ಮುಂದಿನ ಚುನಾವಣೆಗೂ ಕೂಡಾ ಸಿದ್ದರಾಮಯ್ಯ ಕ್ಯಾಪ್ಟನ್- ರಾಹುಲ್ ಗಾಂಧಿ

ಸಿದ್ದರಾಮಯ್ಯ ನೇತೃತ್ವದಲ್ಲೇ ಮುಂದಿನ ಚುನಾವಣೆ ನಡೆಯಲಿದೆ ಎಂದು ರಾಜ್ಯ ನಾಯಕರಿಗೆ ಸ್ಪಷ್ಟವಾಗಿ ತಿಳಿಸಿದ ಎಐಸಿಸಿ ಉಪಾಧ್ಯಕ್ಷ.

Last Updated : Oct 13, 2017, 09:34 AM IST
ಮುಂದಿನ ಚುನಾವಣೆಗೂ ಕೂಡಾ ಸಿದ್ದರಾಮಯ್ಯ ಕ್ಯಾಪ್ಟನ್- ರಾಹುಲ್ ಗಾಂಧಿ title=

ನವದೆಹಲಿ: ಕೆಪಿಸಿಸಿಯಲ್ಲಿ ಇತ್ತೀಚೆಗೆ ಎದ್ದಿದ್ದ ನಾಯಕತ್ವದ ಬಗೆಗಿನ ಸಣ್ಣ ಗೊಂದಲವನ್ನು ಎಐಸಿಸಿ ಉಪಾಧ್ಯಕ್ಷ  ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲೇ ಮುಂದಿನ ಚುನಾವಣೆ ನಡೆಯಲಿದೆ ಎಂದು ರಾಜ್ಯ ನಾಯಕರಿಗೆ ಸ್ಪಷ್ಟವಾಗಿ ತಿಳಿಸುವ ಮೂಲಕ ಗೊಂದಲಕ್ಕೆ ಇತಿಶ್ರೀ ಹಾಡಿದ್ದಾರೆ.

ಗುರುವಾರ ದೆಹಲಿಯ ತಮ್ಮ‌‌ ನಿವಾಸಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ಕಾರ್ಯಾಧ್ಯಕ್ಷರಾದ ದಿನೇಶ್ ಗುಂಡೂರಾವ್, ಎಸ್.‌ಆರ್. ಪಾಟೀಲ್, ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ರಾಜ್ಯದ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಆಸ್ಕರ್‌ ಫರ್ನಾಂಡೀಸ್, ವೀರಪ್ಪ ಮೊಯ್ಲಿ, ಸತೀಶ್ ಜಾರಕಿಹೊಳಿ, ಕೆ.ಎಚ್. ಮುನಿಯಪ್ಪ ಅವರನ್ನು ಕರೆಸಿಕೊಂಡು ಒಂದು ಗಂಟೆಗೂ ಹೆಚ್ಚು ಸಮಾಲೋಚನೆ ನಡೆಸಿದ ರಾಹುಲ್ ಗಾಂಧಿ ಅಂತಿಮವಾಗಿ ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಸ್ಪಷ್ಟವಾಗಿ ತಿಳಿಸಿದರು ಎಂಬ ಮಾಹಿತಿ ಖಚಿತ ಮೂಲಗಳಿಂದ ದೊರೆತಿದೆ.

ಚುನಾವಣೆಯ ಹೊಸ್ತಲಲ್ಲಿ ನಾಯಕತ್ವದ ಬಗೆಗೆ ಗೊಂದಲ ಆಗಬಾರದು. ವಿರೋಧಿಗಳಿಗೆ ಅದು ಪ್ರಮುಖ ಅಸ್ತ್ರವಾಗಲಿದೆ. ಒಗ್ಗಟ್ಟಾಗಿದ್ದರೆ ಖಂಡಿತಕ್ಕೂ ಗೆಲುವು ಸುಲಭವಾಗಲಿದೆ ಎಂದು ತಿಳಿಸಿದರೆಂಬುದಾಗಿಯೂ ತಿಳಿದು ಬಂದಿದೆ.

