ಬೆಂಗಳೂರು: ಉತ್ತರ ಕರ್ನಾಟಕ ಭಾಗವನ್ನು ಬಜೆಟ್'ನಲ್ಲಿ ಕಡೆಗಣಿಸಲಾಗಿದೆ. ಹೀಗಿರುವಾಗ ಪ್ರತ್ಯೇಕ ರಾಜ್ಯ ಒತ್ತಾಯಕ್ಕೆ ಏಕೆ ಬೆಂಬಲಿಸಬಾರದು ಎಂದು ಬಿಜೆಪಿ ಶಾಸಕ ಬಿ.ಶ್ರೀರಾಮುಲು ಪ್ರಶ್ನಿಸಿದ್ದಾರೆ.
ವಿಧಾನಸಭೆ ಅಧಿವೇಶನದಲ್ಲಿ ಮಾತನಾಡಿದ ಅವರು, ಉತ್ತರ ಕುಮಾರನಂತಿರುವ ಕುಮಾರಸ್ವಾಮಿಯವರು, ಚುನಾವಣಾ ವೇಳೆ ಸಾಕಷ್ಟು ಭರವಸೆಗಳನ್ನು ನೀಡಿ ಬಜೆಟ್ ಸಂದರ್ಭದಲ್ಲಿ ನೆಪ ಹೇಳುತ್ತಿದ್ದಾರೆ. ತಾವು ಕಾಂಗ್ರೆಸ್ನ ಮುಲಾಜಿನಲ್ಲಿದ್ದೇನೆ ಎಂದು ಹೇಳುತ್ತಿರುವ ಕುಮಾರಸ್ವಾಮಿ ಅವರು ರಾಜ್ಯದ ಜನತೆಗೆ ಮೋಸ ಮಾಡಿದ್ದಾರೆ. ಅಷ್ಟೇ ಅಲ್ಲ, ಯಾವ ಯಾವ ಜಿಲ್ಲೆಗಳಲ್ಲಿ ಜೆಡಿಎಸ್ ಜಯಗಳಿಸಿದೆಯೋ ಆ ಕ್ಷೇತ್ರಗಳಿಗೆ ಹೆಚ್ಚು ಯೋಜನೆ ಮಂಜೂರು ಮಾಡಿ, ಉತ್ತರ ಕರ್ನಾಟಕ ಭಾಗದ ಜನತೆ ವಿರುದ್ಧ ಸೇಡು ತೀರಿಸಿಕೊಂಡಿದ್ದಾರೆ ಎಂದು ಕಿಡಿಕಾರಿದರು.
ಈ ಹಿಂದೆ ಕರ್ನಾಟಕ ಏಕೀಕರಣಕ್ಕಾಗಿ ಉತ್ತರ ಕರ್ನಾಟಕದ ಜನತೆ ಸಾಕಷ್ಟು ಹೋರಾಟ ಮಾಡಿದ್ದರು. ಆದರೆ, ಸರ್ಕಾರದ ಅನಿರ್ಲಕ್ಷ್ಯದಿಂದಾಗಿ ಇಂದು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಕೇಳಿ ಬರುತ್ತಿದೆ. ನಿಜಕ್ಕೂ ಇದು ಬೇಸರ ತರಿಸುವಂತಹ ವಿಷಯ. ಕೆಲವೊಮ್ಮೆ ಈ ಬಜೆಟ್ ನೋಡಿದರೆ ಪ್ರತ್ಯೇಕ ರಾಜ್ಯದ ಕೂಗಿಗೆ ಬೆಂಬಲ ನೀಡಬೇಕು ಎಂದೆನಿಸುತ್ತದೆ ಎಂದು ಹೇಳಿದರು.