ನವದೆಹಲಿ: ಕರ್ನಾಟಕದಲ್ಲಿ ನಮಗೆ ಕುಡಿಯಲು ನೀರಿಲ್ಲದಿರುವುದರಿಂದ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕಾವೇರಿ ನೀರಿನ ವಿಷಯಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಮುಖ್ಯಮಂತ್ರಿ ಪಳನಿಸ್ವಾಮಿ ಬರೆದ ಪತ್ರಕ್ಕೆ ಇಂದು ದೆಹಲಿ ಪತ್ರಕರ್ತರು ಗಮನ ಸೆಳೆದಾಗ, ಅದಕ್ಕೆ ಉತ್ತರಿಸಿದ ಸಿದ್ದರಾಮಯ್ಯನವರು ನಮಗೆ ರಾಜ್ಯದಲ್ಲಿ ಕುಡಿಯಲು ನೀರಿಲ್ಲ ಆದ್ದರಿಂದ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲವೆಂದರು. ಮುಂದಿನ ತಿಂಗಳು ಹೊರಬೀಳುವ ಕಾವೇರಿ ನದಿ ತೀರ್ಪಿನ ಕುರಿತಾಗಿ ವಿಶ್ವಾಸ ವ್ಯಕ್ತಪಡಿಸಿದ ಅವರು ತೀರ್ಪು ನಮ್ಮ ಪರ ಬರುವ ನೀರಿಕ್ಷೆ ಇದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಹಾದಾಯಿ ವಿಷಯ ಪ್ರಸ್ತಾಪಿಸಿದ ಸಿದ್ದರಾಮಯ್ಯ ಅದನ್ನು ಚರ್ಚಿಸಲು ಶೀಘ್ರವೇ ಸರ್ವಪಕ್ಷಗಳ ಸಭೆ ಕರೆಯಲಾಗುವುದು ಎಂದು ತಿಳಿಸಿದರು. ಆ ಸಭೆಯಲ್ಲಿ ಎಲ್ಲರ ಅಭಿಪ್ರಾಯ ಪಡೆದು ಮುಂದಿನ ತೀರ್ಮಾನವನ್ನು ಸರ್ಕಾರ ಕೈಗೊಳ್ಳಲಿದೆ ಎಂದರು. ಇದು ಅಂತರಾಜ್ಯ ನದಿ ವಿವಾದವಾಗಿರುವುರಿಂದ ಪ್ರಧಾನಿ ಮೋದಿಯವರ ಮಧ್ಯಪ್ರವೇಶದಿಂದ ಮಾತ್ರ ಮಹಾದಾಯಿ ಸಮಸ್ಯೆಗೆ ಪರಿಹಾರ ದೊರೆಯಲಿದೆ. ಇದನ್ನು ರಾಜ್ಯ ಬಿಜೆಪಿ ನಾಯಕರು ಮೋದಿಯವರಿಗೆ ಮನವರಿಕೆ ಮಾಡಿ ಕೊಡಬೇಕಾಗಿದೆ ಎಂದು ತಿಳಿಸಿದರು.