಗೆ ಪೂರ್ಣ ವಿಲೀನ ಆಗಿಲ್ಲ. ಸ್ಪೀಕರ್ ಕಚೇರಿಯಲ್ಲೂ ಯಾವುದೇ ದಾಖಲೆಗಳಿಲ್ಲ ಎಂದರು.

ಕೇಂದ್ರ ಚುನಾವಣಾ ಆಯೋಗದ ಪರ ರಾಕೇಶ್ ದ್ವಿವೇದಿ 'ಷೆಡ್ಯೂಲ್ 10ರ ಅಡಿ ಅನರ್ಹತೆ ನಿರ್ಧರಿಸಬಹುದು. ಶಾಸಕರಿಗೆ ಮಾತ್ರ ಷೆಡ್ಯೂಲ್ 10 ಅನ್ವಯವಾಗಲಿದೆ. ಅನರ್ಹ ಆದವರಿಗೆ ಇದು ಅನ್ವಯ ಆಗಲ್ಲ. ಶಾಸಕರು ಅನರ್ಹ ಆಗಿರೊದ್ರರಿಂದ ಸ್ಪೀಕರ್ ಚುನಾವಣೆ ಸ್ವರ್ಧೆ ಬಗ್ಗೆ ಹೇಳಲು ಬರುವುದಿಲ್ಲ. ಅನರ್ಹ ಶಾಸಕರ‌ ಮುಂದೇನು ಮಾಡಬೇಕು ಎಂಬುದು ಸ್ಪೀಕರ್ ವ್ಯಾಪ್ತಿಗೆ ಬರಲ್ಲ‌. ಸ್ಪೀಕರ್ ಸ್ವರ್ಧೆಗೆ ಸಮಯ ನಿಗಧಿ ಮಾಡುವಂತಿಲ್ಲ. ಕೇವಲ ಶಾಸಕತ್ವದಿಂದ ಅನರ್ಹ ಮಾಡಬಹುದಷ್ಟೇ. ಅನರ್ಹರಾದಮೇಲೆ ಶಾಸಕರಿಗೂ ಅನರ್ಹರಿಗೂ ಸಂಬಂಧ ಇಲ್ಲ. 191ರ ವಿಧಿ ಪ್ರಕಾರ ಶಾಸಕರು ಮತ್ತು ಅನರ್ಹ ಶಾಸಕರು ಅಧಿಕಾರ ಹೊಂದಬಹುದು ಎಂದು ಹೇಳಿದರು. ಈ ವೇಳೆ ಸ್ಪೀಕರ್ ಕಾರ್ಯವ್ಯಾಪ್ತಿ‌ ನಡಾವಳಿಗಳ ಬಗ್ಗೆ ದಾಖಲೆ ನೀಡುವಂತೆ ಕೋರ್ಟ್ ಸೂಚನೆ ನೀಡಿತು. 

ಬಳಿಕ ಅನರ್ಹ ಶಾಸಕರ ಪರ ವಕೀಲರಾದ ಮುಕುಲ್ ರೊಹ್ಟಗಿ, ವಿ. ಗಿರಿ, ಸುದರಂಗೆ ಕೆಲ ಹೊತ್ತು ವಾದ ಮಂಡಿಸಿದರು. ಹೆಚ್ಚುವರಿ ದಾಖಲೆಗಳನ್ನು ಎರಡು ದಿನದಲ್ಲಿ ಲಿಖಿತ ರೂಪದಲ್ಲಿ ನೀಡಿ ಎಂದು ಸೂಚಿಸಿದ ನ್ಯಾಯಪೀಠವು ತೀರ್ಪನ್ನು ಕಾಯ್ದರಿಸಿತು.

Trending News