ರಾಜ್ಯದ ಕೆಲವೊಂದು ಜಿಲ್ಲೆಗಳಲ್ಲಿ ಪಕ್ಷದ ಅಧ್ಯಕ್ಷರ ಬದಲಾವಣೆ ಮತ್ತು ಕೆಪಿಸಿಪಿ ಪದಾಧಿಕಾರಿಗಳ ನೇಮಕ ಕಗ್ಗಂಟಾಗಿದೆ. ಈ ಬಗ್ಗೆಯೂ ಸಮಾಲೋಚನೆ ನಡೆಸಿದ ರಾಹುಲ್ ಗಾಂಧಿ, ಎಲ್ಲರೂ ಚರ್ಚಿಸಿ ಎಲ್ಲರಿಗೂ ಒಪ್ಪಿತವಾಗುವವರನ್ನು ನೇಮಕ ಮಾಡುವಂತೆ ಸೂಚಿಸಿದ್ದಾರೆ. 

ಚುನಾವಣಾ ತಯಾರಿ ಹಿನ್ನೆಲೆಯಲ್ಲಿ ಪಕ್ಷ ಮತ್ತು ಸರ್ಕಾರಗಳ ವತಿಯಿಂದ ರಾಜ್ಯಾದ್ಯಂತ ಎಲ್ಲಾ ವಿಧಾನಸಭಾ ಚುನಾವಣೆಗಳಲ್ಲೂ ಯಾತ್ರೆ ಮಾಡಿ ಸರ್ಕಾರದ ಸಾಧನೆಯನ್ನು ಬಿಂಬಿಸುವ ಕುರಿತಾಗಿ ನಿರ್ಧರಿಸಲಾಗಿದೆ. ಯಾತ್ರೆಯ ಸ್ವರೂಪ ನಿರ್ಧರಿಸುವ ಜವಾಬ್ದಾರಿಯನ್ನು ರಾಜ್ಯ ನಾಯಕರಿಗೆ ನೀಡಲಾಗಿದೆ. ಎಲ್ಲರ ನಡುವೆ ಸಮನ್ವಯ ಸಾಧಿಸುವ ಕೆಲಸವನ್ನು ರಾಜ್ಯ‌ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರಿಗೆ ವಹಿಸಿದ್ದಾರೆ ಎನ್ನಲಾಗಿದೆ.

ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಮಾತನಾಡಿ ನಾಯಕತ್ವದ ಬಗ್ಗೆ ಯಾವುದೇ ಗೊಂದಲವಿಲ್ಲ. ಸಿದ್ದರಾಮಯ್ಯ ನೇತೃತ್ವದಲ್ಲೇ ಚುನಾವಣೆ. ಜೊತೆಗೆ ನನ್ನ -ಸಿದ್ದರಾಮಯ್ಯ ನಡುವಿನ ಸಂಬಂಧ ಕೂಡ ಚೆನ್ನಾಗಿದೆ ಎಂದು ಹೇಳಿದರು.

ಸಭೆಯ ಬಳಿಕ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನನ್ನ ನೇತೃತ್ವದಲ್ಲಿ ಮುಂದಿನ ಚುನಾವಣೆ ನಡೆಯಲಿದೆ. ಇದರಲ್ಲಿ ಯಾವ ಗೊಂದಲವೂ ಇಲ್ಲ.‌ ಚುನಾವಣೆ ಬಳಿಕ ಸಿಎಂ ಯಾರು ಎಂದು ನಿರ್ಧಾರ ವಾಗಲಿದೆ. ಹೈಕಮಾಂಡ್ ಮುಂದಿನ ಮುಖ್ಯಮಂತ್ರಿ ಯಾರಾಗಬೇಕೆಂದು ನಿರ್ಧಾರ ಮಾಡಲಿದ್ದಾರೆ ಎಂದು ತಿಳಿಸಿದರು.

Trending News